ಆದಿತ್ಯನಾಥ್ ಕಾರ್ಯಕ್ರಮದಲ್ಲಿ ಗಂಭೀರ ಭದ್ರತಾ ಲೋಪ: ನಾಲ್ವರು ಪೊಲೀಸರು ಅಮಾನತು

Update: 2021-10-22 03:40 GMT
ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ (Photo source: PTI)

ಲಕ್ನೋ, ಅ.22: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಪಾಲ್ಗೊಂಡಿದ್ದ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣಕ್ಕೆ ರಿವಾಲ್ವರ್ ಹೊಂದಿದ ವ್ಯಕ್ತಿಯೊಬ್ಬ ನುಗ್ಗಿದ ಘಟನೆ ಗಂಭೀರ ಭದ್ರತಾ ಲೋಪಕ್ಕೆ ಸಾಕ್ಷಿಯಾಗಿದೆ. ಘಟನೆ ಹಿನ್ನೆಲೆಯಲ್ಲಿ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಬಸ್ತಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಆದಿತ್ಯನಾಥ್ ಆಗನಮಕ್ಕೆ ಸ್ವಲ್ಪ ಮೊದಲು ಲೈಸನ್ಸ್‌ಯುಕ್ತ ರಿವಾಲ್ವರ್ ಹೊಂದಿದ್ದ ವ್ಯಕ್ತಿ ಪ್ರವೇಶಿಸಿದ್ದು ಆತಂಕಕ್ಕೆ ಕಾರಣವಾಯಿತು. ತಕ್ಷಣವೇ ವ್ಯಕ್ತಿಯನ್ನು ಸಭಾಗೃಹದಿಂದ ಹೊರಕ್ಕೆ ಕಳುಹಿಸಲಾಯಿತು. ಕರ್ತವ್ಯ ಲೋಪ ಆರೋಪದಲ್ಲಿ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಬಸ್ತಿ ಜಿಲ್ಲೆಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಕಾರ್ಯಕ್ರಮವೊಂದರಲ್ಲಿ ಆದಿತ್ಯನಾಥ್ ಪಾಲ್ಗೊಳ್ಳಬೇಕಿತ್ತು. ಭದ್ರತಾ ಕರ್ತವ್ಯಕ್ಕಾಗಿ ಜಿಲ್ಲೆಯ ಹಾಗೂ ಇತರ ಜಿಲ್ಲೆಗಳ ಪೊಲೀಸರನ್ನು ನಿಯೋಜಿಸಲಾಗಿತ್ತು. ಸಿಎಂ ಆಗಮಿಸುವ 45 ನಿಮಿಷ ಮೊದಲು ಗೌರ್ ತಾಲೂಕಿನ ಪ್ರತಿನಿಧಿ ಜತ್‌ಶಂಕರ್ ಶುಕ್ಲಾ ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭ ಶುಕ್ಲಾ ಅವರ ತಮ್ಮ ಅಮರ್‌ದೀಪ್‌ನ ಭಾವ ಜಿತೇಂದ್ರ ಪಾಂಡೆ ಲೈಸನ್ಸ್‌ಯುಕ್ತ ರಿವಾಲ್ವರ್‌ನೊಂದಿಗೆ ಸಭಾಗೃಹ ಪ್ರವೇಶಿಸಿದ. ತಕ್ಷಣವೇ ಪೊಲೀಸರು ಆತನನ್ನು ಎಳೆದು ಹೊರಕ್ಕೆ ಹಾಕಿದರು ಎನ್ನಲಾಗಿದೆ.

"ಆರಂಭಿಕ ತನಿಖೆಯಲ್ಲಿ ಬಸ್ತಿ ಜಿಲ್ಲೆಯಲ್ಲಿ ನಿಯೋಜಿಸಿದ್ದ ನಾಲ್ವರು ಸೇರಿದಂತೆ ಏಳು ಸಿಬ್ಬಂದಿಯ ನಿರ್ಲಕ್ಷ್ಯ ದೃಢಪಟ್ಟಿದೆ" ಎಂದು ಎಸ್ಪಿ ಆಶೀಶ್ ಶ್ರೀವಾಸ್ತವ ಹೇಳಿದ್ದಾರೆ. ಬಸ್ತಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ನಾಲ್ಕು ಪೊಲೀಸರನ್ನು ಅಮಾನತು ಮಾಡಲಾಗಿದೆ ಹಾಗೂ ಆಯಾ ಜಿಲ್ಲೆಯ ಎಸ್ಪಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News