ಉಯಿಘರ್ ಮುಸ್ಲಿಂ ಸಮುದಾಯದ ಹಕ್ಕುಗಳನ್ನು ಗೌರವಿಸಿ: ಚೀನಾದ ಮೇಲೆ ಹೆಚ್ಚಿದ ಅಂತರಾಷ್ಟ್ರೀಯ ಒತ್ತಡ

Update: 2021-10-22 15:49 GMT

ಬೀಜಿಂಗ್, ಅ.22: ಕ್ಸಿನ್ ಜಿಯಾಂಗ್ ನಲ್ಲಿರುವ ಉಯಿಘರ್ ಸಮುದಾಯದವರ ಹಕ್ಕನ್ನು ಗೌರವಿಸುವಂತೆ ಆಗ್ರಹಿಸುವ 43 ದೇಶಗಳ ಹೇಳಿಕೆಯನ್ನು ಗುರುವಾರ ವಿಶ್ವಸಂಸ್ಥೆಯಲ್ಲಿ ಓದಿ ಹೇಳಲಾಗಿದ್ದು, ಇದಕ್ಕೆ ಚೀನಾ ತೀವ್ರ ಆಕ್ರೋಶ ಮತ್ತು ಆಕ್ಷೇಪ ಸೂಚಿಸಿದೆ.

ಚೀನಾವು ಉಯಿಘರ್ ಸಮುದಾಯದ ವಿರುದ್ಧ ದೀರ್ಘಾವಧಿಯಿಂದ ನಿರಂತರ ಚಿತ್ರಹಿಂಸೆ, ಬಲವಂತದ ಸಂತಾನ ಶಕ್ತಿಹರಣ, ಅಪಹರಣ ಸೇರಿದಂತೆ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ತೊಡಗಿದೆ ಎಂದು ಅಮೆರಿಕ, ಹಲವು ಯುರೋಪ್ ದೇಶಗಳು ಹಾಗೂ ಏಶ್ಯದ ದೇಶಗಳು ಸಹಿ ಹಾಕಿದ ಹೇಳಿಕೆಯಲ್ಲಿ ಘೋಷಿಸಲಾಗಿದೆ.

ಕ್ಸಿನ್ ಜಿಯಾಂಗ್ ಸ್ವಾಯತ್ತ ವಲಯದಲ್ಲಿನ ಪರಿಸ್ಥಿತಿ ಬಗ್ಗೆ ನಾವು ಆತಂಕಿತರಾಗಿದ್ದೇವೆ. ಇಲ್ಲಿರುವ ‘ರಾಜಕೀಯ ಮರುಶಿಕ್ಷಣಾ ಶಿಬಿರ’ಗಳಲ್ಲಿ ಮಿಲಿಯನ್ಗೂ ಅಧಿಕ ಜನರನ್ನು ನಿರಂಕುಶವಾಗಿ ಬಂಧನಲ್ಲಿರಿಸಿರುವ ಬಗ್ಗೆ ವಿಶ್ವಾಸಾರ್ಹ ವರದಿ ಲಭಿಸಿದೆ. ಈ ಹಿನ್ನೆಲೆಯಲ್ಲಿ , ವಿಶ್ವಸಂಸ್ಥೆಯ ಮಾನವಹಕ್ಕು ಹೈಕಮಿಷನರ್ ಹಾಗೂ ಇತರ ಅಧಿಕಾರಿಗಳ ಸಹಿತ ಸ್ವತಂತ್ರ ವೀಕ್ಷಕರಿಗೆ ಕ್ಸಿನ್ ಜಿಯಾಂಗ್ ಪ್ರಾಂತಕ್ಕೆ ತಕ್ಷಣ ಭೇಟಿ ನೀಡಿ ಅರ್ಥಪೂರ್ಣ ಮತ್ತು ಅನಿರ್ಬಂಧಿತ ಪರಿಶೀಲನೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸುವ ಘೋಷಣೆಯನ್ನು ವಿಶ್ವಸಂಸ್ಥೆಯಲ್ಲಿ ಫ್ರಾನ್ಸ್ ನ ಪ್ರತಿನಿಧಿ ಓದಿ ಹೇಳಿದರು.

ವಿಶ್ವಸಂಸ್ಥೆಯಲ್ಲಿ 2019 ಮತ್ತು 2020ರಲ್ಲಿ ಮಾಡಿದ್ದ ಇದೇ ರೀತಿಯ ಘೋಷಣೆಯಲ್ಲೂ ಚೀನಾವು ಉಯಿಘರ್ ಮುಸ್ಲಿಂ ಸಮುದಾಯದ ಬಗ್ಗೆ ಹೊಂದಿರುವ ನೀತಿಯನ್ನು ಖಂಡಿಸಲಾಗಿತ್ತು ಮತ್ತು ಚೀನಾ ಜನಾಂಗೀಯ ಹತ್ಯೆಯಲ್ಲಿ ತೊಡಗಿದೆ ಎಂದು ಅಮೆರಿಕ ಆರೋಪಿಸಿತ್ತು. ಇದಕ್ಕೆ ಪ್ರತಿಯಾಗಿ, ಈ ಘೋಷಣೆಯನ್ನು ಬೆಂಬಲಿಸದಂತೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಮೇಲೆ ಚೀನಾ ರಾಜತಾಂತ್ರಿಕ ಒತ್ತಡ ಹೆಚ್ಚಿಸಿತ್ತು .

ಈ ಘೋಷಣೆಯ ಬಗ್ಗೆ ತೀವ್ರ ಆಕ್ಷೇಪ ಸೂಚಿಸಿರುವ ವಿಶ್ವಸಂಸ್ಥೆಯಲ್ಲಿನ ಚೀನಾದ ರಾಯಭಾರಿ ಝಾಂಗ್ ಝುನ್, ಇದೊಂದು ಸುಳ್ಳಿನ ಕಂತೆ ಮತ್ತು ಚೀನಾವನ್ನು ಗಾಸಿಗೊಳಿಸುವ ಷಡ್ಯಂತ್ರವಾಗಿದೆ. ಅಮೆರಿಕ, ಫ್ರಾನ್ಸ್ ಹಾಗೂ ಬ್ರಿಟನ್ ದೇಶಗಳ ಮಾನವಹಕ್ಕು ದಾಖಲೆ ಅತ್ಯಂತ ಭೀಕರವಾಗಿದೆ. ಅಮೆರಿಕವು ಮೂಲ ನಿವಾಸಿಗಳ ‘ಶುದ್ಧೀಕರಣ’ ಕಾರ್ಯದಲ್ಲಿ ತೊಡಗಿರುವ ಬಗ್ಗೆ ಮಾಹಿತಿಯಿದೆ, ತನ್ನ ಈ ಹಿಂದಿನ ವಸಾಹತುಗಳಲ್ಲಿ ಮಾನವೀಯತೆಯ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಫ್ರಾನ್ಸ್ ಆರೋಪಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. 

ಕ್ಸಿನ್ ಜಿಯಾಂಗ್ ನಲ್ಲಿ ನಿರಂತರ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು ಜನತೆ ಪ್ರತೀ ದಿನ ಸ್ವಯಂ ಪ್ರಗತಿ ಹೊಂದುತ್ತಿದ್ದಾರೆ ಮತ್ತು ಇಲ್ಲಿ ನಡೆದಿರುವ ಅಭಿವೃದ್ಧಿಯ ಬಗ್ಗೆ ಹೆಮ್ಮೆಯ ಭಾವನೆ ಅವರಲ್ಲಿದೆ ಎಂದು ಝಾಂಗ್ ಝುನ್ ಹೇಳಿದ್ದಾರೆ. ಈ ಪ್ರದೇಶಕ್ಕೆ ಸ್ನೇಹಪರ ಭೇಟಿಗೆ ವ್ಯವಸ್ಥೆ ಮಾಡಲು ಚೀನಾ ತಯಾರಿದೆ, ಆದರೆ ಮಾನವಹಕ್ಕು ಆಯುಕ್ತರಿಂದ ತನಿಖೆಗೆ ಅವಕಾಶವಿಲ್ಲ ಎಂದವರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News