ಸಿರಿಯಾದಲ್ಲಿ ಬಾಂಬ್ ಸ್ಫೋಟ: ಕನಿಷ್ಟ 14 ಯೋಧರ ಮೃತ್ಯು

Update: 2021-10-20 16:28 GMT
photo:twitter/@gulf_news

ದಮಾಸ್ಕಸ್, ಅ.20: ಸಿರಿಯಾದ ರಾಜಧಾನಿ ದಮಾಸ್ಕಸ್ ನಲ್ಲಿ ಯೋಧರು ಪ್ರಯಾಣಿಸುತ್ತಿದ್ದ ಸೇನಾ ವಾಹನವನ್ನು ಗುರಿಯಾಗಿಸಿ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಟ 14 ಯೋಧರು ಮೃತಪಟ್ಟು ಇತರ 3 ಯೋಧರು ಗಾಯಗೊಂಡಿರುವುದಾಗಿ ಮಿಲಿಟರಿ ಅಧಿಕಾರಿಗಳು ಹಾಗೂ ಸರಕಾರಿ ಟಿವಿ ವಾಹಿನಿ ವರದಿ ಮಾಡಿದೆ.

ಯೋಧರು ಪ್ರಯಾಣಿಸುತ್ತಿದ್ದ ಬಸ್ಸು ಹಫೀಝ್-ಅಲ್ಅಸಾದ್ ಸೇತುವೆಯ ಬಳಿ ಬರುತ್ತಿದ್ದಂತೆಯೇ 2 ಬಾಂಬ್ ಗಳು ಸ್ಫೋಟಿಸಿದಾಗ ಬಸ್ಸು ಸುಟ್ಟು ಕರಕಲಾಗಿದೆ. ಮತ್ತೊಂದು ಬಾಂಬ್ ಅನ್ನು ಸ್ಫೋಟಿಸುವ ಮುನ್ನವೇ ಸೇನೆಯ ಇಂಜಿನಿಯರಿಂಗ್ ದಳ ನಿಷ್ಕ್ರಿಯಗೊಳಿಸಿದೆ. ಇದೊಂದು ಭಯೋತ್ಪಾದಕ ಕೃತ್ಯವಾಗಿದೆ. ಬಾಂಬನ್ನು ಬಸ್ಸಿನೊಳಗೇ ಇಡಲಾಗಿತ್ತು. ಬಸ್ಸಿನೊಳಗಿದ್ದ ಕನಿಷ್ಟ 14 ಯೋಧರು ಮೃತಪಟ್ಟಿದ್ದು ಇತರ ಮೂವರು ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ಹೇಳಿವೆ.

ಇದೊಂದು ಹೇಡಿತನದ ಕೃತ್ಯವಾಗಿದೆ. ಪೊಲೀಸ್ ಪಡೆಗಳು ತಕ್ಷಣ ಪ್ರದೇಶವನ್ನು ಸುತ್ತುವರಿದಿದ್ದು ಪರಿಶೀಲನೆ ನಡೆಸಿವೆ. ಜನತೆ ಸಂಶಯಾಸ್ಪದ ವಸ್ತುಗಳು ಕಂಡುಬಂದರೆ ತಕ್ಷಣ ಮಾಹಿತಿ ನೀಡಬೇಕು ಎಂದು ದಮಾಸ್ಕಸ್ ನ ಪೊಲೀಸ್ ಕಮಾಂಡರ್ ಮೇಜರ್ ಹುಸೇನ್ ಜುಮಾ ಮನವಿ ಮಾಡಿ್ದಾರೆ.

ದಮಾಸ್ಕಸ್ ನಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಮಾರಣಾಂತಿಕ ಬಾಂಬ್ ದಾಳಿ ಇದಾಗಿದೆ. ಸುಮಾರು 10 ವರ್ಷದ ಸಂಘರ್ಷದ ಬಳಿಕ ದಂಗೆಕೋರರ ವಶದಲ್ಲಿದ್ದ ಹೊರವಲಯಗಳನ್ನು ಸೇನೆ ಮತ್ತೆ ನಿಯಂತ್ರಣಕ್ಕೆ ಪಡೆದಂದಿನಿಂದ ಸಿರಿಯಾದಲ್ಲಿ ಬಾಂಬ್ ದಾಳಿಯಂತಹ ಭಯೋತ್ಪಾದಕ ಕೃತ್ಯಗಳು ಬಹುತೇಕ ಶೂನ್ಯವಾಗಿ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಫಿರಂಗಿ ದಾಳಿಯಲ್ಲಿ ಕನಿಷ್ಟ 10 ಮಂದಿ ಮೃತ್ಯು ಬಾಂಬ್ ಸ್ಫೋಟ ಸಂಭವಿಸಿದ ಕೆಲವೇ ನಿಮಿಷಗಳ ಬಳಿಕ ದಂಗೆಕೋರರ ನಿಯಂತ್ರಣದಲ್ಲಿರುವ ದಕ್ಷಿಣ ಇದ್ಲಿಬ್ ಪ್ರಾಂತದ ಅರಿಹಾ ನಗರದ ಮೇಲೆ ನಡೆದ ಫಿರಂಗಿ ದಾಳಿಯಲ್ಲಿ ಕನಿಷ್ಟ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಲ್ಜಝೀರಾ ವರದಿ ಮಾಡಿದೆ.

ಮೃತರಲ್ಲಿ ವಿದ್ಯಾರ್ಥಿಗಳೂ ಸೇರಿದ್ದಾರೆ. ಸೇನೆಯ ಪ್ರತೀಕಾರದ ಕ್ರಮ ಇದಾಗಿರಬಹುದು. ಈ ಪ್ರದೇಶದಲ್ಲಿ ವಾಯು ದಾಳಿ, ಬಾಂಬ್ ದಾಳಿಯಂತಹ ಪ್ರಕರಣ ಸರ್ವೇಾಮಾನ್ಯವಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News