ತೈಲ ಬೆಲೆ ಏರಿಕೆಗೆ ತೆರಿಗೆ ಹೆಚ್ಚಳವೇ ಕಾರಣ

Update: 2021-10-19 10:10 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತದ ಬಹುತೇಕ ಎಲ್ಲ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ ರೂ.100 ದಾಟಿದೆ. ರವಿವಾರ ಮೋಟಾರು ವಾಹನಗಳಿಗೆ ಬಳಸುವ ಇಂಧನದ ಬೆಲೆ ವಿಮಾನ ಹಾರಾಟಕ್ಕೆ ಬಳಸುವ ಇಂಧನ (ಎವಿಯೇಶನ್ ಟರ್ಬೈನ್ ಫುಯೆಲ್-ಎಟಿಎಫ್)ಕ್ಕಿಂತ ಜಾಸ್ತಿಯಾಗಿದೆ. ರಾಜಧಾನಿ ದಿಲ್ಲಿಯಲ್ಲಿ ಒಂದು ಲೀಟರ್ ವಿಮಾನ ಇಂಧನದ ಬೆಲೆ ರೂ. 79 ಇದೆ. ಆದರೆ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ. 105.84 ತಲುಪಿದೆ. ಕರ್ನಾಟಕ ಸೇರಿದಂತೆ ಭಾರತದ ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ನೂರರ ಗಡಿಯನ್ನು ದಾಟಿದೆ. ಇದರ ಪರಿಣಾಮವಾಗಿ ಜನಸಾಮಾನ್ಯರ ಮತ್ತು ಮಧ್ಯಮ ವರ್ಗದವರ ದೈನಂದಿನ ಖರ್ಚು ವೆಚ್ಚಗಳು ಹೆಚ್ಚಾಗಿವೆ. ತರಕಾರಿ, ಅಕ್ಕಿ, ಗೋಧಿ, ರಾಗಿ, ಜೋಳ, ಖಾದ್ಯ ತೈಲ ಸೇರಿದಂತೆ ಎಲ್ಲ ಜೀವನಾವಶ್ಯಕ ಪದಾರ್ಥಗಳ ಬೆಲೆಗಳು ಶರವೇಗದಲ್ಲಿ ಮೇಲೇರುತ್ತಲೇ ಇವೆ. ಹಸಿವಿನ ಸೂಚ್ಯಂಕದಲ್ಲಿ ದಾಖಲೆ ಸ್ಥಾಪಿಸಿದ ನಮ್ಮ ಒಕ್ಕೂಟ ಸರಕಾರ ಬೆಲೆ ಏರಿಕೆಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಸಾಮಾನ್ಯ ಜನ ನೆಮ್ಮದಿಯಿಂದ ಬದುಕಲಾಗದಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ.

ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಅತ್ಯಂತ ಕಡಿಮೆಯಾಗಿದ್ದರೂ ಆಂತರಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡಿಗೆ ಅನಿಲಗಳ ಬೆಲೆ ಕಡಿಮೆಯಾಗದಿರುವುದಕ್ಕೆ ನಿಜವಾದ ಕಾರಣ ಏನೆಂದರೆ ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳು ಹಾಕಿರುವ ವಿಪರೀತ ತೆರಿಗೆಯಲ್ಲದೆ ಬೇರೇನೂ ಅಲ್ಲ. ಮೊದಲು ಅಂತರ್‌ರಾಷ್ಟ್ರೀಯ ಮಾರುಕಟ್ಟೆಯ ತೈಲ ಬೆಲೆ ಹೆಚ್ಚಳದ ಸುಳ್ಳು ನೆಪ ಹೇಳುತ್ತಿದ್ದ ಇಂಧನ ಸಚಿವರು ಈಗ ತೆರಿಗೆ ಹೆಚ್ಚಳವನ್ನು ಒಪ್ಪಿಕೊಂಡಿದ್ದಾರೆ. ಆದರೆ ದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಈ ಇಂಧನ ಬೆಲೆ ಹೆಚ್ಚಳ ಅನಿವಾರ್ಯ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರ ಈ ಸುಳ್ಳುಗಳನ್ನು ನಂಬಿ ಸಮರ್ಥಿಸುವ, ತಲೆಯಲ್ಲಿ ಕೋಮುವಾದದ ಸಗಣಿಯನ್ನು ಬಿಟ್ಟು ಇನ್ನೇನನ್ನೂ ತುಂಬಿಕೊಳ್ಳದ ಬಹು ದೊಡ್ಡ ಭಕ್ತ ಸಮೂಹ ಇವರಿಗಿರುವುದರಿಂದ ಇಂಧನದ ಮೇಲಿನ ತೆರಿಗೆ ಕಡಿತ ಮಾಡಲು ಇವರು ತಯಾರಿಲ್ಲ. ಹೀಗಾಗಿ ಎಲ್ಲ ಜೀವನಾವಶ್ಯಕ ಪದಾರ್ಥಗಳ ಬೆಲೆ ಏರಿಕೆ ಮಾತ್ರವಲ್ಲ ಇದರಿಂದ ಉತ್ಪಾದನಾ ವಲಯಕ್ಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಚೇತರಿಸಲಾಗದ ಪೆಟ್ಟು ಬಿದ್ದಿದೆ.

 ಪೆಟ್ರೋಲ್, ಡೀಸೆಲ್ ಹಾಗೂ ಇತರ ಪೆಟ್ರೊಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಇಂಧನ ಬೆಲೆ ಕಡಿಮೆಯಾಗುತ್ತದೆ. ಅಂದರೆ ಶೇಕಡಾ 28ರಷ್ಟಕ್ಕಿಂತ ಹೆಚ್ಚು ತೆರಿಗೆ ವಿಧಿಸಲು ಅವಕಾಶ ಇರುವುದಿಲ್ಲ. ಪೆಟ್ರೋಲ್, ಡೀಸೆಲ್ ಮತ್ತು ಅಡಿಗೆ ಅನಿಲಗಳ ಮೇಲಿನ ತೆರಿಗೆ ಒಂದೇ ಪ್ರಮಾಣದಲ್ಲಿ ಇರುತ್ತದೆ. ಆದರೆ ಇದನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಇಷ್ಟವಿಲ್ಲ. ಇತ್ತೀಚೆಗೆ ಉತ್ತರ ಪ್ರದೇಶದ ಲಕ್ನೊದಲ್ಲಿ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಸಭೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಕಾಲ ಪಕ್ವವಾಗಿಲ್ಲ ಎಂದು ಅಭಿಪ್ರಾಯ ಪಟ್ಟಿದೆ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ವ್ಯವಸ್ಥೆಯನ್ನು ಈಗಿರುವಂತೆ ಮುಂದುವರಿಸಿಕೊಂಡು ಹೋಗಲು ತೀರ್ಮಾನಿಸಿದೆ. ಕೋವಿಡ್ ಮತ್ತು ಲಾಕ್‌ಡೌನ್ ಕಾರಣದಿಂದಾಗಿ ಸರಕಾರದ ವರಮಾನದಲ್ಲಿ ಉಂಟಾಗಿರುವ ಕೊರತೆಯನ್ನು ತುಂಬಿಕೊಳ್ಳಲು ಹಾಗೂ ವರಮಾನ ಹೆಚ್ಚಿಸಿಕೊಳ್ಳಲು ಈ ತೆರಿಗೆ ಹೆಚ್ಚಳ ಅನಿವಾರ್ಯ ಎಂದು ಸಮರ್ಥಿಸಿಕೊಳ್ಳಲಾಗುತ್ತಿದೆ.

ಪೆಟ್ರೋಲ್, ಡೀಸೆಲ್ ಮತ್ತು ಮದ್ಯಗಳು ರಾಜ್ಯ ಸರಕಾರಗಳ ಪ್ರಮುಖ ಆದಾಯ ಮೂಲಗಳಾಗಿವೆ. ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದ ನಂತರವೂ ಈ ಉತ್ಪನ್ನಗಳನ್ನು ಅದರ ವ್ಯಾಪ್ತಿಯಿಂದ ಹೊರಗೆ ಇರಿಸಲಾಗಿದೆ. ಇವುಗಳನ್ನು ಜಿಎಸ್‌ಟಿ ವ್ಯಾಪ್ತಿಯಲ್ಲಿ ತಂದರೆ ರಾಜ್ಯಗಳ ವರಮಾನದ ಮೂಲಗಳಿಗೆ ಹೊಡೆತ ಬೀಳುತ್ತದೆ. ಹೀಗಾಗಿ ರಾಜ್ಯಗಳು ಈ ಪ್ರಸ್ತಾವನೆಯನ್ನು ವಿರೋಧಿಸುತ್ತಲೇ ಬಂದಿವೆ. ಇದರಿಂದ ಒಂದು ಅಂಶ ಸ್ಪಷ್ಟವಾಗುತ್ತದೆ, ಅದು ಯಾವುದೆಂದರೆ ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳು ತೈಲೋತ್ಪನ್ನಗಳ ಮೇಲಿನ ತೆರಿಗೆ ಕಡಿತ ಮಾಡದಿದ್ದರೆ ಇಂಧನ ಬೆಲೆ ಇಳಿಕೆ ಸಾಧ್ಯವಿಲ್ಲ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದರೂ ಕೂಡ ಅದರ ಪ್ರಯೋಜನ ಜನಸಾಮಾನ್ಯರಿಗೆ, ಮಧ್ಯಮ ವರ್ಗದವರಿಗೆ ಸಿಗದೆ ಇರುವುದಕ್ಕೆ ಒಕ್ಕೂಟ ಮತ್ತು ರಾಜ್ಯ ಸರಕಾರಗಳ ತೆರಿಗೆ ನೀತಿಯೇ ಕಾರಣ. ಹೀಗಾಗಿ ಉತ್ಪಾದನಾ ವಲಯ ಸಾಕಷ್ಟು ಆಘಾತಕ್ಕೆ ಒಳಗಾಗಿದೆ. ಇನ್ನೊಂದೆಡೆ ಜೀವನಾವಶ್ಯಕ ಪದಾರ್ಥಗಳ ಬೆಲೆ ಏರಿಕೆಯಿಂದ ಜನರ ಬದುಕು ಮೂರಾಬಟ್ಟೆಯಾಗಿದೆ. ಭಾರತದ ಜನಸಾಮಾನ್ಯರ ಬಗ್ಗೆ ನೈಜವಾದ ಕಾಳಜಿ ಇದ್ದರೆ ಒಕ್ಕೂಟ ಹಾಗೂ ರಾಜ್ಯ ಸರಕಾರಗಳು ಪರಸ್ಪರ ಮಾತುಕತೆ ನಡೆಸಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಸಲು ಕ್ರಮ ಕೈಗೊಂಡರೆ ಉಳಿದ ಜೀವನಾವಶ್ಯಕ ಪದಾರ್ಥಗಳ ಬೆಲೆಯನ್ನೂ ನಿಯಂತ್ರಣಕ್ಕೆ ತಂದು ಜನ ಸಾಮಾನ್ಯರು ನೆಮ್ಮದಿಯಿಂದ ಉಸಿರಾಡುವಂತೆ ಮಾಡಬಹುದು.

ಜನಸಾಮಾನ್ಯರನ್ನು ಪ್ರತಿ ನಿತ್ಯವೂ ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳಿಂದ ಅವರ ಗಮನವನ್ನು ಬೇರೆಡೆ ಸೆಳೆಯಲು ಮತಾಂತರ ನಿಷೇಧ ಕಾನೂನು, ತ್ರಿಶೂಲ ಮತ್ತು ತಲವಾರು ದೀಕ್ಷೆಗಳಂತಹ ಪ್ರಚೋದನಕಾರಿ ಕಾರ್ಯಕ್ರಮಗಳು ಬಹಳ ಕಾಲ ಸರಕಾರದ ನೆರವಿಗೆ ಬರುವುದಿಲ್ಲ. ಭಾರತೀಯರಿಗೆ ಈ ದಗಲಬಾಜಿತನದ ಒಳಗುಟ್ಟು ಗೊತ್ತಾದರೆ ಇಂದಲ್ಲ ನಾಳೆ ಅವರು ತಿರುಗಿ ಬಿದ್ದರೆ ಅಧಿಕಾರದಲ್ಲಿರುವವರು ಭಾರೀ ಬೆಲೆಯನ್ನು ತೆರಬೇಕಾಗುತ್ತದೆ ಎಂಬುದನ್ನು ಮರೆಯಬಾರದು.

ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಕಡಿತಗೊಳಿಸುವ ಬಗ್ಗೆ ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳ ನಡುವೆ ಹೊಂದಾಣಿಕೆಯಿಲ್ಲ. ತೈಲ ಸುಂಕವನ್ನು ನಾವು ಕಡಿಮೆ ಮಾಡಿದರೂ ರಾಜ್ಯಗಳು ಸುಂಕ ಹೆಚ್ಚಿಸಿ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗದಂತೆ ಮಾಡುತ್ತವೆ, ತಮ್ಮ ಖಜಾನೆಯನ್ನು ತುಂಬಿಕೊಳ್ಳುತ್ತವೆ ಎಂದು ಒಕ್ಕೂಟ ಸರಕಾರದ ಹಣಕಾಸು ಸಚಿವರು ಈ ಹಿಂದೆ ಹೇಳಿದ್ದರು.

ಜನಸಾಮಾನ್ಯರು ಬೆಲೆ ಏರಿಕೆಯಿಂದ ತೀವ್ರ ತೊಂದರೆಗೊಳಗಾಗಿದ್ದಾರೆ. ಈ ಸಮಸ್ಯೆ ನಿವಾರಣೆಯಾಗಬೇಕಾದರೆ ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳು ತೈಲೋತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಒಂದು ಒಮ್ಮತಕ್ಕೆ ಬರಬೇಕು. ಬೆಲೆ ಏರಿಕೆ ಕಡಿಮೆಯಾಗಿ ಜನಸಾಮಾನ್ಯರ ಕೈಯಲ್ಲಿ ಒಂದಿಷ್ಟು ಹಣಕಾಸು ಓಡಾಡಿದರೆ ಭಾರತದ ಆರ್ಥಿಕ ವ್ಯವಸ್ಥೆಯೂ ಚೇತರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News