100 ಕೋಟಿ ಕೋವಿಡ್ ಲಸಿಕೆ ಮೈಲುಗಲ್ಲು:ಲಕ್ಷಾಂತರ ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ ಪ್ರಧಾನಿ

Update: 2021-10-24 16:26 GMT

ಹೊಸದಿಲ್ಲಿ,ಅ.24: ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ತನ್ನ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್ ’ನ 82ನೇ ಆವೃತ್ತಿಯಲ್ಲಿ ಭಾರತದ ಲಸಿಕೆ ಕಾರ್ಯಕ್ರಮದ ಯಶಸ್ಸನ್ನು ಪ್ರಶಂಸಿಸಿದರು. ಭಾರತವು ಅ.21ರಂದು ಕೋವಿಡ್ ಲಸಿಕೆಯ 100 ಕೋ.ಡೋಸ್‌ಗಳನ್ನು ನೀಡಿದ ಸಾಧನೆ ಮಾಡಿದೆ.


‘ನಮ್ಮ ಲಸಿಕೆ ಕಾರ್ಯಕ್ರಮದ ಯಶಸ್ಸು ಭಾರತದ ಸಾಮರ್ಥ್ಯವನ್ನು,ಸಂಘಟಿತ ಪ್ರಯತ್ನ ಮಂತ್ರದ ಶಕ್ತಿಯನ್ನು ತೋರಿಸುತ್ತಿದೆ ’ಎಂದರು. ಈ ಸಾಧನೆಯನ್ನು ಸಾಧ್ಯವಾಗಿಸಿದ ದೇಶದ ಆರೋಗ್ಯ ಕಾರ್ಯಕರ್ತರಿಗೆ ಗೌರವವನ್ನೂ ಅವರು ಸಲ್ಲಿಸಿದರು.

‘ನನ್ನ ದೇಶದ ಮತ್ತು ನನ್ನ ದೇಶದ ಜನತೆಯ ಸಾಮರ್ಥ್ಯಗಳ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ದೇಶವಾಸಿಗಳಿಗೆ ಲಸಿಕೆಯನ್ನು ನೀಡುವಲ್ಲಿ ಯಾವುದೇ ಪ್ರಯತ್ನವನ್ನು ನಮ್ಮ ಆರೋಗ್ಯ ಕಾರ್ಯಕರ್ತರು ಬಿಡುವುದಿಲ್ಲ ಎನ್ನುವುದು ನನಗೆ ಗೊತ್ತಿತ್ತು ’ಎಂದ ಮೋದಿ,ಲಸಿಕೆ ಅಭಿಯಾನದಲ್ಲಿ ತೊಡಗಿಕೊಂಡಿದ್ದ ಉತ್ತರ ಪ್ರದೇಶದ ಆರೋಗ್ಯ ಕಾರ್ಯಕರ್ತೆ ಪೂನಮ್ ನೌಟಿಯಾಲ್ ಅವರೊಂದಿಗೆ ಸಂವಾದವನ್ನು ನಡೆಸಿದರು. ಅವರ ಅನುಭವ ಮತ್ತು ಸಾಧನೆಯ ಹಾದಿಯಲ್ಲಿ ಅವರು ಎದುರಿಸಿದ್ದ ಸವಾಲುಗಳ ಬಗ್ಗೆ ನೌಟಿಯಾಲ್‌ರನ್ನು ಕೇಳಿ ತಿಳಿದುಕೊಂಡರು.

ಅ.31ರಂದು ಸರದಾರ್ ವಲ್ಲಭಭಾಯಿ ಪಟೇಲ್ ಅವರಜನ್ಮದಿನವನ್ನು ಆಚರಿಸಲಾಗುತ್ತಿದೆ ಎಂದು ಬೆಟ್ಟು ಮಾಡಿದ ಪ್ರಧಾನಿ,‘ಮನ್ ಕಿ ಬಾತ' ಎಲ್ಲ ಶ್ರೋತೃಗಳು ಮತ್ತು ನನ್ನ ಪರವಾಗಿ ಉಕ್ಕಿನ ಮನುಷ್ಯನಿಗೆ ತಲೆ ಬಾಗಿ ನಮಿಸುತ್ತೇನೆ. ಏಕತೆಯ ಸಂದೇಶದ ಪ್ರಸಾರದಲ್ಲಿ ಪ್ರತಿಯೊಬ್ಬರೂ ಭಾಗಿಯಾಗುವುದು ಮುಖ್ಯವಾಗಿದೆ ’ಎಂದರು.

19ನೇ ಶತಮಾನದ ಸ್ವಾತಂತ್ರ ಹೋರಾಟಗಾರ ಹಾಗೂ ಬುಡಕಟ್ಟು ನಾಯಕ ಭಗವಾನ್ ಬಿರ್ಸಾ ಮುಂಡಾ ಅವರಿಗೂ ಗೌರವಗಳನ್ನು ಸಲ್ಲಿಸಿದ ಮೋದಿ,‘ಅವರ ಜೀವನವು ಸ್ವಂತದ ಸಂಸ್ಕೃತಿಯ ಬಗ್ಗೆ ಹೆಮ್ಮೆಯನ್ನು ಹೊಂದಿರುವುದು,ಪರಿಸರದ ಬಗ್ಗೆ ಕಾಳಜಿ ಮತ್ತು ಅನ್ಯಾಯದ ವಿರುದ್ಧ ಹೋರಾಟದಂತಹ ಹಲವಾರು ವಿಷಯಗಳನ್ನು ನಮಗೆ ಕಲಿಸಿದೆ ’ಎಂದರು. ‌

ಮುಂಡಾ ಅವರ ಜನ್ಮ ದಿನಾಚರಣೆ ಮುಂದಿನ ತಿಂಗಳು ನಡೆಯಲಿದೆ.
ಜಾಗತಿಕ ವಿಶ್ವಸಂಸ್ಥೆ ದಿನದ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಿಗೆ ಭಾರತದ ಕೊಡುಗೆಯನ್ನು ಪ್ರಮುಖವಾಗಿ ಬಿಂಬಿಸಿದ ಮೋದಿ,ಭಾರತವು ಯಾವಾಗಲೂ ವಿಶ್ವ ಶಾಂತಿಗಾಗಿ ಶ್ರಮಿಸಿದೆ. ನಮ್ಮ ಭೂಮಿಯನ್ನು ಉತ್ತಮ ಸ್ಥಳವನ್ನಾಗಿ ಮಾಡುವಲ್ಲಿ ಭಾರತವು ಪ್ರಮುಖ ಪಾತ್ರವನ್ನು ವಹಿಸಲಿದೆ ’ಎಂದರು.

ದೇಶಕ್ಕೆ ಪೊಲೀಸ್ ಸಿಬ್ಬಂದಿಗಳ ಕೊಡುಗೆಯ ಬಗ್ಗೆ ಮಾತನಾಡಿದ ಅವರು,ಪೊಲೀಸ್ ಪಡೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿದೆ. ಕಳೆದ ಕೆಲವು ವರ್ಷಗಳಲ್ಲಿ ಪೊಲೀಸ್ ಪಡೆಯಲ್ಲಿ ಮಹಿಳೆಯರ ಸಂಖ್ಯೆ ಇಮ್ಮಡಿಯಾಗಿದೆ ಎಂದು ಪೊಲೀಸ್ ಸಂಶೋಧನಾ ಮತ್ತು ಅಭಿವೃದ್ಧಿ ಘಟಕದ ಅಂಕಿಅಂಶಗಳು ತೋರಿಸಿವೆ ಎಂದರು. ಪೊಲೀಸ್ ಪಡೆಯಲ್ಲಿನ ಹೆಚ್ಚೆಚ್ಚು ಮಹಿಳೆಯರು ಎಳೆಯ ಬಾಲಕಿಯರ ಆದರ್ಶ ಮಾದರಿಗಳಾಗುತ್ತಿದ್ದಾರೆ ಎಂದರು.
ಡ್ರೋನ್ ಗಳ ಬಗ್ಗೆಯೂ ಪ್ರಸ್ತಾಪಿಸಿದ ಮೋದಿ,ಅವು ಯುವಜನರನ್ನು ಆಕರ್ಷಿಸುತ್ತಿವೆ.ಸ್ಟಾರ್ಟ್ ಅಪ್‌ಗಳೂ ಅವುಗಳ ಬಳಕೆಗೆ ಮುಂದಾಗಿವೆ. 

ಡ್ರೋನ್ ಕ್ಷೇತ್ರವು ಅತಿಯಾಧ ನಿರ್ಬಂಧಗಳು ಮತ್ತ ನಿಯಂತ್ರಣಗಳಿಂದ ತುಂಬಿತ್ತು. ಇತ್ತೀಚಿನ ಸಮಯಗಳಲ್ಲಿ ಇದು ಬದಲಾಗಿದೆ. ನೂತನ ಡ್ರೋನ್ ನೀತಿಯು ಈಗಾಗಲೇ ಅತ್ಯುತ್ತಮ ಫಲಿತಾಂಶಗಳನ್ನು ತೋರಿಸುತ್ತಿದೆ ಎಂದರು.

ಏಕಬಳಕೆ ಪ್ಲಾಸ್ಟಿಕ್ ಅನ್ನು ಉಪಯೋಗಿಸುವುದನ್ನು ನಿಲ್ಲಿಸುವಂತೆ ಜನತೆಯನ್ನು ಆಗ್ರಹಿಸಿದ ಅವರು,‘ದೀಪಾವಳಿಗೆ ಮುನ್ನ ನಮ್ಮ ಮನೆಗಳನ್ನು ಸ್ವಚ್ಛಗೊಳಿಸುವಾಗ ನಮ್ಮ ಪರಿಸರವನ್ನೂ ಸ್ವಚ್ಛವಾಗಿರಿಸುವುದನ್ನು ನಾವು ಮರೆಯಬಾರದು. ನಾನು ಸ್ವಚ್ಛತೆಯ ಕುರಿತು ಮಾತನಾಡುವಾಗ ದಯವಿಟ್ಟು ಏಕಬಳಕೆ ಪ್ಲಾಸ್ಟಿಕ್ ಅನ್ನು ತ್ಯಜಿಸುವುದನ್ನು ಮರೆಯಬೇಡಿ. ಬನ್ನಿ,ಸ್ವಚ್ಛ ಭಾರತ ಅಭಿಯಾನದ ಉತ್ಸಾಹ ಕುಂದಲು ಅವಕಾಶ ನೀಡುವುದಿಲ್ಲ ಎಂದು ಪಣವನ್ನು ತೊಡೋಣ. ನಾವು ಜೊತೆಯಾಗಿ ನಮ್ಮ ದೇಶವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸೋಣ ಮತ್ತು ಅದನ್ನು ಸ್ವಚ್ಛವಾಗಿಡೋಣ ’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News