ಬೃಹತ್ ಮೊತ್ತವಿದ್ದ ಎನ್ಆರ್‌ಐ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಲು ಪ್ರಯತ್ನ: ಬ್ಯಾಂಕ್ ಉದ್ಯೋಗಿಗಳ ಸಹಿತ 12 ಮಂದಿ ಬಂಧನ

Update: 2021-10-20 18:22 GMT

ಹೊಸದಿಲ್ಲಿ, ಅ.20: ಸುಮಾರು 200 ಕೋಟಿ ರೂ. ಹಣ ಜಮೆಯಾಗಿದ್ದ ಎನ್ಆರ್ಐ(ಅನಿವಾಸಿ ಭಾರತೀಯ) ಖಾತೆಯಿಂದ ಹಣವನ್ನು ಲಪಟಾಯಿಸಲು ಪ್ರಯತ್ನಿಸಿದ ಪ್ರಕರಣದಲ್ಲಿ ಖಾಸಗಿ ಬ್ಯಾಂಕ್ ನ 3 ಸಿಬ್ಬಂದಿಗಳ ಸಹಿತ 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ದಿಲ್ಲಿ ಪೊಲೀಸ್(ಸೈಬರ್ ಸೆಲ್) ಉಪಾಯುಕ್ತ ಕೆಪಿಎಸ್ ಮಲ್ಹೋತ್ರಾ ಹೇಳಿದ್ದಾರೆ.

ಅಮೆರಿಕದಲ್ಲಿ ನೆಲೆಸಿದ್ದ ಎನ್ಆರ್ಐ ಖಾತೆದಾರನ ಮೊಬೈಲ್ ನಂಬರ್ ಹೋಲುವ ಮೊಬೈಲ್ ನಂಬರ್ ಪಡೆದುಕೊಂಡು ಆರೋಪಿಗಳು ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಳ್ಳಲು ಪ್ರಯತ್ನಿಸಿದ್ದರು. ಜತೆಗೆ ಮೋಸದಿಂದ ಚೆಕ್ಪುಸ್ತಕ ಪಡೆದುಕೊಂಡು ಹಣ ವರ್ಗಾಯಿಸಲು ಪ್ರಯತ್ನಿಸಿದ್ದಾರೆ. ಬಳಿಕ ಕೆವೈಸಿ ದಾಖಲೆಯಲ್ಲಿ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲೂ ಪ್ರಯತ್ನಿಸಿದ್ದಾರೆ. ಈ ಬಗ್ಗೆ ಎಚ್ಡಿಎಫ್ಸಿ ಬ್ಯಾಂಕ್ನವರು ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಖಾತೆಯಿಂದ ಹಣ ಲಪಟಾಯಿಸಲು ಆನ್ಲೈನ್ ಮೂಲಕ 66 ಬಾರಿ ಪ್ರಯತ್ನಿಸಿರುವುದು ಬೆಳಕಿಗೆ ಬಂದಿದೆ ಎಂದು ಮಲ್ಹೋತ್ರಾ ಮಾಹಿತಿ ನೀಡಿದ್ದಾರೆ.

ತಾಂತ್ರಿಕ ಆಧಾರದಿಂದ ಆರೋಪಿಗಳನ್ನು ಪತ್ತೆಹಚ್ಚಲು ಎಸಿಪಿ ರಮಣ್ ಲಾಂಬಾ ನೇತೃತ್ವದ ತಂಡವೊಂದನ್ನು ರಚಿಸಿದ್ದು ಈ ತಂಡ ಮೊಬೈಲ್ ಲೊಕೇಷನ್ ಆಧಾರದಲ್ಲಿ 20 ಸ್ಥಳಗಳನ್ನು ಗುರುತಿಸಿದೆ. ಬಳಿಕ ದಿಲ್ಲಿ, ಹರ್ಯಾನ ಮತ್ತು ಉತ್ತರಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 12 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಡಿ ಚೌರಾಸಿಯಾ ಎಂಬಾತ ಬ್ಯಾಂಕಿನ ರಿಲೇಷನ್ಶಿಪ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು ಚೆಕ್ ಪುಸ್ತಕ ಒದಗಿಸಲು , ಸಾಲದ ಹಿನ್ನೆಲೆಯಲ್ಲಿ ಕೈಗೊಂಡಿದ್ದ ಖಾತೆಯ ಸ್ಥಂಬನೆಯನ್ನು ರದ್ದುಗೊಳಿಸಲು ಮತ್ತು ಖಾತೆಯಲ್ಲಿ ಮೊಬೈಲ್ ಫೋನ್ ನಂಬರ್ ಪರಿಷ್ಕರಿಸಲು ನೆರವಾಗಿದ್ದ. ಎ ಸಿಂಗ್ ಮತ್ತೊಬ್ಬ ಬ್ಯಾಂಕ್ ಸಿಬಂದಿಯಾಗಿದ್ದು, ಮಹಿಳಾ ಸಿಬಂದಿಯ ಹೆಸರನ್ನು ಬಹಿರಂಗಗೊಳಿಸಿಲ್ಲ.

ಈ ಎನ್ಆರ್ಐ ಖಾತೆ ಹಲವು ಸಮಯಗಳಿಂದ ನಿಷ್ಕ್ರಿಯವಾಗಿದ್ದು ಇದರಲ್ಲಿ ಬೃಹತ್ ಮೊತ್ತ ಜಮೆಗೊಂಡಿದ್ದನ್ನು ತಿಳಿದ ಪ್ರಧಾನ ಸೂತ್ರಗಾರ ಬ್ಯಾಂಕಿನ ಮಹಿಳಾ ಸಿಬಂದಿಗೆ ಆಮಿಷವೊಡ್ಡಿ ಚೆಕ್ ಪುಸ್ತಕ ಮತ್ತು ಖಾತೆಯ ಸ್ಥಂಬನೆಯನ್ನು ರದ್ದುಗೊಳಿಸಲು ಯಶಸ್ವಿಯಾಗಿದ್ದ. ಈಕೆಗೆ 10 ಲಕ್ಷ ರೂ. ಹಣ ಮತ್ತು 15 ಲಕ್ಷ ರೂ. ಮೊತ್ತದ ವಿಮೆ ವ್ಯವಹಾರ (ಬ್ಯಾಂಕ್ ನಿಗದಿಗೊಳಿಸಿದ್ದ ಗುರಿ) ಒದಗಿಸುವ ಭರವಸೆ ನೀಡಲಾಗಿತ್ತು. ಚೆಕ್ ಪುಸ್ತಕ ಪಡೆದ ಆರ್ ಜೈಸ್ವಾಲ್ ಎಂಬಾತ ಅದರ ಹಾಳೆಗಳನ್ನು ತನ್ನ ಸಹವರ್ತಿಗಳಿಗೆ ವಿತರಿಸಿ ಖಾತೆಯಿಂದ ಹಣ ಹಿಂಪಡೆಯಲು ಸೂಚಿಸಿದ್ದಾನೆ.

ಬ್ಯಾಂಕ್ನಿಂದ ಪಡೆಯುವ ಹಣದ 50% ಮೊತ್ತ ತಾವೇ ಇರಿಸಿಕೊಳ್ಳುವಂತೆ ಅವರಿಗೆ ಸೂಚಿಸಿದ್ದ. ಇದಕ್ಕೆ ಬ್ಯಾಂಕ್ ಸಿಬ್ಬಂದಿಗಳಾದ ಚೌರಾಸಿಯಾ ಮತ್ತು ಸಿಂಗ್ ನೆರವಾಗಿದ್ದರು. ಹಣ ಹಿಂಪಡೆಯುವುದು ಅಥವಾ ಇಂಟರ್ನೆಟ್ ಬ್ಯಾಂಕಿಂಗ್, ಕೆವೈಸಿಯಲ್ಲಿ ಮೊಬೈಲ್ ಸಂಖ್ಯೆ ಪರಿಷ್ಕರಣೆ ಬ್ಯಾಂಕ್ ಸಿಬ್ಬಂದಿಗಳ ನೆರವಿದ್ದರೆ ಮಾತ್ರ ಸಾಧ್ಯ ಎಂದು ಮಲ್ಹೋತ್ರಾ ಹೇಳಿದ್ದಾರೆ. ಈ ಹಿಂದೆಯೂ ಇದೇ ಖಾತೆಯಿಂದ ಹಣ ಲಪಟಾಯಿಸಲು ಪ್ರಯತ್ನ ನಡೆದಿದ್ದು ಗಾಝಿಯಾಬಾದ್ ಮತ್ತು ಪಂಜಾಬ್ ನಲ್ಲಿ 2 ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News