ದಾಳಿ ಆರೋಪ:ತ್ರಿಪುರಾದ 150ಕ್ಕೂ ಅಧಿಕ ಮಸೀದಿಗಳಿಗೆ ಪೊಲೀಸರ ರಕ್ಷಣೆ

Update: 2021-10-24 16:17 GMT
photo:The Indian Express

ಅಗರ್ತಲಾ,ಅ.24: ಕೆಲವು ಅಹಿತಕರ ಘಟನೆಗಳ ಬಳಿಕ ತಾವು ರಾಜ್ಯದ 150ಕ್ಕೂ ಅಧಿಕ ಮಸೀದಿಗಳಿಗೆ ರಕ್ಷಣೆಯನ್ನು ಒದಗಿಸಿರುವುದಾಗಿ ತ್ರಿಪುರಾ ಪೊಲೀಸರು ತಿಳಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಮಸೀದಿಗಳು ಮತ್ತು ಮುಸ್ಲಿಂ ಬಾಹುಳ್ಯದ ಹಲವಾರು ಪ್ರದೇಶಗಳ ಮೇಲೆ ದಾಳಿಗಳು ನಡೆದಿವೆ ಎಂದು ಜಮೀಯತ್ ಉಲಮಾ (ಹಿಂದ್) ಎರಡು ದಿನಗಳ ಹಿಂದೆ ಆರೋಪಿಸಿತ್ತು. ಅಗರ್ತಲಾದಲ್ಲಿನ ಮಸೀದಿಯೊಂರಲ್ಲಿ ದಾಂಧಲೆ ನಡೆಸಿ ಹಾನಿಯನ್ನು ಉಂಟು ಮಾಡಿರುವುದನ್ನು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಹಿರಿಯ ಅಧಿಕಾರಿಯೋರ್ವರು ದೃಢಪಡಿಸಿದರು. ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.

ಶುಕ್ರವಾರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಮತ್ತು ಡಿಜಿಪಿ ವಿ.ಎಸ್.ಯಾದವ ಅವರಿಗೆ ಸಲ್ಲಿಸಿರುವ ಅಹವಾಲಿನಲ್ಲಿ ಜಮೀಯತ್ ಉಲಮಾ (ಹಿಂದ್),ಮಸೀದಿಗಳು ಮತ್ತು ಮುಸ್ಲಿಂ ಬಾಹುಳ್ಯದ ಪ್ರದೇಶಗಳ ಮೇಲೆ ದಾಳಿಗಳ ಕುರಿತು ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿತ್ತು.

ಒಂದು ದಿನದ ಹಿಂದಷ್ಟೇ ಗೋಮತಿ ಜಿಲ್ಲೆಯಲ್ಲಿ ಬಾಂಗ್ಲಾದೇಶದಲ್ಲಿನ ಇತ್ತೀಚಿನ ಕೋಮು ಹಿಂಸಾಚಾರದ ವಿರುದ್ಧ  ರ್‍ಯಾಲಿ ಸಂದರ್ಭದಲ್ಲಿ ಹಿಂದುತ್ವ ಸಂಘಟನೆಗಳು,ವಿಹಿಂಪ ಮತ್ತು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಪೊಲೀಸರೊಂದಿಗೆ ಘರ್ಷಣೆಗಿಳಿದಿದ್ದು,‌ ಮೂವರು ಪೊಲೀಸ್ ಸಿಬ್ಬಂದಿಗಳು ಸೇರಿದಂತೆ 15ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

ರ್ಯಾಲಿಗೆ ಮುನ್ನ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿತ್ತು.  ರ್‍ಯಾಲಿಯ ಸಂಘಟಕರು ತಾವು ಅನುಮತಿಯನ್ನು ಪಡೆದಿದ್ದೇವೆ ಎಂದು ಹೇಳಿಕೊಂಡಿದ್ದರು,ಆದರೆ ಅವರು ಅಲ್ಪಸಂಖ್ಯಾತರು ಹೆಚ್ಚಾಗಿ ವಾಸವಾಗಿರುವ ಕೆಲವು ಬಡಾವಣೆಗಳಿಗೆ ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ತಡೆದಿದ್ದರು.

ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದಾಳಿಯ ವಿರುದ್ಧ ಪಶ್ಚಿಮ ಮತ್ತು ಉತ್ತರ ತ್ರಿಪುರಾ ಜಿಲ್ಲೆಗಳಲ್ಲೂ  ರ್‍ಯಾಲಿಗಳು ನಡೆದಿದ್ದವು. ಧಾರ್ಮಿಕ ಸ್ಥಳಗಳ ಮೇಲೆ ದಾಳಿಯನ್ನು ತನ್ನ ಪಕ್ಷವು ಬೆಂಬಲಿಸುವುದಿಲ್ಲ ಎಂದು ರವಿವಾರ ಇಲ್ಲಿ ತಿಳಿಸಿದ ಬಿಜೆಪಿ ವಕ್ತಾರ ನಬೇಂದು ಭಟ್ಟಾಚಾರ್ಯ ಅವರು,ಶಾಂತಿಯನ್ನು ಕಾಯ್ದುಕೊಳ್ಳಲು ಪಕ್ಷದ ಅಲ್ಪಸಂಖ್ಯಾತರ ಘಟಕವು ರಾಜ್ಯಾದ್ಯಂತ ಜನರೊಂದಿಗೆ ಮಾತುಕತೆಗಳನ್ನು ನಡೆಸುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News