ಸಂಸದನ ಹತ್ಯೆ ಉಗ್ರಗಾಮಿ ಕೃತ್ಯ : ಬ್ರಿಟನ್ ಘೋಷಣೆ

Update: 2021-10-16 05:07 GMT

ಇಂಗ್ಲೆಂಡ್ : ಸುಧೀರ್ಘ ಅವಧಿಯಿಂದ ಬ್ರಿಟನ್ ಸಂಸದರಾಗಿದ್ದ ಡೇವಿಡ್ ಅಮೆಸ್ ಅವರ ಹತ್ಯೆ ಉಗ್ರಗಾಮಿ ಕೃತ್ಯ ಎಂದು ಬ್ರಿಟಿಷ್ ಸರ್ಕಾರ ಪ್ರಕಟಿಸಿದೆ. ಕ್ಷೇತ್ರದ ಜನತೆಯ ಜತೆ ಸಭೆ ನಡೆಸುತ್ತಿದ್ದಾಗ ಅಮೆಸ್ ಅವರನ್ನು ಶುಕ್ರವಾರ ಇರಿದು ಹತ್ಯೆ ಮಾಡಲಾಗಿತ್ತು.

ಈ ಸಂಬಂಧ ಹೇಳಿಕೆ ನೀಡಿರುವ ಮೆಟ್ರೋಪಾಲಿಟನ್ ಪೊಲೀಸರು, ಆರಂಭಿಕ ತನಿಖೆಯಿಂದ ತಿಳಿದುಬಂದಿರುವಂತೆ ಕನ್ಸರ್ವೇಟಿವ್ ಪಾರ್ಟಿಗೆ ಸೇರಿದ ಅಮೆಸ್ ಅವರ ಹತ್ಯೆಗೆ ಉಗ್ರಗಾಮಿಗಳಿಂದ ಪ್ರೇರಣೆ ದೊರಕಿದೆ ಎನ್ನುವ ಪುರಾವೆ ಸಿಕ್ಕಿದೆ ಎಂದು ಹೇಳಿದ್ದಾರೆ.

ಪೂರ್ವ ಲಂಡನ್‌ನ ಲೀಗ್ ಆನ್ ಸಿ ನಗರದ ಮೆಥೊಡಿಸ್ಟ್ ಚರ್ಚ್‌ನಲ್ಲಿ ಶುಕ್ರವಾರ ಮಧ್ಯಾಹ್ನ 69 ವರ್ಷದ ಅಮೆಸ್ ಅವರ ಹತ್ಯೆ ನಡೆದಿತ್ತು. ವೈದ್ಯರು ಅವರನ್ನು ಉಳಿಸಲು ಮಾಡಿದ ಪ್ರಯತ್ನ ವಿಫಲವಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಇರಿಯಲು ಬಳಸಿದ ಚಾಕು ವಶಪಡಿಸಿಕೊಂಡಿದ್ದಾರೆ.

ಐದು ವರ್ಷದ ಹಿಂದೆ ಮತ್ತೊಬ್ಬ ಸಂಸದೆ ಜೋ ಕಾಕ್ಸ್ ಅವರನ್ನು ಹತ್ಯೆ ಮಾಡಿದ್ದರು. ಅಮೆಸ್ ಹತ್ಯೆ ಇದೀಗ ದೇಶಾದ್ಯಂತ ರಾಜಕೀಯ ವಲಯದಲ್ಲಿ ಕಳವಳಕ್ಕೆ ಕಾರಣವಾಗಿದೆ. ಬ್ರಿಟನ್ ರಾಜಕಾರಣಿಗಳಿಗೆ ಸಾಮಾನ್ಯವಾಗಿ ಪೊಲೀಸ್ ರಕ್ಷಣೆ ಇರುವುದಿಲ್ಲ. ಏತನ್ಮಧ್ಯೆ ಅಮೆಸ್ ಹತ್ಯೆಗೆ ವ್ಯಾಪಕ ಖಂಡನೆ ಮತ್ತು ಶೋಕ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News