ಹಿಂದೂಗಳ ವಿರುದ್ಧದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ತಕ್ಷಣ ಕ್ರಮ ಕೈಗೊಳ್ಳಲು ಸಚಿವರಿಗೆ ಪ್ರಧಾನಿ ಹಸೀನಾ ಸೂಚನೆ
ಢಾಕಾ, ಅ.18: ಹಿಂದುಗಳನ್ನು ಗುರಿಯಾಗಿಸಿ ನಡೆದಿರುವ ಹಿಂಸಾಚಾರದಲ್ಲಿ ಶಾಮೀಲಾದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಸೂಚಿಸಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಸರಿಯಾಗಿ ಪರಿಶೀಲಿಸದೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುವ ಯಾವುದೇ ಸುದ್ಧಿಯನ್ನೂ ನಂಬಬಾರದು ಎಂದು ಜನತೆಗೆ ಸಲಹೆ ನೀಡಿದ್ದಾರೆ.
ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪಾಲ್ಗೊಂಡಿದ್ದ ಪ್ರಧಾನಿ ಹಸೀನಾ, ಧರ್ಮವನ್ನು ಬಳಸಿಕೊಂಡು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದವರ ವಿರುದ್ಧ ತಕ್ಷಣ ಕ್ರಮ ಜರಗಿಸುವಂತೆ ಗೃಹ ಸಚಿವ ಅಸದುಝಮಾನ್ ಖಾನ್ಗೆ ಸೂಚಿಸಿದರು. ಎಚ್ಚರಿಕೆ ವಹಿಸುವಂತೆ ಮತ್ತು ಇಂತಹ ಕ್ರಮಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಆದೇಶಿಸಿದ್ದಾರೆ. ಸಂತ್ರಸ್ತರ ಕುಟುಂಬಕ್ಕೆ ಸಾಧ್ಯವಿರುವ ನೆರವನ್ನು ಒದಗಿಸುವುದಾಗಿ ಭರವಸೆ ನೀಡಿದರು ಎಂದು ಸಂಪುಟ ಕಾರ್ಯದರ್ಶಿಯ ಹೇಳಿಕೆಯನ್ನು ಉಲ್ಲೇಖಿಸಿ ‘ಢಾಕಾ ಟ್ರಿಬ್ಯೂನಲ್’ ವರದಿ ಮಾಡಿದೆ.
ಕಳೆದ ಬುಧವಾರ ಬಾಂಗ್ಲಾದೇಶದಲ್ಲಿ ದುರ್ಗಾಪೂಜೆಯ ಸಂದರ್ಭ ಇಸ್ಲಾಂ ಧರ್ಮ ನಿಂದನೆ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ದೃಶ್ಯ ಪ್ರಸಾರವಾದ ಬಳಿಕ ದೇಶದೆಲ್ಲೆಡೆ ಪ್ರತಿಭಟನೆ ನಡೆದು ಹಿಂದುಗಳ ವಿರುದ್ಧ ವ್ಯಾಪಕ ಹಿಂಸಾಚಾರ ನಡೆದಿದೆ. ಹಿಂಸಾಚಾರದಲ್ಲಿ ಕನಿಷ್ಟ 6 ಹಿಂದುಗಳು ಮೃತಪಟ್ಟಿದ್ದು ಹಲವು ಮನೆಗಳು, ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಮಧ್ಯೆ, ಆಡಳಿತಾರೂಢ ಅವಾಮಿ ಲೀಗ್ ಪಕ್ಷ ದೇಶದೆಲ್ಲೆಡೆ ಸೌಹಾರ್ದ ಜಾಥಾ ನಡೆಸಿ ಜನರಲ್ಲಿ ಧೈರ್ಯ ತುಂಬುವ ಪ್ರಯತ್ನ ನಡೆಸಿದೆ. ಹಿಂದು ಸಹೋದರ, ಸಹೋದರಿಯರೇ, ಆತಂಕ , ಭೀತಿ ಬೇಡ. ಪ್ರಧಾನಿ ಶೇಖ್ ಹಸೀನಾ ಮತ್ತು ಅವಾಮಿ ಲೀಗ್ ನಿಮ್ಮೊಂದಿಗಿದೆ. ಶೇಖ್ ಹಸೀನಾರ ಸರಕಾರ ಅಲ್ಪಸಂಖ್ಯಾತ ಸ್ನೇಹಿ ಸರಕಾರವಾಗಿದೆ ಎಂದು ಪಕ್ಷದ ಮುಖಂಡರು ರ್ಯಾಲಿಯಲ್ಲಿ ಘೋಷಿಸಿದ್ದಾರೆ ಎಂದು ವರದಿಯಾಗಿದೆ.
ಕೋಮುವಾದಿ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಆಡಳಿತ ಪಕ್ಷ ಬೀದಿಗಿಳಿದು ಜನರಲ್ಲಿ ವಿಶ್ವಾಸ ತುಂಬುವ ಕಾರ್ಯ ಮುಂದುವರಿಸಲಿದೆ. ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಇಂತಹ ಶಕ್ತಿಗಳಿಗೆ ಸೂಕ್ತ ತಿರುಗೇಟು ನೀಡಲಿದ್ದಾರೆ ಎಂದು ಅವಾಮಿ ಲೀಗ್ ಪಕ್ಷದ ಪ್ರಧಾನ ಕಾರ್ಯದರ್ಶಿ ಉಬೈದುಲ್ ಝಾದರ್ ಹೇಳಿದ್ದಾರೆ.