ಶಾಲೆಗಳ ಮುಚ್ಚುಗಡೆಯಿಂದ ದುರ್ಬಲ ಸಮುದಾಯಗಳ ಮಕ್ಕಳ ಮೇಲೆ ತೀವ್ರ ದುಷ್ಪರಿಣಾಮ: ಸಮೀಕ್ಷೆ

Update: 2021-10-23 14:27 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಅ.23: ಕೋವಿಡ್-19 ಲಾಕ್‌ ಡೌನ್ ಮುನ್ನ ಶಾಲೆಗಳಲ್ಲಿ ತಾವು ಕಲಿತಿದ್ದನ್ನು ಹೆಚ್ಚಿನ ಮಕ್ಕಳು ಸಂಪೂರ್ಣವಾಗಿ ಮರೆತುಬಿಟ್ಟಿದ್ದಾರೆ ಎನ್ನುವುದನ್ನು ಸಂಶೋಧಕರ ತಂಡ ರೋಡ್ ಸ್ಕಾಲರ್ಸ್ ಕಳೆದ ಆಗಸ್ಟ್ ನಲ್ಲಿ ದೇಶದ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿದ್ದ ‘ಸ್ಕೂಲ್ ಸರ್ವೆ ’ಯು ಬಹಿರಂಗಗೊಳಿಸಿದೆ. ಈ ಸರ್ವೆಯ ಅಂಗವಾಗಿ ರಾಜಸ್ಥಾನದ ರಾಜಧಾನಿ ಜೈಪುರದ ಕಠಪುತಲಿ ನಗರ ಬಸ್ತಿ ಮತ್ತು ಹಥರೋಯಿ ಪ್ರದೇಶಗಳಲ್ಲಿ ಸಮೀಕ್ಷೆಯನ್ನು ನಡೆಸಿದ್ದ ಸುದ್ದಿ ಜಾಲತಾಣ thewire.in  ಶಾಲೆಗಳ ಮುಚ್ಚುವಿಕೆಯು ದುರ್ಬಲ ಸಮುದಾಯಗಳ ಮಕ್ಕಳ ಮೇಲೆ ತೀವ್ರ ದುಷ್ಪರಿಣಾಮಗಳನ್ನುಂಟು ಮಾಡಿದೆ ಎಂದು ತನ್ನ ವರದಿಯಲ್ಲಿ ಬೆಟ್ಟು ಮಾಡಿದೆ.

ಕೋವಿಡ್ ಲಾಕ್ಡೌನ್‌ ನಿಂದಾಗಿ ಶಾಲೆಗಳು ಸುದೀರ್ಘ ಅವಧಿಗೆ ಮುಚ್ಚಲ್ಪಟ್ಟ ದೇಶಗಳಲ್ಲಿ ಭಾರತವೂ ಒಂದಾಗಿದ್ದು,ದೇಶಾದ್ಯಂತ ಸರಾಸರಿ 69 ವಾರಗಳ ಕಾಲ ಶಾಲೆಗಳಿಗೆ ಬೀಗ ಜಡಿಯಲಾಗಿತ್ತು ಮತ್ತು ಇದು ಕೋಟ್ಯಂತರ ಶಾಲಾ ಮಕ್ಕಳನ್ನು ಅತಂತ್ರಗೊಳಿಸಿತ್ತು. ಅಲ್ಲಿಂದೀಚಿಗೆ ಶಾಲೆಗಳ ಪುನರಾರಂಭ ಕುರಿತು ಎಲ್ಲ ಚರ್ಚೆಗಳು ಆನ್ಲೈನ್ ಶಿಕ್ಷಣದ ಸೌಲಭ್ಯವನ್ನು ಹೊಂದಿದವರಿಗೆ ಮಾತ್ರ ಸೀಮಿತವಾಗಿದ್ದು, ಅಂತರ್ಜಾಲ ಸೌಲಭ್ಯವಿಲ್ಲದ ಭಾರೀ ಸಂಖ್ಯೆಯ ಮಕ್ಕಳನ್ನು ಕಡೆಗಣಿಸಲಾಗಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ದ ಅಂಕಿಅಂಶಗಳಂತೆ ಗ್ರಾಮೀಣ ಪ್ರದೇಶಗಳಲ್ಲಿ ಶೇ.70ಕ್ಕೂ ಅಧಿಕ ಜನರು ಅಂತರ್ಜಾಲ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ರಾಜಸ್ಥಾನದ ಮಟ್ಟಿಗೆ ಹೇಳುವುದಾದರೆ ಬಾಂಸವಾಡಾ ಜಿಲ್ಲೆಯ ಮಾಧ್ಯಮಿಕ ಶಾಲೆಯೊಂದರಲ್ಲಿ ಕೇವಲ ಶೇ.10ರಷ್ಟು ಮಕ್ಕಳು ಸ್ಮಾರ್ಟ್‌ ಫೋನ್ ಗಳನ್ನು ಹೊಂದಿದ್ದಾರೆ ಎಂದು ಆಂಗ್ಲ ದೈನಿಕವೊಂದು ಈ ಹಿಂದೆ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ಸ್ಥಿತಿ ಎಷ್ಟು ಕೆಟ್ಟದಾಗಿದೆ ಎನ್ನುವುದಕ್ಕೆ ಇದೊಂದು ನಿದರ್ಶನ ಮಾತ್ರ.

ಆನ್ಲೈನ್ ಶಿಕ್ಷಣದ ಇನ್ನಷ್ಟು ತಳಮಟ್ಟದ ವಾಸ್ತವಗಳನ್ನು ತಿಳಿದುಕೊಳ್ಳಲು ಜೈಪುರದ ಮೇಲ್ಕಾಣಿಸಿದ ಪ್ರದೇಶಗಳಲ್ಲಿಯ ಸುಮಾರು 45 ಮನೆಗಳ ಸಮೀಕ್ಷೆಯನ್ನು thewire.in   ನಡೆಸಿತ್ತು. ತುಲನಾತ್ಮಕವಾಗಿ ವಂಚಿತ ಕುಗ್ರಾಮಗಳು ಮತ್ತು ಬಸ್ತಿಗಳಲ್ಲಿಯ 1,400ಕ್ಕೂ ಅಧಿಕ ಮಕ್ಕಳನ್ನು ಗುರಿಯಾಗಿಸಿಕೊಂಡು ನಡೆಸಲಾದ ಸಮೀಕ್ಷೆಯಲ್ಲಿ ಇತರ ಅಂಶಗಳೊಂದಿಗೆ ನಗರ ಪ್ರದೇಶಗಳಲ್ಲಿ ಕೇವಲ ಶೇ.24 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಶೇ.8ರಷ್ಟು ಮಕ್ಕಳು ಆನ್ಲೈನ್ನಲ್ಲಿ ವ್ಯಾಸಂಗ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಶಿಕ್ಷಣದಲ್ಲಿನ ನಗರ-ಗ್ರಾಮೀಣ ವಿಭಜನೆಯು ಸಮೀಕ್ಷೆಯ ಫಲಿತಾಂಶಗಳಲ್ಲಿ ಸ್ಪಷ್ಟವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಶೇ.28ರಷ್ಟು ಮಕ್ಕಳು ನಿಯಮಿತವಾಗಿ ಶಾಲೆಗಳಿಗೆ ಹಾಜರಾಗುತ್ತಿದ್ದರು ಮತ್ತು ಶೇ.37ರಷ್ಟು ಮಕ್ಕಳು ಶಾಲೆಗಳ ದಿಕ್ಕಿಗೆ ಮುಖವನ್ನೇ ಮಾಡಿರಲಿಲ್ಲ. ಸರಳವಾದ ಓದುವಿಕೆ ಪರೀಕ್ಷೆಯಲ್ಲಿ ಸುಮಾರು ಶೇ.50ರಷ್ಟು ಗ್ರಾಮೀಣ ಮಕ್ಕಳಿಗೆ ಕೆಲವೇ ಶಬ್ದಗಳನ್ನು ಓದಲೂ ಸಾಧ್ಯವಾಗಿರಲಿಲ್ಲ ಮತ್ತು ಲಾಕ್ಡೌನ್ ಬಳಿಕ ತಮ್ಮ ಮಕ್ಕಳ ಓದುವಿಕೆ/ಬರೆಯುವಿಕೆ ಸಾಮರ್ಥ್ಯಗಳು ಕಡಿಮೆಯಾಗಿವೆ ಎಂದು ನಗರ ಪ್ರದೇಶಗಳಲ್ಲಿಯ ಮೂರನೇ ಎರಡರಷ್ಟು ಪೋಷಕರು ಭಾವಿಸಿದ್ದಾರೆ. ಶಾಲೆಗಳು ಸಾಧ್ಯವಾದಷ್ಟು ಶೀಘ್ರ ಆರಂಭಗೊಳ್ಳಬೇಕು ಎಂದು ಗ್ರಾಮೀಣ ಪ್ರದೇಶಗಳಲ್ಲಿಯ ಶೇ.97ರಷ್ಟು ಪೋಷಕರು ಬಯಸಿದ್ದಾರೆ.

ಸಮೀಕ್ಷೆಯ ಫಲಿತಾಂಶಗಳು ಲಾಕ್ಡೌನ್ನಿಂದಾಗಿ ಶಾಲೆಗಳ ಮುಚ್ಚುವಿಕೆಯು ದುರ್ಬಲ ಸಮುದಾಯಗಳ ಮಕ್ಕಳ ಮೇಲೆ ಉಂಟು ಮಾಡಿರುವ ವಿನಾಶಕಾರಿ ದುಷ್ಪರಿಣಾಮಗಳನ್ನು ತೋರಿಸಿದೆ. ಜೈಪುರ ಇದಕ್ಕೆ ಅಪವಾದವಾಗಿಲ್ಲ ಎನ್ನುವುದು ಅಚ್ಚರಿಯನ್ನೇನೂ ಮೂಡಿಸಿಲ್ಲ.

 ಆನ್ಲೈನ್ ಶಿಕ್ಷಣವನ್ನು ಪಡೆಯಲು ಸ್ಮಾರ್ಟ್ ಫೋನ್ ಗಳ ಕೊರತೆ ಮತ್ತು ರಾಜ್ಯದಲ್ಲಿ ಸುಮಾರು 8,000 ಖಾಸಗಿ ಶಾಲೆಗಳ ಮುಚ್ಚುವಿಕೆಯಿಂದಾಗಿ ಹಿಂದಿನ ವರ್ಷದ 81 ಲ.ಕ್ಕೆ ಹೋಲಿಸಿದರೆ 2020-21ರಲ್ಲಿ ಸುಮಾರು 88 ಲ.ಮಕ್ಕಳು ಸರಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ.

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಹೆಚ್ಚಿನ ಮಕ್ಕಳು ಸಮೀಪದ ಸರಕಾರಿ ಶಾಲೆಗಳಿಗೆ ದಾಖಲಾದವರು. ಈ ಮಕ್ಕಳು ಶಾಲೆಗೆ ಹೋಗುವುದು ಪಡಿತರ ವಿತರಣೆ ಸಂದರ್ಭದಲ್ಲಿ ಮಾತ್ರ. ಇದನ್ನು ಬಿಟ್ಟರೆ ಈ ಆಫ್ಲೈನ್ ಮಕ್ಕಳಲ್ಲಿ ಹೆಚ್ಚಿನವರಿಗೆ ಶಾಲೆ ಅಥವಾ ಶಿಕ್ಷಕರ ಸಂಪರ್ಕವೂ ಇಲ್ಲ,ಬೆಂಬಲವೂ ಇಲ್ಲ. ದಿನಗಳೆದಂತೆ ಮಸುಕಾಗುತ್ತಿರುವ ಉಜ್ವಲ ಭವಿಷ್ಯದ ಬಗ್ಗೆ ಕನಸು ಕಾಣುತ್ತ ಸೋಮಾರಿಗಳಾಗಿ ಮನೆಗಳಲ್ಲಿ ಕುಳಿತುಕೊಂಡು ಅಥವಾ ಮನೆಗೆಲಸಗಳಲ್ಲಿ ನೆರವಾಗುತ್ತ ಈ ಮಕ್ಕಳು ಕಾಲ ಕಳೆಯುತ್ತಿದ್ದಾರೆ.

ಬಸ್ತಿಯಲ್ಲಿನ ಹೆಚ್ಚಿನ ನಿವಾಸಿಗಳು ಬದುಕುಳಿಯಲು ಹೋರಾಡುತ್ತಿದ್ದಾರೆ. ಲಾಕ್ಡೌನ್ ಬಳಿಕ ಅಗತ್ಯ ವಸ್ತುಗಳನ್ನು ಕೊಳ್ಳಲೂ ತಮ್ಮ ಬಳಿ ಹಣವಿಲ್ಲ ಮತ್ತು ಬದುಕುಳಿಯಲು ಮಕ್ಕಳು ಶಾಲೆಯಿಂದ ತರುವ ಪಡಿತರವನ್ನೇ ನೆಚ್ಚಿಕೊಳ್ಳಬೇಕಾಗಿದೆ ಎಂದು ಹಲವಾರು ಮಹಿಳೆಯರು ಅಳಲು ತೋಡಿಕೊಂಡರು.

ಇಂತಹ ಕುಟುಂಬಗಳ ಮಕ್ಕಳ ಪಾಲಿಗೆ ಆನ್ಲೈನ್ ಶಿಕ್ಷಣವು ಒಂದು ಮಿಥ್ಯೆಯಾಗಿದೆ. ಸಮಸ್ಯೆ ಆಫ್ಲೈನ್ ಮಕ್ಕಳಿಗೆ ಮಾತ್ರ ಸೀಮಿತವಲ್ಲ. ಸ್ಮಾರ್ಟ್ ಫೋನ್ ಗಳನ್ನು ಹೊಂದಿರುವ ಮಕ್ಕಳೂ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೆಚ್ಚಿನ ಮಕ್ಕಳಿಗೆ ಪ್ರತಿದಿನ 10 ನಿಮಿಷ ಅವಧಿಯ ವೀಡಿಯೊ ಬಿಟ್ಟರೆ ಶಾಲೆಯಿಂದ ಅಥವಾ ಶಿಕ್ಷಕರಿಂದ ಇತರ ಯಾವುದೇ ಬೆಂಬಲ ದೊರಕಿಲ್ಲ.

ದೇಶದಲ್ಲಿ ಶಾಲೆಗಳ ಮುಚ್ಚುವಿಕೆಯು ಮಕ್ಕಳ ಶಿಕ್ಷಣದ ಮೇಲೆ,ವಿಶೇಷವಾಗಿ ದುರ್ಬಲ ಜಾತಿಗಳು ಮತ್ತು ವರ್ಗಗಳ ಮಕ್ಕಳ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರಿವೆ ಎನ್ನುವುದನ್ನು ಸಮೀಕ್ಷೆಯ ಫಲಿತಾಂಶಗಳು ಸ್ಪಷ್ಟಪಡಿಸಿವೆ. ನಾವು ನಮ್ಮ ಮಕ್ಕಳ ಭವಿಷ್ಯವನ್ನು ಗಂಭೀರವಾಗಿ ಪರಿಗಣಿಸಿದ್ದರೆ ಶಾಲೆಗಳ,ವಿಶೇಷವಾಗಿ ರಾಜಸ್ಥಾನ ಮತ್ತು ಇತರ ಕಡೆಗಳಲ್ಲಿ ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಮಟ್ಟಗಳಲ್ಲಿ ಶಾಲೆಗಳ  ಪುನರಾರಂಭದ ತುರ್ತು ಅಗತ್ಯವಿದೆ ಎಂದು thewire.in ವರದಿಯಲ್ಲಿ ಒತ್ತಿ ಹೇಳಿದೆ.
 

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News