ಲಸಿಕೆ ಅಭಿಯಾನದ ಯಶಸ್ಸಿನ ಹಿನ್ನೆಲೆಯಲ್ಲಿ ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ:ಪ್ರಧಾನಿ

Update: 2021-10-23 18:09 GMT

ಹೊಸದಿಲ್ಲಿ,ಅ.23: ಲಸಿಕೆ ಅಭಿಯಾನದ ಯಶಸ್ಸಿನ ಹಿನ್ನೆಲೆಯಲ್ಲಿ ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ ಎಂದು ಶನಿವಾರ ಇಲ್ಲಿ ಭಾರತೀಯ ಕೋವಿಡ್ ಲಸಿಕೆ ತಯಾರಕರೊಂದಿಗಿನ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರು. ಇದೇ ವೇಳೆ ದೇಶದ ಯಶೋಗಾಥೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಕ್ಕಾಗಿ ಲಸಿಕೆ ತಯಾರಕರನ್ನು ಅವರು ಪ್ರಶಂಸಿಸಿದರು.

ಕೇವಲ ಒಂಭತ್ತು ತಿಂಗಳ ಅವಧಿಯಲ್ಲಿ 100 ಕೋಟಿ ಡೋಸ್ ಲಸಿಕೆಯನ್ನು ನೀಡಿರುವ ಭಾರತದ ಸಾಧನೆಯಲ್ಲಿ ಪ್ರಧಾನಿಯವರ ನಾಯಕತ್ವವು ಪ್ರಮುಖ ಪಾತ್ರವನ್ನು ಹೊಂದಿದೆ ಎಂದು ಹೇಳಿದ ದೇಶಿಯ ಲಸಿಕೆ ತಯಾರಕರು,ಲಸಿಕೆಗಳ ಅಭಿವೃದ್ಧಿಗೆ ನಿರಂತರ ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸುವಲ್ಲಿ ಪ್ರಧಾನಿಯವರ ದೂರದೃಷ್ಟಿ ಮತ್ತು ಉತ್ಸಾಹಿ ನಾಯಕತ್ವವನ್ನು ಪ್ರಶಂಸಿಸಿದರು ಎಂದು ಪ್ರಧಾನಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.

ಉದ್ಯಮ ಮತ್ತು ಸರಕಾರದ ನಡುವೆ ಈ ಹಿಂದೆಂದೂ ಕಾಣದಿದ್ದ ಸಹಕಾರವನ್ನು ಮೆಚ್ಚಿಕೊಂಡ ಲಸಿಕೆ ತಯಾರಕರು,ದೇಶವು ಹಳೆಯ ನಿಯಮಗಳನ್ನೇ ಅನುಸರಿಸಿದ್ದರೆ ಗಣನೀಯ ವಿಳಂಬವುಂಟಾಗುತ್ತಿತ್ತು ಮತ್ತು ಈವರೆಗಿನ ಲಸಿಕೆ ನೀಡಿಕೆ ಪ್ರಮಾಣವನ್ನು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು ಎಂದು ಪ್ರಧಾನಿ ಕಚೇರಿಯು ತಿಳಿಸಿದೆ.

 ಲಸಿಕೆ ತಯಾರಕರ ಕಠಿಣ ಪರಿಶ್ರಮ ಮತ್ತು ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಅವರು ಮೂಡಿಸಿದ್ದ ವಿಶ್ವಾಸವನ್ನು ಹೊಗಳಿದ ಮೋದಿ,‘ಕಳೆದ ಒಂದೂವರೆ ವರ್ಷಗಳಲ್ಲಿ ಕಲಿತುಕೊಂಡ ಅತ್ಯುತ್ತಮ ಪರಿಪಾಠಗಳನ್ನು ದೇಶವು ಸಾಂಸ್ಥೀಕರಿಸುವ ಅಗತ್ಯವಿದೆ ಮತ್ತು ಇದು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ನಮ್ಮ ಪರಿಪಾಠಗಳನ್ನು ಪರಿಷ್ಕರಿಸಿಕೊಳ್ಳಲು ಒಂದು ಅವಕಾಶವಾಗಿದೆ ’ ಎಂದರು. ಭವಿಷ್ಯದ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರಲು ಲಸಿಕೆ ತಯಾರಕರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವುದನ್ನು ಮುಂದುವರಿಸಬೇಕು ಎಂದು ಅವರು ಒತ್ತಿ ಹೇಳಿದರು.

ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸೈರಸ್ ಪೂನಾವಾಲಾ ಮತ್ತು ಆದಾರ್ ಪೂನಾವಾಲಾ,ಭಾರತ ಬಯೊಟೆಕ್ನ ಡಾ.ಕೃಷ್ಣ ಯೆಲ್ಲಾ ಮತ್ತು ಸುಚಿತ್ರಾ ಯೆಲ್ಲಾ,ಝೈಡಸ್ ಕ್ಯಾಡಿಲಾದ ಪಂಕಜ ಪಟೇಲ್ ಮತ್ತು ಶೆರ್ವಿಲ್ ಪಟೇಲ್,ಬಯಾಲಾಜಿಕಲ್ ಇ.ಲಿ.ನ ಮಹಿಮಾ ದಾತ್ಲಾ ಮತ್ತು ನರೇಂದ್ರ ಮಂಟೇಲಾ,ಜೆನೋವಾ ಬಯೊಫಾರ್ಮಾಸ್ಯೂಟಿಕಲ್ಸ್ ಲಿ.ನ ಸಂಜಯ ಸಿಂಗ್ ಮತ್ತು ಸತೀಶ ಮೆಹ್ತಾ,ಡಾ.ರೆಡ್ಡೀಸ್ ಲ್ಯಾಬ್ನ ಸತೀಶ ರೆಡ್ಡಿ ಮತ್ತು ದೀಪಕ ಸಾಪ್ರಾ ಹಾಗೂ ಪನೇಶಿಯಾ ಬಯೊಟೆಕ್ ಲಿ.ನ ರಾಜೇಶ ಜೈನ್ ಮತ್ತು ಹರ್ಷಿತ್ ಜೈನ್ ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News