100 ಕೋಟಿ ಡೋಸ್ ಲಸಿಕೆಯ ದಾಖಲೆ ಬರೆದ ಭಾರತ ಇತಿಹಾಸ ರಚಿಸಿದೆ: ಪ್ರಧಾನಿ ಮೋದಿ ಶ್ಲಾಘನೆ

Update: 2021-10-21 17:37 GMT

ಹೊಸದಿಲ್ಲಿ, ಅ.21: ಕೊರೋನ ಸೋಂಕಿನ ವಿರುದ್ಧದ 100 ಕೋಟಿ ಡೋಸ್ ಲಸಿಕೆಯನ್ನು ದೇಶದ ಜನತೆಗೆ ನೀಡುವ ಮೂಲಕ ಭಾರತ ಗುರುವಾರ ನೂತನ ಮೈಲುಗಲ್ಲನ್ನು ಸ್ಥಾಪಿಸಿದ್ದು ಇದು ಭಾರತೀಯ ವಿಜ್ಞಾನದ ಗೆಲುವಾಗಿದೆ ಮತ್ತು 130 ಕೋಟಿ ಭಾರತೀಯರ ಸಾಮೂಹಿಕ ಹುರುಪಿನ ದ್ಯೋತಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ದಿಲ್ಲಿಯ ಆರ್ಎಂಎಲ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಲಸಿಕೀಕರಣ ಕಾರ್ಯಕ್ರಮವನ್ನು ವೀಕ್ಷಿಸಿದ ಪ್ರಧಾನಿ ಮೋದಿ, ಈ ದಿನ ಇತಿಹಾಸದಲ್ಲಿ ದಾಖಲಾಗಲಿದೆ ಎಂದು ಶ್ಲಾಘಿಸಿದರು. ದೇಶದ 1.3 ಬಿಲಿಯ ಜನಸಂಖ್ಯೆಯ 75% ವಯಸ್ಕರು ಒಂದು ಡೋಸ್ ಲಸಿಕೆ ಪಡೆದಿದ್ದರೆ ಸುಮಾರು 30% ಜನರು ಸಂಪೂರ್ಣ ಲಸಿಕೆ ಪಡೆದಿದ್ದಾರೆ . ದೇಶದ 944 ಮಿಲಿಯ ವಯಸ್ಕರು ಈ ವರ್ಷ ಸಂಪೂರ್ಣ ಲಸಿಕೆ ಪಡೆಯುವುದು ನಮ್ಮ ಗುರಿಯಾಗಿದೆ ಎಂದು ಸರಕಾರ ಹೇಳಿದೆ. 

ಉತ್ತರಪ್ರದೇಶ, ಮಹಾರಾಷ್ಟ್ರ, ಪ.ಬಂಗಾಳ, ಗುಜರಾತ್ ಮತ್ತು ಮಧ್ಯಪ್ರದೇಶ ಅತ್ಯಧಿಕ ಲಸಿಕೆ ಹಾಕಿದ ರಾಜ್ಯಗಳಲ್ಲಿ ಮೊದಲ 5 ಸ್ಥಾನಗಳಲ್ಲಿವೆ. ದೇಶದಲ್ಲಿ ಲಸಿಕೀಕರಣ ಕಾರ್ಯಕ್ರಮ ಆರಂಭವಾದ 9 ತಿಂಗಳಲ್ಲೇ ಈ ಮೈಲುಗಲ್ಲನ್ನು ಸ್ಥಾಪಿಸಿರುವುದು ಅಸಾಧಾರಣ ಕಾರ್ಯವಾಗಿದೆ . ಆದರೆ, 75%ಕ್ಕೂ ಹೆಚ್ಚು ವಯಸ್ಕರು 1 ಡೋಸ್ ಪಡೆದಿದ್ದರೂ, 25% ಜನತೆ ಇನ್ನೂ ಲಸಿಕೆ ಪಡೆಯಬೇಕಿದೆ ಎಂಬುದನ್ನು ಗಮನಿಸಬೇಕು ಎಂದು ನೀತಿ ಆಯೋಗದ ಸದಸ್ಯ ವಿಕೆ ಪಾಲ್ ಹೇಳಿದ್ದಾರೆ. 

ಬಲಿಷ್ಟ ರಾಜಕೀಯ ನಾಯಕತ್ವ, ಆರೋಗ್ಯ ಕ್ಷೇತ್ರದ ಕಾರ್ಯಕರ್ತರ ಮತ್ತು ಮುಂಚೂಣಿ ಕಾರ್ಯಪಡೆಯ ಸಮರ್ಪಣಾ ಮನೋಭಾವದ ಕಾರ್ಯವಿಲ್ಲದಿದ್ದರೆ ಅಲ್ಪಾವಧಿಯಲ್ಲಿ ಇಂತಹ ಗಮನಾರ್ಹ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಶ್ಯಾ ವಲಯದ ನಿರ್ದೇಶಕಿ ಡಾ. ಪೂನಂ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ. ರೈಲು, ವಿಮಾನ ಮತ್ತು ಹಡಗಿನಲ್ಲಿ ಲೌಡ್ಸ್ಪೀಕರ್ ಮೂಲಕ ಘೋಷಣೆ ಮಾಡುವ ಮೂಲಕ ಈ ದಾಖಲೆಯ ಸಂಭ್ರಮಾಚರಣೆಗೆ ಸರಕಾರ ಯೋಜನೆ ರೂಪಿಸಿದೆ. ಗಾಯಕ ಕೈಲಾಶ್ ಖೇರ್ ಹಾಡಿರುವ ಗಾಯನವನ್ನೂ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಬಿಡುಗಡೆಗೊಳಿಸಲಿದ್ದಾರೆ. ಕೆಂಪುಕೋಟೆಯ ಮೇಲೆ ಸುಮಾರು 1,400 ಕಿ.ಗ್ರಾಂ ತೂಕದ ಬೃಹತ್ ರಾಷ್ಟ್ರಧ್ವಜವನ್ನು ಅರಳಿಸಲಾಗುವುದು ಎಂದು ಸರಕಾರ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News