ಚೀನಾದ 2 ನಗರಗಳಲ್ಲಿ ಕೊರೋನ ಸೋಂಕು ಉಲ್ಬಣ; ಮತ್ತೆ ಲಾಕ್ಡೌನ್ ಜಾರಿ‌

Update: 2021-10-19 16:06 GMT
(ಸಾಂದರ್ಭಿಕ ಚಿತ್ರ) AFP

ಬೀಜಿಂಗ್, ಅ.19: ಚೀನಾದ ಉತ್ತರಗಡಿಯ ಸಮೀಪದ 2 ನಗರಗಳಲ್ಲಿ ಕೊರೋನ ಸಾಂಕ್ರಾಮಿಕದ ಹೊಸ ಸ್ಥಳೀಯ ರೂಪಾಂತರಿತ ಸೋಂಕು ಪ್ರಕರಣ ಉಲ್ಬಣಗೊಂಡಿರುವುದರಿಂದ ಈ ನಗರಗಳಲ್ಲಿ ಮತ್ತೆ ಲಾಕ್ಡೌನ್ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾಯವ್ಯದ ಶಾಂಕ್ಸಿ ಪ್ರಾಂತದ ಕ್ಸಿಯಾನ್ನಲ್ಲಿ ರೂಪಾಂತರಿತ ಸೋಂಕಿನ 9 ಪ್ರಕರಣ, ಉತ್ತರ ಚೀನಾದ ಇನ್ನರ್ ಮಂಗೋಲಿಯಾದ ಎರೆನ್ಹಾಟ್ ನಗರದಲ್ಲಿ 4 ಹೊಸ ಪ್ರಕರಣ ಪತ್ತೆಯಾಗಿದ್ದು ಸೆಪ್ಟಂಬರ್ ಅಂತ್ಯದ ಬಳಿಕ ದಾಖಲಾದ ಅತ್ಯಧಿಕ ಪ್ರಕರಣ ಇದಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಮಾಹಿತಿ ನೀಡಿದೆ. ಸ್ಥಳೀಯ ರೂಪಾಂತರಿತ ಪ್ರಕರಣಗಳ ವಿಷಯದಲ್ಲಿ ಶೂನ್ಯ ಸಹಿಷ್ಣುತೆಯ ನೀತಿ ಜಾರಿಯಲ್ಲಿರುವುದರಿಂದ ತಕ್ಷಣ ಈ ನಗರಗಳಲ್ಲಿ ಲಾಕ್ಡೌನ್ ಜಾರಿಗೊಳಿಸಿ, ಸೋಂಕಿನ ಪ್ರಕರಣಗಳ ಪತ್ತೆ, ಪರೀಕ್ಷೆ ಕಾರ್ಯ ತ್ವರಿತಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಮಂಗೋಲಿಯಾದೊಂದಿಗೆ ಗಡಿ ಹಂಚಿಕೊಂಡಿರುವ ಉತ್ತರಚೀನಾದ ಇನ್ನರ್ಮಂಗೋಲಿಯಾದ ಎರೆನ್ಹಾಟ್ ನಗರದ ಸುಮಾರು 76000 ನಿವಾಸಿಗಳಿಗೆ ಅಗತ್ಯದ ಕೆಲಸಗಳಿಗೆ ಮಾತ್ರ ಮನೆಯಿಂದ ಹೊರಬರಬೇಕೆಂದು ಸೂಚಿಸಲಾಗಿದೆ. ಅಕ್ಟೋಬರ್ 13ರಿಂದ 18ರವರೆಗೆ 4 ಹೊಸ ಪ್ರಕರಣ ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ. ನಗರಕ್ಕೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು ಅಧಿಕಾರಿಗಳ ಅನುಮತಿ ಪಡೆದ ವಾಹನಗಳಿಗೆ ಮಾತ್ರ ಪ್ರಯಾಣಕ್ಕೆ ಅನುಮತಿಸಲಾಗಿದೆ.

 ಇದೇ ಪ್ರದೇಶದ ಮತ್ತೊಂದು ನಗರ ಎಜಿನಾ ಬಾನ್ನರ್ನಲ್ಲಿ ಶಾಲೆ, ಸರಕಾರಿ ಮತ್ತು ಖಾಸಗಿ ಕಚೇರಿಗಳನ್ನು ಮುಚ್ಚಲಾಗಿದ್ದು ವಾಹನ ಸಂಚಾರವನ್ನೂ ಸ್ಥಗಿತಗೊಳಿಸಿದ್ದು ನಗರದ 36,000 ಜನರ ಸೋಂಕು ಪರೀಕ್ಷೆಗೆ ಅಭಿಯಾನವನ್ನು ಆರಂಭಿಸಲಾಗಿದೆ. ಈ ನಗರದಲ್ಲಿ ಅಕ್ಟೋಬರ್ 13ರಿಂದ 5 ಹೊಸ ಪ್ರಕರಣ ಪತ್ತೆಯಾಗಿದ್ದು, ಇವರೆಲ್ಲಾ ಕ್ಸಿಯಾನ್ನಲ್ಲಿ ಸೋಂಕು ದೃಢಪಟ್ಟ ಇಬ್ಬರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. 

ಕ್ಸಿಯಾನ್ ನಗರದ ಕೆಲವು ಪ್ರವಾಸೀ ಕೇಂದ್ರಗಳನ್ನು ಮುಚ್ಚಲಾಗಿದ್ದು ಶಾಂಕ್ಸಿ ಪ್ರಾಂತಕ್ಕೆ ಹೊರಗಿನವರು ಭೇಟಿ ನೀಡಬೇಕಿದ್ದರೆ ಅಥವಾ ಹೋಟೆಲ್ಗಳಲ್ಲಿ ವಾಸ್ತವ್ಯ ಹೂಡಬೇಕಿದ್ದರೆ ಭೇಟಿಯ 48 ಗಂಟೆ ಮುನ್ನ ನಡೆಸಿದ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರಬೇಕು ಎಂದು ಸೂಚಿಸಾಗಿದೆ.

ದಕ್ಷಿಣದ ಹನಾನ್ ಪ್ರಾಂತದ ಚಾಂಗ್ಷಾ ನಗರ ಮತ್ತು ವಾಯವ್ಯದ ನಿಂಗ್ಕ್ಸಿಯಾ ಸ್ವಾಯತ್ತ ಪ್ರಾಂತದ ಯಿನ್ಚುವಾನ್ ನಗರಗಳಲ್ಲೂ ಅಕ್ಟೋಬರ್ 18ರಂದು ರೂಪಾಂತರಿತ ಸೋಂಕಿನ ಹೊಸ 1 ಪ್ರಕರಣ ದಾಖಲಾಗಿದೆ. ರಾಜಧಾನಿ ಬೀಜಿಂಗ್ನಲ್ಲೂ ಅಕ್ಟೋಬರ್ 18ರಂದು 1 ಪ್ರಕರಣ ದಾಖಲಾಗಿದ್ದು ಸೋಂಕು ದೃಢಪಟ್ಟ ವ್ಯಕ್ತಿ ಮತ್ತು ಯಿನ್ಚುವಾನ್ನಲ್ಲಿ ಸೋಂಕು ದೃಢಪಟ್ಟ ವ್ಯಕ್ತಿ ಒಂದೇ ರೈಲಿನಲ್ಲಿ ಪ್ರಯಾಣಿಸಿದ್ದರು. ಇದೀಗ ಈ ರೈಲಿನಲ್ಲಿ ಪ್ರಯಾಣಿಸಿದವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ .

ಚೀನಾದಲ್ಲಿ ಅಕ್ಟೋಬರ್ 18ರಂದು 25 ಕೊರೋನ ಪ್ರಕರಣ, 19 ರೂಪಾಂತರಿತ ಸೋಂಕು ಪ್ರಕರಣ ದಾಖಲಾಗಿದ್ದು ಇದರಲ್ಲಿ ವಿದೇಶದಿಂದ ಆಗಮಿಸಿದವರೂ ಸೇರಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News