ಕಾಂಗ್ರೆಸ್ ಅಧ್ಯಕ್ಷತೆಯನ್ನು ಮತ್ತೆ ವಹಿಸಿಕೊಳ್ಳುವ ಬಗ್ಗೆ ‘ಆಲೋಚಿಸಲು ’ರಾಹುಲ್ ಗಾಂಧಿ ಸಿದ್ಧ: ಮೂಲಗಳು

Update: 2021-10-16 14:31 GMT

ಹೊಸದಿಲ್ಲಿ,ಅ.16: ಪಂಜಾಬ್,‌ ರಾಜಸ್ಥಾನ ಮತ್ತು ಛತ್ತೀಸ್ಗಡ ಮುಖ್ಯಮಂತ್ರಿಗಳು ಸೇರಿದಂತೆ ಹಲವಾರು ಹಿರಿಯ ನಾಯಕರು ಶನಿವಾರ ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಅಧ್ಯಕ್ಷತೆಯನ್ನು ಮರಳಿ ವಹಿಸಿಕೊಳ್ಳುವಂತೆ ರಾಹುಲ್ ಗಾಂಧಿಯವರನ್ನು ಆಗ್ರಹಿಸಿದ್ದು,ಈ ಬಗ್ಗೆ ತಾನು ‘ಆಲೋಚಿಸುವುದಾಗಿ’ ಅವರು ಉತ್ತರಿಸಿದ್ದಾರೆ ಎಂದು ಬೆಳವಣಿಗೆಯನ್ನು ಹತ್ತಿರದಿಂದ ಬಲ್ಲ ಮೂಲಗಳು ತಿಳಿಸಿವೆ.

ಮುಂದಿನ ವರ್ಷದ ಸೆಪ್ಟಂಬರ್ನಲ್ಲಿ ನಡೆಯಲಿರುವ,ಪಕ್ಷದ ನೂತನ ಅಧ್ಯಕ್ಷರ ಆಯ್ಕೆ ಸೇರಿದಂತೆ ಪೂರ್ಣ ಪ್ರಮಾಣದ ಸಾಂಸ್ಥಿಕ ಚುನಾವಣೆಗಳ ವೇಳಾಪಟ್ಟಿಯನ್ನು ಹೊರತುಪಡಿಸಿ ಇತರ ಎಲ್ಲವನ್ನೂ ಸಭೆಯಲ್ಲಿ ಅಂತಿಮಗೊಳಿಸಲಾಗಿದೆ ಎಂದು ಈ ಮೂಲಗಳು ಹೇಳಿದವು.

19 ವರ್ಷಗಳ ಕಾಲ ಪಕ್ಷವನ್ನು ಮುನ್ನಡೆಸಿದ್ದ ಸೋನಿಯಾ ಗಾಂಧಿಯವರಿಂದ ನಾಯಕತ್ವದ ಚುಕ್ಕಾಣಿಯನ್ನು 2017ರಲ್ಲಿ ಪಡೆದುಕೊಂಡಿದ್ದ ರಾಹುಲ್ ಎರಡು ವರ್ಷಗಳ ಹಿಂದೆ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ನಿರಾಶಾದಾಯಕ ಪ್ರದರ್ಶನದ ಬಳಿಕ ಪಕ್ಷದ ಅಧ್ಯಕ್ಷತೆಗೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆ ಪಕ್ಷವನ್ನು ನಾಯಕತ್ವ ಬಿಕ್ಕಟ್ಟಿಗೆ ಸಿಲುಕಿಸಿದ್ದು,ಅದಿನ್ನೂ ಈ ಬಿಕ್ಕಟ್ಟಿನಿಂದ ಹೊರಬಂದಿಲ್ಲ. ಈ ನಡುವೆ ಸೋನಿಯಾ ಗಾಂಧಿ ಪಕ್ಷದ ಮಧ್ಯಂತರ ಅಧ್ಯಕ್ಷೆಯಾಗಿ ಹೊಣೆಯನ್ನು ಹೊತ್ತುಕೊಂಡಿದ್ದಾರೆ.

2019ರಲ್ಲಿ ಪಕ್ಷದ ಅಧ್ಯಕ್ಷತೆಗೆ ರಾಜೀನಾಮೆ ನೀಡಿದ್ದ ಸಂದರ್ಭದಲ್ಲಿ ನೆಹರು-ಗಾಂಧಿ ಕುಟುಂಬಕ್ಕೆ ಹೊರತಾದ ವ್ಯಕ್ತಿಯೋರ್ವರು ಪಕ್ಷವನ್ನು ಮುನ್ನಡೆಸಬೇಕು ಎಂದು ಕರೆಯನ್ನು ನೀಡಿದ್ದ ರಾಹುಲ್,ಹಲವರ ಮನವಿಗಳ ಹೊರತಾಗಿಯೂ ತನ್ನ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿದ್ದರು. ಪಕ್ಷದ ಅಧ್ಯಕ್ಷತೆಗೆ ಮರಳುವಂತೆ ಕಾಂಗ್ರೆಸ್ ನಾಯಕರು ಅವರನ್ನು ಆಗಾಗ್ಗೆ ಆಗ್ರಹಿಸುತ್ತಲೇ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News