ಇಂಧನ ಬೆಲೆ ಏರಿಕೆ,ಚೀನಾ ಆಕ್ರಮಣದ ಬಗ್ಗೆ ಪ್ರಧಾನಿ ಮೋದಿ ಎಂದಿಗೂ ಮಾತನಾಡುವುದೇ ಇಲ್ಲ:ಉವೈಸಿ

Update: 2021-10-19 06:18 GMT

 ಹೊಸದಿಲ್ಲಿ: ಇಂಧನ ಬೆಲೆ ಏರಿಕೆ ಹಾಗೂ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಚೀನಾದ ಆಕ್ರಮಣದಿಂದ ಉಂಟಾಗುವ ಬೆದರಿಕೆಯ ಕುರಿತು ಪ್ರಧಾನಿ ಮೋದಿ ಎಂದಿಗೂ ಪ್ರತಿಕ್ರಿಯಿಸುವುದಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್  ಉವೈಸಿ ವಾಗ್ದಾಳಿ ನಡೆಸಿದರು.

"ಪ್ರಧಾನಿ ಮೋದಿ ಎರಡು ವಿಷಯಗಳ ಬಗ್ಗೆ ಮಾತನಾಡುವುದಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಹಾಗೂ  ಲಡಾಖ್‌ನಲ್ಲಿ ನಮ್ಮ ಪ್ರದೇಶದಲ್ಲಿ ಬೀಡುಬಿಟ್ಟಿರುವ ಚೀನಾದ ಬಗ್ಗೆ ಮಾತನಾಡಲು ಪ್ರಧಾನಿ ಹೆದರುತ್ತಾರೆ ”ಎಂದು ಹೈದರಾಬಾದ್‌ನಲ್ಲಿ ಸೋಮವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಉವೈಸಿ ಹೇಳಿದರು.

ಪಾಕಿಸ್ತಾನವು ಪುಲ್ವಾಮಾದ ಮೇಲೆ ದಾಳಿ ಮಾಡಿದಾಗ, ಪ್ರಧಾನಿ ಮೋದಿ ಅವರು  'ಘರ್ ಮೇ  ಘುಸ್ಕೆ ಮಾರಂಗೆ' (ನಾವು ಅವರ ಪ್ರದೇಶದೊಳಗೆ ನುಗ್ಗಿ ಶತ್ರುಗಳನ್ನು ಹೊಡೆಯುತ್ತೇವೆ) ಎಂದು ಹೇಳಿದ್ದರು. ಈಗ ಚೀನಾ ನಮ್ಮ ಹಿತ್ತಲಲ್ಲಿ ಕುಳಿತಿದೆ .ಆದರೆ  ಅವರು  ಏನೂ ಮಾಡುತ್ತಿಲ್ಲ"ಎಂದು ಅವರು ಆರೋಪಿಸಿದರು.

ಜಮ್ಮು ಹಾಗೂ  ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧದ ವಿವಿಧ ಕಾರ್ಯಾಚರಣೆಗಳಲ್ಲಿ ಹತರಾದ ಯೋಧರ ಬಗ್ಗೆ ಪ್ರತಿಕ್ರಿಯಿಸಿದ ಅಸದುದ್ದೀನ್ ಉವೈಸಿ, "ನಮ್ಮ 9 ಸೈನಿಕರು ಜಮ್ಮು-ಕಾಶ್ಮೀರದಲ್ಲಿ ಸಾವನ್ನಪ್ಪಿದ್ದಾರೆ ಹಾಗೂ  ಭಾರತವು ಅಕ್ಟೋಬರ್ 24 ರಂದು ಪಾಕಿಸ್ತಾನದೊಂದಿಗೆ ಟ್ವೆಂಟಿ- 20 ಪಂದ್ಯವನ್ನು ಆಡಲಿದೆ?"

"ನಮ್ಮ ಸೈನಿಕರು ಹುತಾತ್ಮರಾಗಿದ್ದಾರೆ. ನೀವು ಟ್ವೆಂಟಿ- 20 ಆಡುತ್ತೀರಾ? ಪಾಕಿಸ್ತಾನವು ಭಾರತದ ಜನರ ಜೀವದೊಂದಿಗೆ  ಕಾಶ್ಮೀರದಲ್ಲಿ ಪ್ರತಿದಿನ ಟ್ವೆಂಟಿ-20 ಆಡುತ್ತಿದೆ" ಎಂದು ಉವೈಸಿ ಹೇಳಿದರು.

ಕಾಶ್ಮೀರದಲ್ಲಿ ನಡೆದ ಸರಣಿ ನಾಗರಿಕ ಹತ್ಯೆಗಳ ಬಗ್ಗೆ ಮಾತನಾಡಿದ ಉವೈಸಿ, ಇದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವೈಫಲ್ಯ ಎಂದು ಹೇಳಿದರು.

 "ಬಿಹಾರದ ಬಡ ಕಾರ್ಮಿಕರನ್ನು ಕೊಲ್ಲಲಾಗುತ್ತಿದೆ. ಉದ್ದೇಶಿತ ಹತ್ಯೆಯನ್ನು ಮಾಡಲಾಗುತ್ತಿದೆ. ಗುಪ್ತಚರ ಬ್ಯೂರೋ ಹಾಗೂ  (ಕೇಂದ್ರ ಗೃಹ ಸಚಿವ) ಅಮಿತ್ ಶಾ ಏನು ಮಾಡುತ್ತಿದ್ದಾರೆ? ಇದು ಕೇಂದ್ರದ ವೈಫಲ್ಯ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News