ಹುಡುಗಿಯು ನಡತೆಗೆಟ್ಟವಳು ಎನ್ನುವುದು ಅತ್ಯಾಚಾರ ಆರೋಪಿಯ ಖುಲಾಸೆಗೆ ಕಾರಣವಾಗುವುದಿಲ್ಲ: ಹೈಕೋರ್ಟ್

Update: 2021-10-21 17:34 GMT
photo:PTI

ಕೊಚ್ಚಿ,ಅ.21: ಮಹಿಳೆ ಅಥವಾ ಹುಡುಗಿಯೋರ್ವಳು ಸಡಿಲ ನಡತೆ ಯವಳು ಅಥವಾ ಲೈಂಗಿಕ ಸಂಪರ್ಕದ ಪ್ರವೃತ್ತಿ ಹೊಂದಿದ್ದಾಳೆ ಎನ್ನುವುದು ಯಾರನ್ನಾದರೂ,ವಿಶೇಷವಾಗಿ ತನ್ನ ಪುತ್ರಿಗೆ ‘ಭದ್ರಕೋಟೆ ಮತ್ತು ಆಶ್ರಯದಾತ ’ನಾಗಿರಬೇಕೆಂದು ನಿರೀಕ್ಷಿಸಲಾಗಿರುವ ಓರ್ವ ತಂದೆಯನ್ನು ಅತ್ಯಾಚಾರದ ಆರೋಪದಿಂದ ಮುಕ್ತಗೊಳಿಸಲು ಕಾರಣಗಳಾಗುವುದಿಲ್ಲ ಎಂದು ಹೇಳಿರುವ ಕೇರಳ ಉಚ್ಚ ನ್ಯಾಯಾಲಯವು,‌ ಪದೇಪದೇ ಮಗಳ ಮೇಲೆ ಅತ್ಯಾಚಾರವೆಸಗಿ ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದ ವ್ಯಕ್ತಿಯನ್ನು ತಪ್ಪಿತಸ್ಥ ಎಂದು ಘೋಷಿಸಿದೆ.

ತಂದೆಯೋರ್ವ ಮಗಳ ಮೇಲೆ ಅತ್ಯಾಚಾರ ನಡೆಸುವುದು ಖಜಾನೆಯನ್ನು ಕಾಯಲು ನೇಮಕಗೊಳಿಸಿದ ಕಾವಲುಗಾರನೇ ಅದನ್ನು ಕೊಳ್ಳೆ ಹೊಡೆಯುವುದಕ್ಕಿಂತ ಕೆಟ್ಟದ್ದು ಎಂದು ಉಚ್ಚ ನ್ಯಾಯಾಲಯವು ಹೇಳಿತು.

ತಾನು ಬೇರೆ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕವನ್ನು ಹೊಂದಿರುವುದನ್ನು ತನ್ನ ಪುತ್ರಿಯು ಒಪ್ಪಿಕೊಂಡಿರುವುದರಿಂದ ತನ್ನನ್ನು ಸುಳ್ಳೇ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಸಂತ್ರಸ್ತೆಯ ತಂದೆ ಹೇಳಿದಾಗ ನ್ಯಾ.ಆರ್.ನಾರಾಯಣ ಪಿಶರಾದಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ತಾನು ಅಮಾಯಕ ಎಂಬ ವ್ಯಕ್ತಿಯ ವಾದವನ್ನು ತಿರಸ್ಕರಿಸಿದ ನ್ಯಾಯಾಲಯವು,ಲೈಂಗಿಕ ದೌರ್ಜನ್ಯದ ಫಲವಾಗಿ ಮೇ 2013ರಲ್ಲಿ ಜನಿಸಿದ್ದ ಮಗುವಿನ ಡಿಎನ್ಎ ಪರೀಕ್ಷಾ ವರದಿಯು,ಸಂತ್ರಸ್ತೆಯ ತಂದೆಯು ನವಜಾತ ಶಿಶುವಿನ ತಂದೆಯೂ ಆಗಿದ್ದ ಎನ್ನುವುದನ್ನು ಬಹಿರಂಗಗೊಳಿಸಿದೆ ಎಂದು ಬೆಟ್ಟು ಮಾಡಿತು.
 
ಸಂತ್ರಸ್ತೆ ನಡತೆಗೆಟ್ಟವಳು ಅಥವಾ ಲೈಂಗಿಕ ಸಂಪರ್ಕದ ಪ್ರವೃತ್ತಿಯನ್ನು ಹೊಂದಿದ್ದಾಳೆಂದು ತೋರಿಸಲಾದ ಪ್ರಕರಣದಲ್ಲಿಯೂ ಅದು ಅರೋಪಿಯನ್ನು ಅತ್ಯಚಾರದ ಆರೋಪದಿಂದ ಮುಕ್ತಗೊಳಿಸಲು ಕಾರಣವಾಗುವುದಿಲ್ಲ. ಸಂತ್ರಸ್ತೆ ಹಿಂದೆ ಲೈಂಗಿಕ ಕ್ರಿಯೆಯ ಅನುಭವನ್ನು ಹೊಂದಿದ್ದಳು ಎಂದು ಭಾವಿಸಿದರೂ ಅದು ನಿರ್ಣಾಯಕವಾದ ಪ್ರಶ್ನೆಯಲ್ಲ. ವ್ಯತಿರಿಕ್ತವಾಗಿ ದೂರಿನ ಸಮಯದಲ್ಲಿ ಆರೋಪಿಯು ಸಂತ್ರಸ್ತೆಯ ಮೇಲೆ ಅತ್ಯಾಚಾರವೆಸಗಿದ್ದನೇ ಎನ್ನುವುದು ಉತ್ತರವನ್ನು ಕಂಡುಕೊಳ್ಳಬೇಕಾದ ಪ್ರಶ್ನೆಯಾಗಿದೆ.

 ಇಲ್ಲಿ ವಿಚಾರಣೆಗೊಳಗಾಗಿರುವುದು ಆರೋಪಿಯೇ ಹೊರತು ಸಂತ್ರಸ್ತೆಯಲ್ಲ ಎಂದು ಉಚ್ಚ ನ್ಯಾಯಾಲಯವು ಹೇಳಿತು. ಸಂತ್ರಸ್ತೆಗೆ ರಕ್ಷಣೆ ಮತ್ತು ಬೆಂಬಲವನ್ನು ಒದಗಿಸಲು ತಂದೆಯು ಕರ್ತವ್ಯಬದ್ಧನಾಗಿದ್ದ ಎಂದು ಹೇಳಿದ ನ್ಯಾಯಾಲಯವು,ಆದರೂ ಆತ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅತ್ಯಾಚಾರವನ್ನು ನಡೆಸಿದ್ದಾನೆ, ಸಂತ್ರಸ್ತೆಯು ಅನುಭವಿಸಿದ ನೋವನ್ನು ಯಾರೂ ಊಹಿಸಲೂ ಸಾಧ್ಯವಿಲ್ಲ. ನಿಷಿದ್ಧ ಸಂಭೋಗದ ಈ ಕೃತ್ಯವು ಆಕೆಯ ಮನಸ್ಸಿನ ಮೇಲೆ ಒತ್ತಿರುವ ಮುದ್ರೆಯನ್ನು ಕಡೆಗಣಿಸಲಾಗದು, ಆಕೆ ಮುಂಬರುವ ವರ್ಷಗಳಲ್ಲಿ ಮಾನಸಿಕ ಬೇಗುದಿ ಮತ್ತು ವೇದನೆಯನ್ನು ಅನುಭವಿಸಬೇಕಾಗಬಹುದು ಎಂದು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News