"ರಾಜಕೀಯ ಲಾಭಕ್ಕೆ ʼಧರ್ಮದ ಬಳಕೆʼ ಕೊನೆಗೊಂಡರೆ ಅಲ್ಪಸಂಖ್ಯಾತರ ವಿರುದ್ಧದ ದಾಳಿ ನಿಲ್ಲುತ್ತದೆ"

Update: 2021-10-19 17:55 GMT
photo:twitter/@shahriarkabir71

ಢಾಕಾ, ಅ.19: ರಾಜಕೀಯ ಲಾಭ ಪಡೆಯಲು ರಾಜಕೀಯ ಪಕ್ಷಗಳು ಧರ್ಮದ ಬಳಕೆಯನ್ನು ಕೊನೆಗೊಳಿಸಿದರೆ ಅಲ್ಪಸಂಖ್ಯಾತರ ವಿರುದ್ಧದ ದಾಳಿಯೂ ನಿಲ್ಲುತ್ತದೆ ಎಂದು ಬಾಂಗ್ಲಾದೇಶದ ಸಾಹಿತಿ, ಮಾನವ ಹಕ್ಕು ಕಾರ್ಯರ್ತ ಶಹ್ರಿಯಾರ್ ಕಬೀರ್ ಹೇಳಿದ್ದಾರೆ.

ಮುಜೀಬರ್ರಹ್ಮಾನ್ ಅವರ ಹತ್ಯೆಯ ಬಳಿಕ ಬಾಂಗ್ಲಾದೇಶದಲ್ಲಿ ಕೋಮು ಹಿಂಸಾಚಾರ ಆರಂಭವಾಗಿದೆ. ಆ ಬಳಿಕ ಕೋಮುವಾದಿ ರಾಜಕೀಯ ದೇಶದಲ್ಲಿ ಮುನ್ನೆಲೆಗೆ ಬಂದಿತು. ಬಾಂಗ್ಲಾದೇಶವು ಪಾಕ್ ಪರವಾದ ಮುಸ್ಲಿಂ ದೇಶವಾಗಿರಬೇಕು ಎಂದು ಪ್ರತಿಪಾದಿಸುವ ತಂಡವೊಂದು ದೇಶದಲ್ಲಿದೆ. ಆದ್ದರಿಂದ ಇದು ದುರ್ಗಾ ಪೂಜೆ ಪೆಂಡಾಲ್ಗೆ ನುಗ್ಗಿ ವಿಗ್ರಹಗಳನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸೀಮಿತವಾಗಿಲ್ಲ, ಒಂದಿಲ್ಲೊಂದು ರೀತಿಯಲ್ಲಿ ಅವರು ಅಶಾಂತಿ ಹರಡುತ್ತಿರುತ್ತಾರೆ ಎಂದು ‘ಇಂಡಿಯನ್ ಎಕ್ಸ್ಪ್ರೆಸ್.ಕಾಮ್’ಗೆ ನೀಡಿದ ಸಂದರ್ಶನದಲ್ಲಿ ಕಬೀರ್ ಹೇಳಿದ್ದಾರೆ.

ಎಲ್ಲಿಯವರೆಗೆ ರಾಜಕೀಯದಲ್ಲಿ ಧರ್ಮ ಸೇರಿರುತ್ತದೆಯೋ ಅಲ್ಲಿಯವರೆಗೆ ಅಲ್ಪಸಂಖ್ಯಾತರ ಮೇಲಿನ ದಾಳಿ ಮುಂದುವರಿಯುತ್ತದೆ. ಒಂದೆಡೆ ಬಲಪಂಥೀಯ ಸದಸ್ಯರು ನುಸುಳಿರುವ ಅವಾಮಿ ಲೀಗ್ ಪಕ್ಷ, ಇನ್ನೊಂದೆಡೆ ಧರ್ಮದ ಆಧಾರದ ವಿಭಜನೆಯನ್ನು ಪ್ರಚಾರ ಮಾಡುವ ಜಮಾತ್-ಬಿಎನ್ಪಿ ಇಲ್ಲಿರುವ ಪ್ರಮುಖ ಪಕ್ಷವಾಗಿದೆ. ಪ್ರಧಾನಿ ಶೇಖ್ ಹಸೀನಾ ಭಾರತದ ಏಜೆಂಟ್ ಆಗಿದ್ದು ಅವರ ಸರಕಾರವನ್ನು ಕಿತ್ತೊಗೆಯಬೇಕು ಎಂದು ಹಲವರು ಹೇಳುತ್ತಿದ್ದಾರೆ. ಆದರೆ ಹಾಲಿ ಸರಕಾರವನ್ನು ಕಿತ್ತೊಗೆಯುವುದರಿಂದ ಸಮಸ್ಯೆ ಬಗೆಹರಿಯುತ್ತದೆ ಎಂದು ನನಗನಿಸುವುದಿಲ್ಲ ಎಂದವರು ಹೇಳಿದ್ದಾರೆ.

ಬಾಂಗ್ಲಾದೇಶದ ಕೋಮು ಹಿಂಸೆಯಿಂದ ಭಾರತದ ರಾಜಕೀಯದ ಮೇಲೆ ಆಗಬಹುದಾದ ಪರಿಣಾಮಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಕಬೀರ್ ‘ ಇಂತಹ ಘಟನೆಗಳು ಯಾವತ್ತೂ ನೆರೆದೇಶದ ರಾಜಕೀಯದ ಮೇಲೆ ಪರಿಣಾಮ ಬೀರುತ್ತವೆ. ಬಂಗಾಳದ ಬಿಜೆಪಿ ಮುಖಂಡರು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಘಟನೆಯ ಬಗ್ಗೆ ಹಲವು ಹೇಳಿಕೆ, ಟಿಪ್ಪಣಿ ಮಾಡುತ್ತಿದ್ದಾರೆ. ಆದರೆ ಇಂತಹ ಪ್ರಕರಣಗಳನ್ನು ಆಯಾ ದೇಶವೇ ನಿರ್ವಹಿಸಬೇಕು. ಭಾರತದಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಬಳಿಕ ಬಾಂಗ್ಲಾದೇಶದಲ್ಲಿ ಸುಮಾರು 3,600 ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗಿತ್ತು. ಈ ಹಂತಕ್ಕೆ ಮತ್ತೆ ಮರಳುವುದನ್ನು ನಾವು ಬಯಸುವುದಿಲ್ಲ. ಬಾಂಗ್ಲಾ ವಿಮೋಚನಾ ಯುದ್ಧದ ಬಳಿಕ ಬಾಂಗ್ಲಾದೇಶದ ನಿರ್ಮಾಣದ ಅಡಿಗಲ್ಲಾಗಿರುವ ಜಾತ್ಯಾತೀತತೆಯ ಆದರ್ಶಗಳನ್ನು ಜನತೆ ಮರೆಯಬಾರದು’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News