ಹಾಂಕಾಂಗ್‌ನ ಕಚೇರಿ ಮುಚ್ಚಲಿರುವ ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್

Update: 2021-10-25 17:51 GMT

ಅ.25: ಚೀನಾವು ಹಾಂಕಾಂಗ್‌ನಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿಗೊಳಿಸಿರುವುದರಿಂದ ತನ್ನ ಸಿಬ್ಬಂದಿಗಳಿಗೆ ಎದುರಾಗಿರುವ ಬೆದರಿಕೆಯ ಹಿನ್ನೆಲೆಯಲ್ಲಿ ಹಾಂಕಾಂಗ್‌ನ ಕಚೇರಿಯನ್ನು ಮುಚ್ಚುವುದಾಗಿ ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಸೋಮವಾರ ಹೇಳಿದೆ.

ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಕಳೆದ ಜೂನ್‌ನಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿಗೊಳಿಸಲಾಗಿದೆ. ಹಾಂಕಾಂಗ್‌ನ ರಾಜಕೀಯ, ಸಾಂಸ್ಕತಿಕ ಮತ್ತು ಕಾನೂನಾತ್ಮಕ ವ್ಯವಸ್ಥೆಯನ್ನು ಕ್ರಮೇಣ ಪರಿವರ್ತಿಸಿ ಇಲ್ಲಿ ಮೈನ್‌ಲ್ಯಾಂಡ್ ಚೀನಾದ ವ್ಯವಸ್ಥೆ ಜಾರಿಗೊಳಿುವ ಪ್ರಯತ್ನ ಈ ನಿರ್ಧಾರದ ಹಿಂದಿದೆ.

ಹಾಂಕಾಂಗ್‌ನ ಕಚೇರಿಯನ್ನು ಮುಚ್ಚುವ ನಿರ್ಧಾರವನ್ನು ಭಾರವಾದ ಹೃದಯದೊಂದಿಗೆ ಕೈಗೊಳ್ಳಲಾಗಿದೆ. ಸರಕಾರದ ತೀವ್ರ ಪ್ರತೀಕಾರ ಕ್ರಮದ ಭೀತಿಯ ನಡುವೆ ಮಾನವ ಹಕ್ಕು ಸಂಘಟನೆಗಳಿಗೆ ಮುಕ್ತವಾಗಿ ಕೆಲಸ ಮಾಡಲು ಅಸಾಧ್ಯವಾಗಿದೆ ಎಂದು ಆ್ಯಮ್ನೆಸ್ಟಿ ಆಡಳಿತ ಮಂಡಳಿಯ ಅಧ್ಯಕ್ಷೆ ಅಂಜುಳಾ ಮ್ಯಾ ಸಿಂಗ್ ಬೈಸ್ ಪ್ರತಿಕ್ರಿಯಿಸಿದ್ದಾರೆ.

ಹಾಂಕಾಂಗ್‌ನಲ್ಲಿ ಆ್ಯಮ್ನೆಸ್ಟಿಯ 2 ಕಚೇರಿಗಳಿವೆ. ಪ್ರಥಮ ಶಾಖೆಯು ನಗರದಲ್ಲಿ ನಡೆಯುವ ಮಾನವ ಹಕ್ಕು ಹಾಗೂ ಅಭಿಯಾನದ ವಿಷಯಗಳ ಬಗ್ಗೆ ಗಮನ ಹರಿಸುತ್ತದೆ. 2ನೇ ಶಾಖೆಯು ಪ್ರಾದೇಶಿಕ ಕಚೇರಿಯಾಗಿದ್ದು ಪೂರ್ವ ಮತ್ತು ಆಗ್ನೇಯ ಏಶ್ಯಾಗಳಲ್ಲಿ ಸಂಶೋಧನೆ ಮತ್ತು ಸಲಹಾ ಕಾರ್ಯ ನಡೆಸುತ್ತದೆ. ಸ್ಥಳೀಯ ಕಚೇರಿಯನ್ನು ಅಕ್ಟೋಬರ್ 31ರಂದು ಮುಚ್ಚಲಾಗುತ್ತದೆ. ಪ್ರಾದೇಶಿಕ ಕಚೇರಿ ಈ ವರ್ಷಾಂತ್ಯದೊಳಗೆ ಮುಚ್ಚಲಿದೆ ಎಂದು ಆ್ಯಮ್ನೆಸ್ಟಿಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News