ಒಕ್ಕಲಿಗರ ಸಂಘದ ಕಾಳೇಗೌಡ, ಬೆಟ್ಟೇಗೌಡ ವಿರುದ್ಧ ಮತ್ತೊಂದು ಪ್ರಕರಣ

Update: 2021-10-26 16:36 GMT

ಬೆಂಗಳೂರು, ಅ.26: ರಾಜ್ಯ ಒಕ್ಕಲಿಗರ ಸಂಘದ ಮಾಜಿ ಮಾಜಿ ಅಧ್ಯಕ್ಷ ಡಿ.ಎನ್.ಬೆಟ್ಟೇಗೌಡ ಹಾಗೂ ಖಜಾಂಚಿ ಡಿ.ಸಿ.ಕೆ.ಕಾಳೇಗೌಡ ವಿರುದ್ಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. 

ರಾಜ್ಯ ಒಕ್ಕಲಿಗರ ಸಂಘದ ಸಿಇಒ ಡಾ.ಸಿ.ಸಿದ್ದರಾಮಯ್ಯ ದೂರು ಸಲ್ಲಿಸಿದ್ದು, ಕೆಂಪೇಗೌಡ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಅನಸ್ತೇಷಿಯಾ ಮೆಡಿಕಲ್ ಪಿಜಿ ಕೋರ್ಸ್‍ಗೆ ಡಾ.ಮನೋಜ್ ಎಸ್. ಎಂಬುವವರು 2014-15ನೆ ಸಾಲಿನಲ್ಲಿ ದಾಖಲಾಗಿದ್ದಾರೆ.

ಬಳಿಕ ಆಸ್ಪತ್ರೆಯ ಅಭಿವೃದ್ಧಿ ಶುಲ್ಕ 55 ಲಕ್ಷ ರೂ. ಪೈಕಿ 35 ಲಕ್ಷ ರೂ.ಗಳನ್ನು ರಾಜ್ಯ ಒಕ್ಕಲಿಗರ ಸಂಘಕ್ಕೆ ಸಂದಾಯ ಮಾಡಿದ್ದು, ಉಳಿದ 20 ಲಕ್ಷ ರೂ.ಗಳನ್ನು ಬಾಕಿ ಉಳಿಸಿಕೊಂಡಿದ್ದರು. ಏ.21, 2017ರಂದು ಡಿ.ಸಿ.ಕೆ.ಕಾಳೇಗೌಡ ಅವರು ಬೆಟ್ಟೇಗೌಡ ಅವರಿಗೆ ಪತ್ರ ಬರೆದು ಮನೋಜ್ ಅವರು ಸಂದಾಯ ಮಾಡಬೇಕಾದ 20 ಲಕ್ಷ ಹಣವನ್ನು ವಿದ್ಯಾರ್ಥಿಯಿಂದ ಪಡೆದುಕೊಂಡು ಸಂದಾಯ ಮಾಡಿಸುವುದಾಗಿ ಸುಳ್ಳು ಆಶ್ವಾಸನೆ ನೀಡಿ ಎನ್‍ಒಸಿ ನೀಡಲು ಪತ್ರದಲ್ಲಿ ಕೇಳಿದ್ದರು ಎಂದು ಆರೋಪಿಸಿದ್ದಾರೆ.

ಬೆಟ್ಟೇಗೌಡ ಅವರು ಬಾಕಿ ಹಣ ಬರದಿದ್ದರೂ ಸಹ ಎನ್‍ಒಸಿ ನೀಡಿದ್ದಾರೆ. ನಂತರ ಈ ವಿದ್ಯಾರ್ಥಿಯ ಹಣ ಬಾಕಿ ಇದ್ದರೂ ಸಹ ಕಾಳೇಗೌಡ ಅವರು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಮತ್ತೆ ಬೆಟ್ಟೇಗೌಡ ಅವರಿಗೆ ಸುಳ್ಳು ಆಶ್ವಾಸನೆ ನೀಡಿ ವಿದ್ಯಾರ್ಥಿಗೆ ಹುದ್ದೆಗೆ ಅವಕಾಶ ಬಂದಿದೆ. ಆತನಿಗೆ ಪಿಜಿ ಅಂಕಪಟ್ಟಿ ನೀಡಲು ಪತ್ರ ನೀಡಿ ಹಣ ಸಂದಾಯ ಮಾಡದೆ ವಿದ್ಯಾರ್ಥಿಯು ಹೊರಗೆ ಹೋಗಲು ಅವಕಾಶ ಮಾಡಿಕೊಟ್ಟಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News