ತೈವಾನ್ ವಾಯುಕ್ಷೇತ್ರ ಪ್ರವೇಶಿಸಿದ ಚೀನಾದ 2 ಯುದ್ಧವಿಮಾನ
ತೈಪೆ, ಅ.19: ಚೀನಾ ಸೇನೆಯ 2 ಯುದ್ಧವಿಮಾನಗಳು ಸೋಮವಾರ ತೈವಾನ್ನ ವಾಯುರಕ್ಷಣಾ ಗುರುತು ವಲಯ(ಎಡಿಝೆಡ್)ವನ್ನು ಪ್ರವೇಶಿಸಿದ್ದು ಇದು ಚೀನಾದ ಯುದ್ಧವಿಮಾನಗಳ 9ನೇ ಅತಿಕ್ರಮ ಪ್ರವೇಶವಾಗಿದೆ ಎಂದು ತೈವಾನ್ನ ರಕ್ಷಣಾ ಇಲಾಖೆ ಹೇಳಿದೆ.
ಎಡಿಝೆಡ್ನ ನೈಋತ್ಯ ಮೂಲೆಯಲ್ಲಿ ಚೀನಾ ಸೇನೆಯ ಕೆಜೆ-500 ದಾಳಿ ಮುನ್ಸೂಚನೆ ವಿಮಾನ ಮತ್ತು ವೈ-8 ಯುದ್ಧವಿಮಾನಗಳ ಹಾರಾಟವನ್ನು ಗಮನಿಸಿದ ತಕ್ಷಣ ತೈವಾನ್ನ ಯುದ್ಧವಿಮಾನಗಳು ಅತ್ತ ಧಾವಿಸಿದವು. ರೇಡಿಯೊ ಸಂದೇಶ ಮೂಲಕ ಎಚ್ಚರಿಕೆ ರವಾನಿಸಿದ ಬಳಿಕ ಕ್ಷಿಪಣಿ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿತ್ತು ಎಂದು ತೈವಾನ್ನ ರಕ್ಷಣಾ ಇಲಾಖೆಯನ್ನು ಉಲ್ಲೇಖಿಸಿ ತೈವಾನ್ ನ್ಯೂಸ್ ವರದಿ ಮಾಡಿದೆ.
ಅಕ್ಟೋಬರ್ 1ರಿಂದ 5ರವರೆಗಿನ 4 ದಿನದಲ್ಲೇ ಚೀನಾದ ಸುಮಾರು 150 ಯುದ್ಧವಿಮಾನಗಳು ತೈವಾನ್ ವಾಯುನೆಲೆಯನ್ನು ಉಲ್ಲಂಘಿಸುವ ಮೂಲಕ ತೈವಾನ್ಗೆ ನಿರಂತರ ಕಿರುಕುಳ ನೀಡುವುದನ್ನು ಚೀನಾ ಮುಂದುವರಿಸಿದೆ . ಚೀನಾ- ತೈವಾನ್ ಬಿಕ್ಕಟ್ಟು ಕಳೆದ 40 ವರ್ಷಗಳಲ್ಲೇ ಅತ್ಯಂತ ಗರಿಷ್ಟ ಮಟ್ಟಕ್ಕೆ ತಲುಪಿದೆ ಎಂದು ತೈವಾನ್ನ ರಕ್ಷಣಾ ಸಚಿವ ಚ್ಯುಕು ಚೆಂಗ್ ಹೇಳಿದ್ದಾರೆ.