​ಇಂಧನ ಬೆಲೆ ಜಿಎಸ್‌ಟಿ ವ್ಯಾಪ್ತಿಗೆ ಬರಲಿ: ಟ್ರಕ್ ಮಾಲಕರ ಆಗ್ರಹ

Update: 2021-10-25 03:48 GMT
ಸಾಂದರ್ಭಿಕ ಚಿತ್ರ (source: PTI)

ನಮಕ್ಕಲ್ (ತಮಿಳುನಾಡು), ಅ.25: ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 100 ರೂಪಾಯಿ ಗಡಿಯನ್ನು ದಾಟಿದ ಬೆನ್ನಲ್ಲೇ, ಬೆಲೆ ಏರಿಕೆ ತಡೆಗೆ ಮಧ್ಯಪ್ರವೇಶಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಟ್ರಕ್ ಮಾಲಕರು ಮನವಿ ಮಡಿಕೊಂಡಿದ್ದಾರೆ.

ತಮಿಳುನಾಡು ಮರಳು ಲಾರಿ ಮಾಲಕರ ಒಕ್ಕೂಟದ ಅಧ್ಯಕ್ಷ ಸೆಲ್ಲಾ ರಸಮಣಿ ಈ ಬಗ್ಗೆ ವಿವರ ನೀಡಿ, "ರಾಜ್ಯದಲ್ಲಿರುವ 5 ಲಕ್ಷ ಟ್ರಕ್‌ಗಳ ಪೈಕಿ ಶೇಕಡ 35ರಷ್ಟು ಟ್ರಕ್‌ಗಳು ಸಾಕಷ್ಟು ಕೆಲಸವಿಲ್ಲದೇ ಮತ್ತು ಉದ್ಯೋಗಿಗಳ ಕೊರತೆ ಕಾರಣದಿಂದ ನಷ್ಟ ಸಂಭವಿಸಿ ಶೆಡ್ ಸೇರಿವೆ. ಏರುತ್ತಿರುವ ತೈಲ ಬೆಲೆ ಸಾರಿಗೆ ಉದ್ಯಮಕ್ಕೆ ಮಾರಕವಾಗಲಿದೆ" ಎಂದು ಹೇಳಿದ್ದಾರೆ.

"ಇಂಧನ ವೆಚ್ಚ ಮತ್ತು ಟೋಲ್ ಶುಲ್ಕ, ಟ್ರಕ್ ಕಾರ್ಯಾಚರಣೆಯ ವೆಚ್ಚದ ಶೇಕಡ 70ರಷ್ಟಾಗುತ್ತಿದೆ. ಆದ್ದರಿಂದ ಡೀಸೆಲ್ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು" ಎಂದು ಹೇಳಿದರು. ಡೀಸೆಲ್ ಬೆಲೆಯನ್ನು ಲೀಟರ್‌ಗೆ 4 ರೂಪಾಯಿಯಷ್ಟು ಕಡಿಮೆ ಮಾಡುವುದಾಗಿ ಡಿಎಂಕೆ ಆಶ್ವಾಸನೆ ನೀಡಿತ್ತು ಎಂದು ಅವರು ತಿಳಿಸಿದ್ದಾರೆ.

ಆಲ್ ಇಂಡಿಯಾ ಮೋಟರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ಮುರುಗನ್ ವೆಂಕಟಾಚಲಂ ಮಾತನಾಡಿ, "ಬಿಜೆಪಿ ಅಧಿಕಾರಕ್ಕೆ ಬಂದಾಗ ತೈಲ ಬೆಲೆ 70 ರೂಪಾಯಿ ಇತ್ತು. ಇದೀಗ 100 ರೂಪಾಯಿಗೆ ಹೆಚ್ಚಿದೆ. ಈ ನಷ್ಟವನ್ನು ಭರ್ತಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತೈಲ ಬೆಲೆ ಏರಿಕೆಯಿಂದ ಕೇವಲ ಸಾರಿಗೆ ವಲಯ ಮಾತ್ರವಲ್ಲದೇ, ಸಣ್ಣ ಉದ್ಯಮಗಳಿಗೆ ಕೂಡಾ ತೀವ್ರ ಹಾನಿಯಾಗಿದೆ" ಎಂದು ಅಭಿಪ್ರಾಯಪಟ್ಟರು.

ಸಾಗಣೆ ವೆಚ್ಚ ಹೆಚ್ಚಳದಿಂದ ಕಾರ್ಯಾದೇಶ ಶೇಕಡ 50ರಷ್ಟು ಕುಸಿದಿದೆ ಎಂದು ಅವರು ಹೇಳಿದರು. ಇದು ನಮ್ಮ ಜೀವನಾಧಾರವಾಗಿರುವುದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News