ಇಂಧನ ಬೆಲೆಗಳಲ್ಲಿ ಮತ್ತೆ ಏರಿಕೆ: ಪೆಟ್ರೋಲ್ ದರ ಈಗ ವಿಮಾನ ಇಂಧನಕ್ಕಿಂತ ಶೇ.33ರಷ್ಟು ಅಧಿಕ!

Update: 2021-10-17 17:38 GMT

ಹೊಸದಿಲ್ಲಿ,ಅ.17: ಸತತ ನಾಲ್ಕನೇ ದಿನವಾದ ರವಿವಾರವೂ ದೇಶಾದ್ಯಂತ ಇಂಧನ ಬೆಲೆಗಳನ್ನು ಹೆಚ್ಚಿಸಲಾಗಿದೆ. ಜಾಗತಿಕ ಕಚ್ಚಾ ತೈಲಬೆಲೆಗಳಲ್ಲಿ ಏರಿಕೆಯಾಗಿರುವುದು ಈ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಹೇಳಿಕೊಂಡಿವೆ. ದಿಲ್ಲಿಯಲ್ಲಿ ಪ್ರತಿ ಲೀ.ಪೆಟ್ರೋಲ್ ಮತ್ತು ಡೀಸೆಲ್ ಗೆ ತಲಾ 35 ಪೈಸೆಗಳಷ್ಟು ಹೆಚ್ಚಿಸಲಾಗಿದ್ದು,ಅವುಗಳ ಬೆಲೆ ಈಗ ಪ್ರತಿ ಲೀ.ಗೆ ಅನುಕ್ರಮವಾಗಿ 105.84 ರೂ. ಮತ್ತು 94.57 ರೂ.ಆಗಿವೆ.

ಕುತೂಹಲಕಾರಿ ವಿಷಯವೆಂದರೆ ಈಗ ಪೆಟ್ರೋಲ್ ಬೆಲೆಯು ವಿಮಾನಯಾನ ಸಂಸ್ಥೆಗಳಿಗೆ ಇಂಧನ ಮಾರಾಟದ ಬೆಲೆಗಿಂತ ಶೇ.33ರಷ್ಟು ಹೆಚ್ಚು ದುಬಾರಿಯಾಗಿದೆ. ದಿಲ್ಲಿಯಲ್ಲಿ ವಿಮಾನ ಇಂಧನವನ್ನು ಪ್ರತಿ ಸಾವಿರ ಲೀ.ಗೆ 79,020.16 ರೂ.ದರದಲ್ಲಿ ಅಥವಾ ಪ್ರತಿ ಲೀ.ಗೆ 79 ರೂ.ಗಳಂತೆ ಮಾರಾಟ ಮಾಡಲಾಗುತ್ತಿದೆ.

 ಮುಂಬೈನಲ್ಲಿ ಪ್ರತಿ ಲೀ.ಪೆಟ್ರೋಲ್ಗೆ 34 ಪೈಸೆ ಮತ್ತು ಡೀಸೆಲ್ಗೆ 37 ಪೈಸೆಗಳಷ್ಟು ಹೆಚ್ಚಿಸಲಾಗಿದ್ದು,ಅವುಗಳ ಬೆಲೆ ಈಗ ಪ್ರತಿ ಲೀ.ಗೆ ಅನುಕ್ರಮವಾಗಿ 111.77 ರೂ. ಮತ್ತು 102.52 ರೂ.ಆಗಿವೆ.   ಚೆನ್ನೈನಲ್ಲಿ ಪ್ರತಿ ಲೀ.ಪೆಟ್ರೋಲ್ಗೆ 31 ಪೈಸೆ ಹೆಚ್ಚಿಸಲಾಗಿದ್ದು,ಅದೀಗ ಪ್ರತಿ ಲೀ.ಗೆ 103.01 ರೂ.ಆಗಿದೆ. ಆದಾಗ್ಯೂ ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಕಡಿಮೆಯೇ ಇದೆ. ನಾಲ್ಕು ಮಹಾನಗರಗಳ ಪೈಕಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಅತ್ಯಂತ ಅಧಿಕವಾಗಿದೆ. ವೌಲ್ಯವರ್ಧಿತ ತೆರಿಗೆ (ವ್ಯಾಟ್)ಯಿಂದಾಗಿ ವಿವಿಧ ರಾಜ್ಯಗಳಲ್ಲಿ ಇಂಧನ ಬೆಲೆಗಳು ಭಿನ್ನವಾಗಿರುತ್ತವೆ.

 ಸರಕಾರಿ ತೈಲ ಕಂಪನಿಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲದ ಬೆಲೆಗಳು ಹಾಗೂ ರೂಪಾಯಿ-ಡಾಲರ್ ವಿನಿಮಯ ದರಕ್ಕೆ ಅನುಗುಣವಾಗಿ ಪ್ರತಿದಿನ ದೇಶಿಯ ಇಂಧನ ದರಗಳನ್ನು ಪರಿಷ್ಕರಿಸುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಾವುದೇ ಬದಲಾವಣೆಯು ಬೆಳಿಗ್ಗೆ ಆರು ಗಂಟೆಯಿಂದ ಅನುಷ್ಠಾನಗೊಳ್ಳುತ್ತದೆ.

ಶುಕ್ರವಾರ ಜಾಗತಿಕ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲಗಳು ಮೂರು ವರ್ಷಗಳ ಅಧಿಕತಮವಾದ ಪ್ರತಿ ಬ್ಯಾರೆಲ್ಗೆ 85 ಡಾ.ಗೆ ಮೇಲೆಯೇ ಮುಕ್ತಾಯಗೊಂಡಿದ್ದವು. ಕೋವಿಡ್ ನಿರ್ಬಂಧಗಳ ಸಡಿಲಿಕೆಯಿಂದಾಗಿ ತೈಲ ಬೇಡಿಕೆ ಹೆಚ್ಚಿರುವುದರಿಂದ ಮುಂದಿನ ಕೆಲವು ತಿಂಗಳು ಪೂರೈಕೆಯಲ್ಲಿ ಕೊರತೆಯಾಗಬಹುದು ಎಂಬ ಮುನ್ನಂದಾಜು ಜಾಗತಿಕ ಮಾರುಕಟ್ಟೆಗಳಲ್ಲಿ ಕಚ್ಚಾತೈಲ ದರಗಳ ಹೆಚ್ಚಳಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News