ಛತ್ತೀಸ್ ಗಡದಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಖಾಸಗಿ ಬಸ್ ಬೆಂಕಿಗಾಹುತಿ
Update: 2021-10-18 11:39 IST
ಜನಗಾಂವ್: ಛತ್ತೀಸ್ ಗಡದಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಖಾಸಗಿ ಬಸ್ ರಾಷ್ಟ್ರೀಯ ಹೆದ್ದಾರಿ -163 (ವಾರಂಗಲ್-ಹೈದರಾಬಾದ್) ನಲ್ಲಿ ತೆಲಂಗಾಣದ ಜಂಗಾವ್ ಜಿಲ್ಲೆಯ ರಘುನಾಥಪಲ್ಲಿ ಗ್ರಾಮ ಹೊರವಲಯದಲ್ಲಿ ಸೋಮವಾರ ಮುಂಜಾನೆ ಬೆಂಕಿ ಹೊತ್ತಿಕೊಂಡು ಭಸ್ಮವಾಗಿದೆ. ಚಾಲಕ ಸೇರಿದಂತೆ 26 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ ನಿಧಾನವಾದಾಗ ಚಾಲಕನು ಸಮಸ್ಯೆಯನ್ನು ಗ್ರಹಿಸಿದನು ಹಾಗೂ ಇಂಜಿನ್‌ನಿಂದ ಹೊಗೆ ಬರುವುದನ್ನು ಗಮನಿಸಿದನು. ತಕ್ಷಣವೇ ಆತ ಎಲ್ಲಾ 26 ಪ್ರಯಾಣಿಕರನ್ನು ತಮ್ಮ ಲಗೇಜ್ ಗಳೊಂದಿಗೆ ಕೆಳಗಿಳಿಯುವಂತೆ ತಿಳಿಸಿದನು.
ಬಸ್ ಖಾಲಿಯಾದ ತಕ್ಷಣ ಅದು ಬೆಂಕಿಗೆ ಆಹುತಿಯಾಯಿತು.
ಮಾಧ್ಯಮದವರೊಂದಿಗೆ ಮಾತನಾಡಿದ ರಘುನಾಥಪಲ್ಲಿ ಸಬ್ ಇನ್ಸ್‌ಪೆಕ್ಟರ್ (ಎಸ್‌ಐ) ರಾಜೇಶ್ "ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ನಾವು ಶಂಕಿಸಿದ್ದೇವೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಪ್ರಕರಣ ದಾಖಲಾಗಿದೆ ಮತ್ತು ತನಿಖೆ ನಡೆಯುತ್ತಿದೆ" ಎಂದು ಹೇಳಿದರು.