200 ಕೋಟಿ ರೂ. ಕಪ್ಪು ಹಣ ಬಿಳುಪು ಪ್ರಕರಣ: ಈಡಿಯಿಂದ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ವಿಚಾರಣೆ

Update: 2021-10-20 17:16 GMT

ಹೊಸದಿಲ್ಲಿ,ಅ. 20: 200 ಕೋಟಿ ರೂ. ಕಪ್ಪುಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿ ವಂಚಕ ಸುಕೇಶ್ ಚಂದ್ರಶೇಖರ್ ವಿರುದ್ಧ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಈ.ಡಿ)ವು ಬುಧವಾರ ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡೀಸ್ ಅವರನ್ನು ಪ್ರಶ್ನಿಸಿತು.

ಆಗಸ್ಟ್ ನಲ್ಲಿ ಅವರು ಇದೇ ಪ್ರಕರಣಕ್ಕೆ ಸಂಬಂಧಿಸಿ ಇ.ಡಿ. ಮುಂದೆ ಹಾಜರಾಗಿದ್ದರು. ಆನಂತರ ವಿಚಾರಣೆಗೆ ಹಾಜರಾಗುವಂತೆ ಜಾಕ್ವೆಲಿನ್ ಅವರಿಗೆ ಜಾರಿ ನಿರ್ದೇಶನಾಲಯವು ಕನಿಷ್ಠ ಮೂರು ಬಾರಿ ಸಮನ್ಸ್ ಜಾರಿಗೊಳಿಸಿತ್ತಾದರೂ ಅವರು ಗೈರಾಗಿದ್ದರು

ಈ ಪ್ರಕರಣದಲ್ಲಿ ಜಾಕ್ವೆಲಿನ್ ಸಂಬಂಧಿಸಿದ್ದೆನ್ನಲಾದ ಕೆಲವು ನಿಧಿಗಳು ಹಾಗೂ ಹಣಕಾಸು ವ್ಯವಹಾರಗಳ ಬಗ್ಗೆ ವಿಚಾರಣೆ ನಡೆಸಲು ಬಯಸಿರುವುದಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವಾರ ಇದೇ ಪ್ರಕರಣಕ್ಕೆ ಸಂಬಂಧಿಸಿ ಜಾರಿನಿರ್ದೇಶನಾಲಯವು ಇನ್ನೋರ್ವ ಬಾಲಿವುಡ್ ನಟಿ ನೂರಾ ಫತೇಹಿ ಅವರಿಂದ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು.

ಕಪ್ಪುಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿ ಸುಕೇಶ್ ಚಂದ್ರಶೇಖರ್ ಹಾಗೂ ಆತನ ಪತ್ನಿ ಲೀನಾ ಪೌಲ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿದೆ. ಫೋರ್ಟಿಸ್ ಹೆಲ್ತ್ ಕೇರ್ ಸಂಸ್ಥೆಯ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಆದಿತಿ ಸಿಂಗ್ ಮತ್ತಿತರ ಗಣ್ಯರಿಗೆ ವಂಚನೆಯನ್ನು ಎಸಗಿದ ಆರೋಪಗಳ ತನಿಖೆಗಾಗಿ ದಿಲ್ಲಿ ಪೊಲೀಸರು ಅವರನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News