ಜಮ್ಮು-ಕಾಶ್ಮೀರ:ಉಗ್ರರ ದಾಳಿಗೆ ಬಿಹಾರದ ಬೀದಿಬದಿ ವ್ಯಾಪಾರಿ,ಉತ್ತರಪ್ರದೇಶದ ಕಾರ್ಮಿಕ ಬಲಿ

Update: 2021-10-16 16:51 GMT

ಶ್ರೀನಗರ,ಅ.16: ಜಮ್ಮು-ಕಾಶ್ಮೀರದಲ್ಲಿ ಶನಿವಾರ ಬಿಹಾರದ ಗೋಲಗಪ್ಪಾ ವ್ಯಾಪಾರಿ ಮತ್ತು ಉತ್ತರ ಪ್ರದೇಶದ ಓರ್ವ ಬಡಗಿಯನ್ನು ಭಯೋತ್ಪಾದಕರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಇದರೊಂದಿಗೆ ಕಳೆದೆರಡು ವಾರಗಳಲ್ಲಿ ಭಯೋತ್ಪಾದಕರಿಗೆ ಬಲಿಯಾದ ನಾಗರಿಕರ ಸಂಖ್ಯೆ ಒಂಭತ್ತಕ್ಕೇರಿದೆ.
ಶ್ರೀನಗರದಲ್ಲಿ ಬಿಹಾರದ ಬಂಕಾ ನಿವಾಸಿ,ಬೀದಿ ಬದಿ ಗೋಲ್ಗಪ್ಪಾ ಮಾರುತ್ತಿದ್ದ ಅರಬಿಂದ ಕುಮಾರ ಶಾನನ್ನು ಹತ್ತಿರದಿಂದ ಗುಂಡಿಟ್ಟು ಕೊಲ್ಲಲಾಗಿದ್ದರೆ ಪುಲ್ವಾಮಾದಲ್ಲಿ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಉತ್ತರ ಪ್ರದೇಶದ ಸಹಾರನಪುರ ಮೂಲದ ಸಗೀರ್ ಅಹ್ಮದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ಟ್ವೀಟಿಸಿದ್ದಾರೆ.


ಕಾಶ್ಮೀರದಲ್ಲಿ ನಾಗರಿಕರ ಸರಣಿ ಹತ್ಯೆಗಳು ಕಳೆದೊಂದು ವಾರದಲ್ಲಿ ತಾತ್ಕಾಲಿಕ ಶಿಬಿರಗಳಿಂದ ಹಲವಾರು ಕಾಶ್ಮೀರಿ ಪಂಡಿತರ ವಲಸೆಗೆ ಕಾರಣವಾಗಿವೆ. ಕಾಶ್ಮೀರಿ ವಲಸಿಗರಿಗಾಗಿ ಪ್ರಧಾನ ಮಂತ್ರಿಗಳ ವಿಶೇಷ ಉದ್ಯೋಗ ಯೋಜನೆಯಡಿ ನೇಮಕಗೊಂಡು ಕಣಿವೆಗೆ ಮರಳಿದ್ದ ಹಲವಾರು ಸರಕಾರಿ ನೌಕರರು ತಮ್ಮ ಕುಟುಂಬಗಳೊಂದಿಗೆ ಸದ್ದಿಲ್ಲದೆ ನಿವಾಸಗಳನ್ನು ತೊರೆದಿದ್ದಾರೆ.


‘ಬೀದಿಬದಿ ವ್ಯಾಪಾರಿ ಅರಬಿಂದ ಕುಮಾರ್ ಹತ್ಯೆಯನ್ನು ಬಲವಾಗಿ ಖಂಡಿಸುತ್ತೇನೆ. ಇದು ನಾಗರಿಕರನ್ನು ಹೀಗೆ ಗುರಿಯಾಗಿಸಿಕೊಂಡಿರುವ ಇನ್ನೊಂದು ಪ್ರಕರಣವಾಗಿದೆ. ಹೊಟ್ಟೆಪಾಡಿಗಾಗಿ ಶ್ರೀನಗರಕ್ಕೆ ಬಂದಿದ್ದ ಕುಮಾರ್ ಹತ್ಯೆ ಖಂಡನೀಯವಾಗಿದೆ ’ಎಂದು ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಟ್ವೀಟಿಸಿದ್ದಾರೆ.
‘ಇದು ಶುದ್ಧ ಭಯೋತ್ಪಾದನೆ. ಮತ್ತೊಮ್ಮೆ ಸ್ಥಳೀಯನಲ್ಲದ ಬೀದಿ ಬದಿ ವ್ಯಾಪಾರಿಯನ್ನು ಈದಗಾ ಬಳಿ ಗುಂಡಿಟ್ಟು ಕೊಲ್ಲಲಾಗಿದೆ. ಎಂತಹ ನಾಚಿಕೇಡು? ಅತ್ಯಂತ ಹೇಡಿ ಕೃತ್ಯ ’ಎಂದು ಜಮ್ಮು-ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ ನಾಯಕ ಸಜ್ಜಾದ್ ಲೋನೆ ಟ್ವಿಟಿಸಿದ್ದಾರೆ.
 ‌
ಕಳೆದೆರಡು ವಾರಗಳಲ್ಲಿ ಹತ್ಯೆಯಾದ ಒಂಭತ್ತು ಜನರ ಪೈಕಿ ಐವರು ಮುಸ್ಲಿಮೇತರರಾಗಿದ್ದು, ಇದು ಹಿಂದುಗಳು ಮತ್ತು ಹೊರಗಿನ ವ್ಯಕ್ತಿಗಳು ದಾಳಿಕೋರರ ಗುರಿಯಾಗಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ಬೆಟ್ಟುಮಾಡುತ್ತಿದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
 
ಪೊಲೀಸರು ವ್ಯಾಪಕ ದಾಳಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಜಮ್ಮು-ಕಾಶ್ಮೀರದಾದ್ಯಂತ ಪ್ರತ್ಯೇಕತವಾದಿಗಳೊಂದಿಗೆ ನಂಟು ಹೊಂದಿರುವ ಶಂಕೆಯಲ್ಲಿ ಸುಮಾರು 900 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳನ್ನೂ ಪೊಲೀಸರು ತೀವ್ರಗೊಳಿಸಿದ್ದು, ಕಳೆದೊಂದು ವಾರದಲ್ಲಿ 13 ಭಯೋತ್ಪಾದಕರನ್ನು ಕೊಂದಿದ್ದಾರೆ . ಶ್ರೀನಗರದಲ್ಲಿ ಕಳೆದ 24 ಗಂಟೆಗಳಲ್ಲಿ ಐವರ ಪೈಕಿ ಮೂವರು ಭಯೋತ್ಪಾದಕರನ್ನು ಕೊಂದಿದ್ದೇವೆ ಎಂದು ಐಜಿಪಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News