ಸಮಾವೇಶ, ಸಮ್ಮೇಳನಗಳಿಗಷ್ಟೇ ಸಾಹಿತ್ಯ ಪರಿಷತ್ತು ಸೀಮಿತವಾಗದಿರಲಿ

Update: 2021-10-25 19:30 GMT

ನವೆಂಬರ್ 21ರಂದು ನಡೆಯುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಕನ್ನಡ ಭಾಷೆಗೆ ಮತ್ತು ಕನ್ನಡಿಗರಿಗಾಗಿ ತನ್ನ ಯೋಜನೆಗಳೇನು ಎಂದು ಯಾರೂ ನಿರ್ದಿಷ್ಟವಾಗಿ ಹೇಳುತ್ತಲೇ ಇಲ್ಲ. ಎಲ್ಲರ ಮಾತುಗಳೂ ಈ ಹಿಂದೆ ಕೇಳಿದ ಹಳೆಯ ವಿಚಾರಗಳೇ ಆಗಿರುತ್ತವೆ.

ಕರ್ನಾಟಕ ರಾಜ್ಯದಲ್ಲಿ ಶಿಕ್ಷಣದಲ್ಲಿ ಕನ್ನಡ ಭಾಷೆಯ ಪರಿಸ್ಥಿತಿ ಸಮಾಧಾನ ಪಟ್ಟುಕೊಳ್ಳುವಷ್ಟು ಚೆನ್ನಾಗಿಲ್ಲ. ನಾವು ಏನೇ ಹೇಳಿದರೂ ದಿನದಿಂದ ದಿನಕ್ಕೆ ಶಿಕ್ಷಣದಲ್ಲಿ ಕನ್ನಡ ಭಾಷೆಯ ಪರಿಸ್ಥಿತಿ ಅಪಾಯದ ಅಂಚಿನಲ್ಲಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಭಾಷೆಯನ್ನು ಉಳಿಸುವ ದಿಕ್ಕಿನಲ್ಲಿ ತಮ್ಮ ಯೋಜನೆ ಏನು ಎಂದು ನಿರ್ದಿರ್ಷ್ಟವಾದ ಕಾರ್ಯಕ್ರಮದೊಂದಿಗೆ ಹೇಳಬೇಕು. ಕೇಂದ್ರ ಸರಕಾರದ ಇಲಾಖೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂಬ ಸರೋಜಿನಿ ಮಹಿಷಿ ವರದಿ ಮಂಡಿಸಿ ಎಷ್ಟೋ ದಶಕಗಳಾಯಿತು. ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಅದರಲ್ಲಿ ಕೆಲವು ಮಾರ್ಪಾಟುಗಳು ಆದವು, ಆದರೂ ಅದು ಅನುಷ್ಠಾನವಾಗುತ್ತಲೇ ಇಲ್ಲ. ತಾಂತ್ರಿಕ ಕಾರಣಗಳಿಂದ ಇದು ಅನುಷ್ಠಾನವಾದರೂ ಜಾರಿಗೆ ಬರುವುದಿಲ್ಲ. ಸಿ ಮತ್ತು ಡಿ ದರ್ಜೆಗಳಲ್ಲಿ ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರೆಯಬೇಕಾದರೆ ಸಂಸತ್ತಿನಲ್ಲಿ, ಉಭಯ ಸದನಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಎಂಬ ಮಸೂದೆ ಮಂಡನೆಯಾಗಿ ತಿದ್ದುಪಡಿಯಾಗಬೇಕು. ಈ ನಿಟ್ಟಿನಲ್ಲಿ ಯಾವ ರೀತಿಯ ಕ್ರಮಗಳನ್ನು ಅನುಸರಿಸುತ್ತೀರಿ, ನಿಮ್ಮ ಯೋಜನೆಗಳೇನು ಎಂಬುದನ್ನು ಅಭ್ಯರ್ಥಿಗಳು ಕನ್ನಡಿಗರಿಗೆ ತಿಳಿಸಬೇಕಾಗಿದೆ.

ಇತ್ತೀಚಿನ ದಿನಗಳಲ್ಲಿ ಹೊಸ ಶಿಕ್ಷಣ ನೀತಿ ಅಳವಡಿಸುವ ಪ್ರಯತ್ನದಿಂದಾಗಿ ಪ್ರಾದೇಶಿಕ ಭಾಷೆಗಳು ತಮ್ಮ ಹಿಡಿತವನ್ನು ಕಳೆದುಕೊಳ್ಳುತ್ತಿವೆ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದವರಿಗೆ ಆಯಾ ರಾಜ್ಯದಲ್ಲಿ ಸರಕಾರಿ ಉದ್ಯೋಗ ಎಂಬ ಸಂವಿಧಾನ ತಿದ್ದುಪಡಿಯಾಗಬೇಕು. ಇದರ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸಲು ಈ ಅಭ್ಯರ್ಥಿಗಳು ಸಿದ್ಧರಿದ್ದಾರೆಯೇ?

ಹಾಗೆಯೇ ಕರ್ನಾಟಕ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದಂತಹ ಅನುದಾನ ಮತ್ತು ಇತರ ಸೌಕರ್ಯ, ಸೌಲಭ್ಯಗಳು ವಂಚನೆಯಾದಾಗ ಗಟ್ಟಿಯಾಗಿ ಧ್ವನಿ ಎತ್ತುವ ಇಚ್ಛಾಶಕ್ತಿ ಇದೆಯೇ ಎಂಬುದನ್ನು ಅಭ್ಯರ್ಥಿಗಳು ಬಹಿರಂಗಪಡಿಸಬೇಕು. ಸರಕಾರದ ಅನುದಾನದ ಅಡಿಯಲ್ಲಿ ಪರಿಷತ್ತು ನಡೆಯುತ್ತದೆ ಎಂಬ ಕಾರಣಕ್ಕೆ ಜನವಿರೋಧಿ ಅಥವಾ ಕನ್ನಡ ವಿರೋಧಿ ನಿಲುವುಗಳನ್ನು ಯಾವುದೇ ಸರಕಾರಗಳು ಕೈಗೊಂಡರೂ ಅದರ ವಿರುದ್ಧ ಹೋರಾಟ ನಡೆಸುವಂತಹ ಮನೋಭಾವ ಇತ್ತೀಚಿನ ದಿನಗಳಲ್ಲಿ ಮಾಯವಾಗಿ ಕೆಲವು ಸಂದರ್ಭಗಳಲ್ಲಿ ಜಾಣ ಕಿವುಡು ಮತ್ತು ಮೌನಕ್ಕೆ ಶರಣಾಗುವುದು ಇಲ್ಲವೇ ಹಾರಿಕೆಯ ಉತ್ತರಗಳನ್ನು ನೀಡುವುದು ಸಾಮಾನ್ಯವಾಗಿದೆ. ಪರಿಷತ್ತು ಸರಕಾರದ ಒಳ್ಳೆಯ ಕೆಲಸಗಳನ್ನು ಬೆಂಬಲಿಸಬೇಕೇ ಹೊರತು ಕನ್ನಡಿಗರ ಮತ್ತು ಕನ್ನಡ ಭಾಷೆಗೆ ಅಪಾಯವಾಗುವ ನಿರ್ಣಯಗಳನ್ನು ಕೈಗೊಂಡಾಗ ಪಕ್ಷಭೇದ ಮರೆತು, ಜಾತಿ ಪ್ರೇಮ ಮರೆತು ಹೋರಾಡುವಂತಹ ಮನಸ್ಥಿತಿವುಳ್ಳವರು ಪರಿಷತ್ತಿನ ಚುಕ್ಕಾಣಿಯನ್ನು ಹಿಡಿಯಬೇಕು.

ಕೇವಲ ಕಾರ್ಯಕ್ರಮಗಳನ್ನು ಮಾಡುವುದು ಸಮಾವೇಶ, ಸಮ್ಮೇಳನಗಳನ್ನು ಸಂಘಟಿಸುವುದಕ್ಕಷ್ಟೆ ಸಾಹಿತ್ಯ ಪರಿಷತ್ತು ಸಿಮೀತವಾಗಬಾರದು. ಅಭ್ಯರ್ಥಿಗಳು ಒಂದೇ ವೇದಿಕೆಯಲ್ಲಿ ಬಂದು ತಮ್ಮ ತಮ್ಮ ಕಾರ್ಯಕ್ರಮ ಮತ್ತು ನಿಲುವುಗಳನ್ನು, ಮುಂದಿನ ಯೋಜನೆಗಳನ್ನು ಬಹಿರಂಗ ವೇದಿಕೆಗಳಲ್ಲಿ ಪ್ರಕಟಿಸುವಂತಹ ವ್ಯವಸ್ಥೆಯನ್ನು ದೃಶ್ಯ ಮಾಧ್ಯಮದವರು ಮಾಡಿಕೊಡಬೇಕು.

Similar News