ಚೀನಾದಲ್ಲಿ ನಡೆದ ವಿಶ್ವ ಸಂಸ್ಥೆ ಸಭೆಯಲ್ಲಿ ಭಾರತದ ಅಧಿಕಾರಿ ಮಾತನಾಡುವ ವೇಳೆ 'ದಿಢೀರ್ ಮೈಕ್ ವೈಫಲ್ಯ'

Update: 2021-10-21 16:39 GMT
Twitter/@EOIBeijing

ಬೀಜಿಂಗ್, ಅ.21: ಚೀನಾದ ಬೆಲ್ಟ್ ಆ್ಯಂಡ್ ರೋಡ್ ಇನೀಶ್ಯೇಟಿವ್ ಮತ್ತು ಅದರ ಪ್ರಮುಖ ಯೋಜನೆ ಸಿಪಿಇಸಿಗೆ ಭಾರತ ತನ್ನ ಬಲವಾದ ವಿರೋಧವನ್ನು ಇತ್ತೀಚೆಗೆ ನಡೆದ ವಿಶ್ವಸಂಸ್ಥೆಯ ಎರಡನೇ ಸುಸ್ಥಿರ ಸಾರಿಗೆ ಸಮ್ಮೇಳನದಲ್ಲಿ ವ್ಯಕ್ತಪಡಿಸಿದೆ. ಆದರೆ ಈ ವಿಚಾರವಾಗಿ ಮಾತನಾಡುತ್ತಿದ್ದ ಭಾರತೀಯ ಅಧಿಕಾರಿ ಪ್ರಿಯಾಂಕಾ ಸೊಹೊನಿ ಅವರ ಮೈಕ್ ಅಚ್ಚರಿಯೆಂಬಂತೆ ಕೆಲವು ನಿಮಿಷಗಳ ಕಾಲ ಸ್ಥಗಿತಗೊಂಡಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.

ಚೀನಾದಲ್ಲಿ ಅ.14ರಿಂದ 16ರವರೆಗೆ ನಡೆದ ಈ ಸಭೆಯಲ್ಲಿ ಉಂಟಾದ ಈ ದಿಢೀರ್ ಮೈಕ್ ವೈಫಲ್ಯವು ಸರಿಯಾಗಲು ಕೆಲವು ನಿಮಿಷಗಳೇ ಬೇಕಾದವು.

ಮುಂದಿನ ಭಾಷಣಕಾರರ ವೀಡಿಯೊ ಆರಂಭಗೊಂಡಿತಾದರೂ ಆಗ ಮಧ್ಯಪ್ರವೇಶಿಸಿದ ಚೀನಾದ ಮಾಜಿ ವಿದೇಶಾಂಗ ಸಚಿವ ಹಾಗೂ ವಿಶ್ವಸಂಸ್ಥೆಯ ಅಧೀನ ಮಹಾಕಾರ್ಯದರ್ಶಿ ಲಿಯು ಝೆನ್ಮಿನ್ ಅವರು ಭಾರತೀಯ ಅಧಿಕಾರಿ, ಇಲ್ಲಿನ ಭಾರತೀಯ ದೂತಾವಾಸದ ಎರಡನೇ ಕಾರ್ಯದರ್ಶಿ ಸೊಹೊನಿ ಅವರಿಗೆ ತಮ್ಮ ಭಾಷಣ ಮುಂದುವರಿಸಲು ತಿಳಿಸಿದರು.

ಮೈಕ್ ವ್ಯವಸ್ಥೆ ಸರಿಯಾದ ನಂತರ ಮಾತನಾಡಿದ ಲಿಯು, ಕ್ಷಮಿಸಿ, ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾದವು ಹಾಗೂ ಮುಂದಿನ ಭಾಷಣಕಾರರ ವೀಡಿಯೊ ಹಾಕಲಾಯಿತು, ಅದಕ್ಕೆ ಕ್ಷಮೆಯಿರಲಿ, ಸೊಹೊನಿ ಅವರಿಗೆ ತಮ್ಮ ಭಾಷಣ ಮುಂದುವರಿಸಲು ಹೇಳಿದ್ದೇನೆ ಎಂದರು.

ಆಗ ತಮ್ಮ ಭಾಷಣವನ್ನು ಮುಂದುವರಿಸಿದ ಭಾರತೀಯ ಅಧಿಕಾರಿ, ಚೀನಾ ಪಾಕಿಸ್ತಾನ ಇಕನಾಮಿಕ್ ಕಾರಿಡಾರ್ ಯೋಜನೆಯು ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತದೆ ಎಂದರು.

ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಅಧಿಕಾರಕ್ಕೆ ಬಂದ ವರ್ಷವಾದ 2013ರಲ್ಲಿ ಘೋಷಿಸಲಾದ ಈ ಬೆಲ್ಟ್ ಎಂಡ್ ರೋಡ್ ಇನೀಶ್ಯೇಟಿವ್ ಚೀನಾದ ಪ್ರಭಾವ ಹೆಚ್ಚಿಸಲು ಹಾಗೂ ವಾಯುವ್ಯ ಏಷ್ಯಾ, ಮಧ್ಯ ಏಷ್ಯಾ, ಗಲ್ಫ್ ಪ್ರಾಂತ್ಯ, ಆಫ್ರಿಕಾ ಮತ್ತು ಯುರೋಪ್ಗಳ ನಡುವೆ ರಸ್ತೆ ಮತ್ತು ಸಮುದ್ರ ಮಾರ್ಗಗಳನ್ನು ನಿರ್ಮಿಸುವ ಯೋಜನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News