ಛತ್ತೀಸಗಢದಲ್ಲಿ ಭಕ್ತರ ಮೇಲೆ ಹರಿದ ಕಾರು: ಪ್ರಕರಣಕ್ಕೆ ಕೋಮುಬಣ್ಣ ನೀಡಲು ಬಿಜೆಪಿ ಯತ್ನ

Update: 2021-10-16 11:58 GMT

ಹೊಸದಿಲ್ಲಿ: ಛತ್ತೀಸಗಢದ ಜಶ್ಪುರ್ ಎಂಬಲ್ಲಿ ವೇಗವಾಗಿ ಸಾಗುತ್ತಿದ್ದ ಎಸ್‍ಯುವಿ ಒಂದು ಧಾರ್ಮಿಕ ಮೆರವಣಿಗೆಯೊಂದರಲ್ಲಿ ಸಾಗುತ್ತಿದ್ದವರ ಮೇಲೆ ಹರಿದು ಒಬ್ಬ ವ್ಯಕ್ತಿ ಸಾವಿಗೀಡಾಗಿ ಹಲವರು ಗಾಯಗೊಂಡ ಘಟನೆಯ ನಂತರ ಅಲ್ಲಿನ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ  ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಇಂದು ಹಿಂದುಗಳ ಮೇಲೆ ದಾಳಿ ಎಂದು ಘಟನೆಗೆ ಮತೀಯ ಬಣ್ಣವನ್ನು ನೀಡುವ ಯತ್ನವನ್ನೂ ಬಿಜೆಪಿ ನಾಯಕರುಗಳಾದ ಅಮಿತ್ ಮಾಲವಿಯ ಮತ್ತು ಸುರೇಶ್ ನಖುವಾ ಮಾಡಿದ್ದಾರೆ. ಜೊತೆಗೆ ಸಾಮಾಜಿಕ ತಾಣದಾದ್ಯಂತ ಹಿಂದೂಗಳು ಅಪಾಯದಲ್ಲಿದ್ದಾರೆ ಎಂಬಂತೆ ಬಿಂಬಿಸಲಾಗಿತ್ತು ಎಂದು theprint.in ವರದಿ ಮಾಡಿದೆ.

"ವೇಗವಾಗಿ ಸಾಗುತ್ತಿದ್ದ ವಾಹನವೊಂದು ಛತ್ತೀಸಗಢದ ಹಿಂದು ಧಾರ್ಮಿಕ ಮೆರವಣಿಗೆಯಲ್ಲಿ ಸಾಗುತ್ತಿದ್ದವರ ಮೇಲೆ ಹರಿದಿದೆ. ಇದು  ಹಿಂದುಗಳ ಮೇಲಿನ ದಾಳಿಯ ಎರಡನೇ  ಘಟನೆ ಹಾಗೂ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಗಾಂಧಿಗಳಿಗೆ ಉತ್ತರ ಪ್ರದೇಶದಲ್ಲಿ ರಾಜಕೀಯ ನೆಲೆ ಕಲ್ಪಿಸುವುದರಲ್ಲಿ ವ್ಯಸ್ತರಾಗಿದ್ದಾರೆ" ಎಂದು ಬಿಜೆಪಿ ಐಟಿ ಘಟಕದ ಮುಖ್ಯಸ್ಥರಾದ ಅಮಿತ್ ಮಾಲವಿಯ ತಮ್ಮ ಟ್ವೀಟ್‍ನಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ವಕ್ತಾರ ಸುರೇಶ್ ನಖುವಾ ಕೂಡ ಇಂತಹುದೇ ಅರ್ಥ ನೀಡುವ ಟ್ವೀಟ್ ಮಾಡಿದ್ದಾರೆ.

ಆದರೆ ಛತ್ತೀಸಗಢ ಘಟನೆಯ ಹಿಂದೆ ಯಾವುದೇ ಮತೀಯ ಬಣ್ಣ ಇರಲು ಸಾಧ್ಯವಿಲ್ಲ ಎಂದು ವರದಿ ತಿಳಿಸಿದೆ. ಏಕೆಂದರೆ ಬಂಧಿತ ಇಬ್ಬರಾದ ಬಬ್ಲು ವಿಶ್ವಕರ್ಮ ಹಾಗೂ ಶಿಶುಪಾಲ್ ಸಾಹು ಇಬ್ಬರೂ ಹಿಂದುಗಳಾಗಿದ್ದಾರೆ. ಅವರು ಗಾಂಜಾ ಸಾಗಾಟ ನಡೆಸುತ್ತಿದ್ದರು ಹಾಗೂ  ಸಾಕ್ಷ್ಯ ನಾಶಪಡಿಸಲು ಅಪಘಾತ ಸಂಭವಿಸಿದ ಕೂಡಲೇ ಕಾರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ಪತ್ರಕರ್ತ ರಿತೇಶ್ ಮಿಶ್ರಾ ಅವರು ತಮ್ಮ ಟ್ವೀಟ್‍ನಲ್ಲಿ, ಈ ವಾಹನ ಮಹೀಂದ್ರ  ಖ್ವಾಂಟೊ  ಎಂಬುದನ್ನು ತಿಳಿಸಿದ್ದಾರೆ. ಅದರ ನಂಬರ್ ಪ್ಲೇಟ್ ಆಧಾರದಲ್ಲಿ ಶೋಧಿಸಿದಾಗ ವಾಹನವು ಕಾಮೇಶ್ವರ್ ಸಿಂಗ್ ಎಂಬವರ ಹೆಸರಿನಲ್ಲಿದೆ ಎಂದು ತಿಳಿಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News