ಚೀನಾ: ಕೊರೋನ ಸೋಂಕು ಮತ್ತೆ ಉಲ್ಬಣ ಇಜಿನ್ ಪ್ರಾಂತದಲ್ಲಿ ಲಾಕ್‌ಡೌನ್ ಜಾರಿ

Update: 2021-10-25 16:58 GMT

ಬೀಜಿಂಗ್, ಅ.25: ಚೀನಾದ ಇಜಿನ್ ಪ್ರಾಂತದಲ್ಲಿ ಕೊರೋನ ಸೋಂಕಿನ ಹೊಸ ರೂಪಾಂತರಿತ ವೈರಸ್ ತೀವ್ರ ಪ್ರಮಾಣದಲ್ಲಿ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ ಎಂದು ಸ್ಥಳೀಯಾಡಳಿತ ಮಾಹಿತಿ ನೀಡಿದೆ. ಇನ್ನರ್ ಮಂಗೋಲಿಯಾ ವಲಯದಲ್ಲಿರುವ ಇಜಿನ್ ಪ್ರಾಂತದ ಸುಮಾರು 35,700 ಜನರು ಮನೆಯಿಂದ ಹೊರಗೆ ಬರಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಚೀನಾದಲ್ಲಿ ಕಳೆದ ವಾರವೊಂದರಲ್ಲೇ ಹೊಸ ಸೋಂಕಿನ 150ಕ್ಕೂ ಅಧಿಕ ಪ್ರಕರಣ ಪತ್ತೆಯಾಗಿದ್ದು ಇದರಲ್ಲಿ ಮೂರನೇ ಒಂದರಷ್ಟು ಪ್ರಕರಣ ಮಂಗೋಲಿಯಾ ಗಡಿಭಾಗದಲ್ಲಿರುವ ಈ ಸಣ್ಣಪ್ರಾಂತದಲ್ಲಿ ದಾಖಲಾಗಿದೆ.

ಹೊಸ ಸೋಂಕು ಪ್ರಕರಣ ಕ್ಷಿಪ್ರವಾಗಿ ಪ್ರಸಾರಗೊಳ್ಳುತ್ತಿದ್ದು ಒಂದು ವಾರದಲ್ಲೇ 11 ಪ್ರಾಂತಗಳಿಗೆ ಹರಡಿದೆ. ಚೀನಾದಲ್ಲಿ ಸೋಮವಾರ 38 ಕೊರೋನ ಸೋಂಕು ಪತ್ತೆಯಾಗಿದ್ದು ಇದರಲ್ಲಿ 19 ಪ್ರಕರಣ ಇನ್ನರ್ ಮಂಗೋಲಿಯಾ ಪ್ರದೇಶದಲ್ಲಿ ದಾಖಲಾಗಿದೆ. ಸಾಗರೋತ್ತರ ದೇಶಗಳಿಂದ ಈ ರೂಪಾಂತರಿತ ಸೋಂಕು ಚೀನಾಕ್ಕೆ ವ್ಯಾಪಿಸಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ಅಧಿಕಾರಿ ವು ಲಿಂಗ್ಯೋವ್ ಹೇಳಿದ್ದಾರೆ.

ನೂತನ ಸೋಂಕು ಪ್ರಕರಣ ವರದಿಯಾಗಿರುವ ಪ್ರದೇಶದ ಜನತೆ ರಾಜಧಾನಿ ಬೀಜಿಂಗ್ ಪ್ರವೇಶಿಸುವುದನ್ನು ನಿಷೇಧಿಸಲಾಗಿದ್ದು ನೆಗೆಟಿವ್ ಪರೀಕ್ಷಾ ವರದಿ ಹೊಂದಿದ್ದವರು ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಈ ಮಧ್ಯೆ, ಹೊಸ ರೂಪಾಂತರಿತ ಸೋಂಕು ಪ್ರವಾಸಿಗರಿಂದ ಕ್ಷಿಪ್ರವಾಗಿ ಹರಡುತ್ತಿರುವುದನ್ನು ಮನಗಂಡು ಬೀಜಿಂಗ್, ಇನ್ನರ್ ಮಂಗೋಲಿಯಾ, ಗನ್ಸು, ನಿಂಗ್‌ಕ್ಸಿಯಾ, ಗುಯ್‌ರೆ ನಗರಗಳಿಗೆ ಪ್ರವಾಸ ಯಾತ್ರೆ ತೆರಳುವುದನ್ನು ನಿಷೇಧಿಸಲಾಗಿದ್ದು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಎಲ್ಲಾ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ.

ಚೀನಾವು ಮೇ ತಿಂಗಳಿನಿಂದ ಕೊರೋನ ಸಂಬಂಧದ ನಿರ್ಬಂಧಗಳನ್ನು ತುಸು ಸಡಿಲಿಸಿದ ಬಳಿಕ ಡೆಲ್ಟಾ ರೂಪಾಂತರಿತ ಸೋಂಕು ಹರಡತೊಡಗಿದ್ದು ಆಗಸ್ಟ್‌ನಲ್ಲಿ ಚೀನಾದ ಅರ್ಧಭಾಗಕ್ಕೆ ವ್ಯಾಪಿಸಿತ್ತು.

ಈ ಹಿನ್ನೆಲೆಯಲ್ಲಿ ಕೊರೋನ ಸೋಂಕು ಹರಡುವ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ, ಅಲ್ಲಿಂದ ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸುವ ಜೊತೆಗೆ, ಸ್ಥಳೀಯ ಜನರನ್ನು ಹಲವು ಬಾರಿ ಪರೀಕ್ಷೆಗೆ ಒಳಪಡಿಸುವ ಮೂಲಕ ಕೊರೋನ ಸೋಂಕನ್ನು ಮತ್ತೆ ಶೂನ್ಯ ಪ್ರಮಾಣಕ್ಕೆ ಇಳಿಸಲು ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದರು. ಆದರೂ, ದೇಶದಲ್ಲಿ ಕೊರೋನ ಸೋಂಕು ನಿಧಾನಗತಿಯಲ್ಲಿ ಸಮುದಾಯಕ್ಕೆ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಏಶ್ಯದಲ್ಲಿ ಡೆಲ್ಟಾ ರೂಪಾಂತರಿತ ಸೋಂಕು ತೀವ್ರಗತಿಯಲ್ಲಿ ಪ್ರಸಾರವಾಗುತ್ತಿರುವುದರಿಂದ ಪೂರ್ಣಪ್ರಮಾಣದ ಆರ್ಥಿಕ ಚಟುವಟಿಕೆಗೆ ತೆರೆದುಕೊಳ್ಳುವ ಸರಕಾರಗಳ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ. ಸಿಂಗಾಪುರದಲ್ಲಿ ಕೊರೋನ ಸಂಬಂಧಿಸಿದ ನಿರ್ಬಂಧಗಳನ್ನು ಮತ್ತೆ 1 ತಿಂಗಳು ಮುಂದುವರಿಸಲಾಗಿದ್ದು ಪೂರ್ಣ ಪ್ರಮಾಣದ ಲಸಿಕೆ ಪಡೆದ ಸಿಬಂದಿಗಳು ಜನವರಿ 1ರಿಂದ ಕಚೇರಿಗೆ ಹಾಜರಾಗಬಹುದು ಎಂದು ಸರಕಾರ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News