ಲಾಕ್ಡೌನ್‌ ನಲ್ಲಿ ಸರಕಾರ ಆದಾಯ ಬೆಂಬಲ ನೀಡಿದ್ದರೆ ಬಡತನದ ವಿರುದ್ಧ ಮಾತ್ರವಲ್ಲ, ಕೋವಿಡ್‌ ಎದುರಿಸಲೂ ನೆರವಾಗುತ್ತಿತ್ತು

Update: 2021-10-26 15:41 GMT

ಹೊಸದಿಲ್ಲಿ,ಅ.26: ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಆದಾಯ ಬೆಂಬಲ ಕ್ರಮಗಳು ಕೋವಿಡ್ ಹರಡುವಿಕೆಯನ್ನು ತಗ್ಗಿಸುವಲ್ಲಿ ನೆರವಾಗಿದ್ದವು ಎನ್ನುವುದು ನೂತನ ಅಧ್ಯಯನವೊಂದರಲ್ಲಿ ಬೆಳಕಿಗೆ ಬಂದಿದೆ. ಆದಾಯ ಬೆಂಬಲ ಕ್ರಮಗಳು ಲಾಕ್ಡೌನ್ ಸಂದರ್ಭದಲ್ಲಿ ಜೀವನೋಪಾಯಗಳನ್ನು ಭದ್ರಗೊಳಿಸುವ ಪ್ರಾಥಮಿಕ ಉದ್ದೇಶವನ್ನು ಹೊಂದಿದ್ದವಾದರೂ ಜನರು ತಮ್ಮ ಮನೆಗಳಲ್ಲಿಯೇ ಇರಲು ಅವಕಾಶವನ್ನೊದಗಿಸಿತ್ತು ಮತ್ತು ಅವರು ಸಾಂಕ್ರಾಮಿಕ ನಿರ್ಬಂಧಗಳನ್ನು ಉತ್ತಮವಾಗಿ ಪಾಲಿಸಲು ನೆರವಾಗುವ ಮೂಲಕ ಪ್ರಮುಖ ಪೂರಕ ಪರಿಣಾಮವನ್ನೂ ಬೀರಿದ್ದವು ಎನ್ನುವುದನ್ನು ಈ ನೂತನ ಅಧ್ಯಯನವು ತೋರಿಸಿದೆ.

 ಸಾಂಕ್ರಾಮಿಕದ ಸಂದರ್ಭದಲ್ಲಿ ಯಾವ ರೀತಿಯ ಸರಕಾರಿ ಬೆಂಬಲ ಕ್ರಮಗಳು ಉತ್ತಮ ಸಾರ್ವಜನಿಕ ಆರೋಗ್ಯ ಫಲಿತಾಂಶವನ್ನು ನೀಡಬಹುದಿತ್ತು ಎಂಬ ಸಂಬಂಧಿತ ಚರ್ಚೆಯನ್ನು ಇದು ಬೆಟ್ಟು ಮಾಡಿದೆ. ಉದಾಹರಣೆಗೆ ಭಾರತದ ಕೋವಿಡ್ ಪರಿಹಾರ ಪ್ಯಾಕೇಜ್ ಜನರಿಗೆ ಉಚಿತ ಪಡಿತರ ಪೂರೈಕೆಯ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿತ್ತು,ಆದಾಯ ಬೆಂಬಲವನ್ನು ಅದು ಹೆಚ್ಚುಕಡಿಮೆ ಪರಿಗಣಿಸಿಯೇ ಇರಲಿಲ್ಲ. ಹೀಗಾಗಿ ನಗದು ವರ್ಗಾವಣೆಯಂತಹ ಹೆಚ್ಚಿನ ಆದಾಯ ಬೆಂಬಲ ಕ್ರಮಗಳನ್ನು ಪ್ಯಾಕೇಜ್ ನಲ್ಲಿ ಸೇರಿಸುವಂತೆ ಕೆಲವು ತಜ್ಞರು ಕರೆ ನೀಡಿದ್ದರು.

ಜಾಗತಿಕವಾಗಿ ಕೋವಿಡ್ ಗೆ ಹೆಚ್ಚಿನ ಪ್ರತಿಕ್ರಿಯೆಯು ಜನರ ಚಲನವಲನಗಳನ್ನು ನಿರ್ಬಂಧಿಸುವುದರ ಸುತ್ತವೇ ಕೇಂದ್ರೀಕೃತಗೊಂಡಿತ್ತು. ವರದಿಗಳಂತೆ 2020 ಎಪ್ರಿಲ್ ಮೊದಲ ವಾರದ ವೇಳೆಗೆ ಹೆಚ್ಚುಕಡಿಮೆ ಜಗತ್ತಿನ ಅರ್ಧದಷ್ಟು ಜನಸಂಖ್ಯೆಯು ಒಂದಲ್ಲೊಂದು ವಿಧದ ಲಾಕ್ಡೌನ್ ನ ಮುಷ್ಟಿಯಲ್ಲಿತ್ತು.

ಫ್ರಾನ್ಸ್ ನ ಬೋರ್ಡೆಕ್ಸ್ ವಿವಿಯ ಉಲುಗ್ಬೆಕ್ ಅಮಿಂಜೊನೊವ್,ಆಲಿವರ್ ಬಾರ್ಗೇನ್ ಮತ್ತು ಟಾಂಗಯ್ ಬೆರ್ನಾರ್ಡ್ ಅವರು ನಡೆಸಿದ ‘ಬಡತನ ಮತ್ತು ಕೋವಿಡ್-19ಕ್ಕೆ ಒಡ್ಡುವಿಕೆ:ಆದಾಯ ಬೆಂಬಲದ ಪಾತ್ರ ’ ಅಧ್ಯಯನವು ನಗದು ವರ್ಗಾವಣೆಯಂತಹ ಆದಾಯ ಬೆಂಬಲ ಕ್ರಮಗಳು ಕಡಿಮೆ ಆದಾಯದ ಪ್ರದೇಶಗಳಲ್ಲಿಯ ಜನರು ಹೆಚ್ಚು ಸಮಯ ತಮ್ಮ ಮನೆಗಳಲ್ಲಿಯೇ ಇರಲು ಅವಕಾಶ ಒದಗಿಸಿತ್ತು ಮತ್ತು ತನ್ಮೂಲಕ ಕೋವಿಡ್ ಹರಡುವಿಕೆ ಪ್ರಮಾಣವನ್ನು ಕಡಿಮೆ ಮಾಡಿತ್ತು ಎಂದು ತೋರಿಸಿದೆ.
 
ಬಡತನ ಕುರಿತು ಸಾಂಕ್ರಾಮಿಕ-ಪೂರ್ವ ಸಮೀಕ್ಷೆಗಳನ್ನು ನೆಚ್ಚಿಕೊಂಡಿರುವ ಅಧ್ಯಯನವು ಆಫ್ರಿಕಾ,ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾಗಳ 43 ದೇಶಗಳಾದ್ಯಂತ 729 ಉಪರಾಷ್ಟ್ರೀಯ ಪ್ರದೇಶಗಳನ್ನು ವಿಶ್ಲೇಷಣೆಗೊಳಪಡಿಸಿತ್ತು. 2020,ಫೆ.15 ಮತ್ತು ಸೆ.3ರ ನಡುವಿನ 202 ದಿನಗಳ ಗೂಗಲ್ ಕೋವಿಡ್-19 ಚಲನವಲನ ವರದಿಗಳಿಂದ ಲಭ್ಯ ದತ್ತಾಂಶಗಳನ್ನು ಅದು ಪರಿಶೀಲಿಸಿತ್ತು.

ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ನಿಯಂತ್ರಣ ಕ್ರಮಗಳನ್ನು ಪಾಲಿಸುವಲ್ಲಿ ಬಡ ಪ್ರದೇಶಗಳು ಶ್ರೀಮಂತ ಪ್ರದೇಶಗಳಿಗಿಂತ ಹಿಂದುಳಿದಿದ್ದವು. ಮನೆಗಳಲ್ಲಿಯೇ ಕುಳಿತುಕೊಂಡು ಕೆಲಸವನ್ನು ತಪ್ಪಿಸಿಕೊಳ್ಳುವ ಸ್ಥಿತಿಯನ್ನು ಎದುರಿಸುವ ತಾಕತ್ತು ಜನರಲ್ಲಿ ಇರದಿದ್ದುದು ಇದಕ್ಕೆ ಕಾರಣವಾಗಿತ್ತು. ಅಂದರೆ ಶ್ರೀಮಂತ ಪ್ರದೇಶಗಳಿಗೆ ಹೋಲಿಸಿದರೆ ಸಾಂಕ್ರಾಮಿಕದ ಸಂದರ್ಭದಲ್ಲಿ ಬಡ ಪ್ರದೇಶಗಳಲ್ಲಿಯ ಜನರಿಗೆ ಚಲನವಲನಗಳು ಹೆಚ್ಚು ಅನಿವಾರ್ಯವಾಗಿದ್ದವು.

ಸರಕಾರದ ಬೆಂಬಲ ಕ್ರಮವಾಗಿ ವಿಶ್ವಾದ್ಯಂತ ಸುಮಾರು 101 ಕೋಟಿ ಜನರು ನಗದು ಹಣ ವರ್ಗಾವಣೆಯ ಲಾಭವನ್ನು ಪಡೆದಿದ್ದರು ಎಂದು ಅಧ್ಯಯನ ವರದಿಯು ಹೇಳಿದೆ.

ಜನರು ಕೆಲಸವನ್ನು ತಪ್ಪಿಸಿಕೊಳ್ಳದ ಅನಿವಾರ್ಯ ಸ್ಥಿತಿಯಲ್ಲಿದ್ದಾಗ ಅವರ ಚಲವಲನಗಳನ್ನು ನಿರ್ಬಂಧಿಸುವುದು ಕಷ್ಟವಾಗುತ್ತದೆ. ಆದಾಗ್ಯೂ ಆದಾಯದ ಬೆಂಬಲವಿದ್ದರೆ ಅವರು ಮನೆಯಲ್ಲಿಯೇ ಉಳಿದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಲಾಕ್ಡೌನ್ ಕ್ರಮಗಳನ್ನು ಉತ್ತಮವಾಗಿ ಪಾಲಿಸಲು ಸಾಧ್ಯವಾಗುತ್ತದೆ. ಹೀಗೆ ನಗದು ವರ್ಗಾವಣೆಗಳು ಜನರಿಗೆ ಜೀವನೋಪಾಯವನ್ನು ನೀಡುವ ಜೊತೆಗೆ ಬಡಜನರು ಸಾರ್ವಜನಿಕ ಆರೋಗ್ಯ ನಿಯಮಗಳನ್ನು ಪಾಲಿಸಲು ನೆರವಾಗುತ್ತದೆ ಮತ್ತು ತನ್ಮೂಲಕ ಕೋವಿಡ್ ನಿಯಂತ್ರಿಸುತ್ತದೆ ಎಂದು ಅಧ್ಯಯನ ತಂಡವು ವರದಿಯಲ್ಲಿ ಪ್ರತಿಪಾದಿಸಿದೆ.

ಭಾರತವು ಆದಾಯ ಬೆಂಬಲದ ಈ ಮಾದರಿಯನ್ನು ಅನುಸರಿಸಿರಲಿಲ್ಲ

ಸರಕಾರವು ಹೇಳಿರುವಂತೆ ಭಾರತದ ಉತ್ತೇಜಕ ಪ್ಯಾಕೇಜ್ ಜಿಡಿಪಿಯ ಸುಮಾರು ಶೇ.10ರಷ್ಟಿತ್ತು. ಆದಾಗ್ಯೂ ಅದರ ಸುಮಾರು ಮುಕ್ಕಾಲು ಭಾಗವು ಸಾಲ ಖಾತರಿಗಳು ಮತ್ತು ಮಾರುಕಟ್ಟೆಯಲ್ಲಿ ದ್ರವ್ಯತೆಯನ್ನು ಸರಾಗಗೊಳಿಸಲು ಬಳಕೆಯಾಗಿತ್ತು. ಉತ್ತೇಜಕ ಪ್ಯಾಕೇಜ್ಗಾಗಿ ಸರಕಾರವು ಮಾಡಿದ್ದ ಪರಿಣಾಮಕಾರಿ ವೆಚ್ಚವು ಅದರ ಒಂದು ಸಣ್ಣ ಭಾಗ ಮಾತ್ರ,ಅಂದರೆ ಜಿಡಿಪಿಯ ಕೇವಲ ಶೇ.1ರಷ್ಟಾಗಿತ್ತು. ಈ ಶೇ.1ರಲ್ಲಿಯೂ ಸರಕಾರವು ಜನರಿಗೆ ಉಚಿತ ಪಡಿತರವನ್ನು ಒದಗಿಸಲು ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿತ್ತೇ ಹೊರತು ಆದಾಯ ಬೆಂಬಲದ ಮೇಲಲ್ಲ.

ಪಿಎಂ ಗರೀಬ್ ಕಲ್ಯಾಣ ಪ್ಯಾಕೇಜ್

 2020 ಮಾರ್ಚ್ ನಲ್ಲಿ ಪ್ರಕಟಿಸಲಾಗಿದ್ದ 1.70 ಲ.ಕೋ.ರೂ.ಗಳ ಈ ಪ್ಯಾಕೇಜ್ನಡಿ ಸುಮಾರು 80 ಕೋ.ಜನರಿಗೆ ಉಚಿತ ಪಡಿತರವನ್ನು ವಿತರಿಸಲಾಗಿತ್ತು. ನಗದು ವರ್ಗಾವಣೆ ಈ ಪ್ಯಾಕೇಜ್ನ ಒಂದು ಸಣ್ಣ ಭಾಗವಾಗಿತ್ತು. ಮೂರು ತಿಂಗಳುಗಳ ಅವಧಿಗೆ ಜನಧನ ಖಾತೆಗಳನ್ನು ಹೊಂದಿರುವ 20 ಕೋಟಿ ಮಹಿಳೆಯರಿಗೆ ಮಾಸಿಕ 500 ರೂ. ಮತ್ತು ಮೂರು ಕೋಟಿ ಬಡ ಹಿರಿಯ ನಾಗರಿಕರು,ವಿಧವೆಯರು ಮತ್ತು ಅಂಗವಿಕಲರಿಗೆ ಮಾಸಿಕ 1,000 ರೂ.ಗಳ ಆರ್ಥಿಕ ನೆರವಿನ ಭರವಸೆಯನ್ನು ಸರಕಾರವು ನೀಡಿತ್ತು. ಇದರ ಜೊತೆಗೆ ಅದಾಗಲೇ ತಾನು ಹೊಂದಿದ್ದ ರೈತರಿಗೆ ನಗದು ವರ್ಗಾವಣೆಯ ಬಾಧ್ಯತೆಯನ್ನೂ ಕಾರ್ಯಗತಗೊಳಿಸಿತ್ತು.

ಇಂತಹ ಸಮಯದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುವುದು ತುಂಬ ಮುಖ್ಯ ನಿಜ,ಆದರೆ ಅದೊಂದೇ ಸಾಲದು. ರಘುರಾಮ ರಾಜನ್ ಮತ್ತು ರಿತಿಕಾ ಖೇರಾರಂತಹ ಆರ್ಥಿಕ ತಜ್ಞರು ನಗದು ವರ್ಗಾವಣೆ ಮತ್ತು ಆಹಾರ ಇವೆರಡೂ ಅಗತ್ಯವೆಂದು ಪ್ರತಿಪಾದಿಸಿದ್ದಾರೆ. ಪಿಎಂ-ಸ್ವನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ನೀಡಲಾಗಿದ್ದ ಸಾಲಗಳನ್ನು ನೇರ ನಗದು ಅನುದಾನಗಳನ್ನಾಗಿ ಪರಿವರ್ತಿಸಬೇಕು ಎಂದು ಕಾರ್ಮಿಕ ಖಾತೆಗೆ ಸಂಬಂಧಿಸಿದ ಸ್ಥಾಯಿ ಸಮಿತಿಯೂ ಆಗಸ್ಟ್ನಲ್ಲಿ ಸರಕಾರಕ್ಕೆ ಶಿಫಾರಸು ಮಾಡಿತ್ತು.

ಕೆಲವು ರಾಜ್ಯಗಳು ಕಟ್ಟಡ ನಿರ್ಮಾಣ ಕಾರ್ಮಿಕರು,ಬೀದಿ ವ್ಯಾಪಾರಿಗಳಂತಹ ದುರ್ಬಲ ವರ್ಗಗಳ ಜನರಿಗೆ ನಗದು ವರ್ಗಾವಣೆಗಳನ್ನು ಪ್ರಕಟಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News