ನೈಜೀರಿಯಾ: ಮಸೀದಿಯಲ್ಲಿ ಗುಂಡಿನ ದಾಳಿ 16 ಮಂದಿ ಮೃತ್ಯು ; 3 ಮಂದಿಗೆ ಗಾಯ
ಅಬುಜಾ, ಅ.26: ನೈಜೀರಿಯಾದ ನೈಗರ್ ರಾಜ್ಯದ ಮಝಾಕುಕಾ ಗ್ರಾಮದ ಮಸೀದಿಯಲ್ಲಿ ಸೋಮವಾರ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಪ್ರಾರ್ಥನೆ ನಡೆಸುತ್ತಿದ್ದ 16 ಮಂದಿ ಮೃತರಾಗಿದ್ದಾರೆ ಎಂದು ಸರಕಾರದ ಕಾರ್ುದರ್ಶಿ ಅಹ್ಮದ್ ಇಬ್ರಾಹಿಂ ಹೇಳಿದ್ದಾರೆ.
ಮಶೆಗು ಗ್ರಾಮದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದು 16 ಮಂದಿ ಸಾವನ್ನಪ್ಪಿದ್ದು ಇತರ 3 ಮಂದಿ ಗಾಯಗೊಂಡಿದ್ದಾರೆ. ಒಬ್ಬ ಗಾಯಾಳುವಿನ ಸ್ಥಿತಿ ಗಂಭೀರವಾಗಿದೆ. ಪ್ರಕರಣದ ಮಾಹಿತಿ ತಿಳಿದೊಡನೆ ಸೇನಾ ಸಿಬಂದಿ ಹಾಗೂ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ರವಾನಿಸಿದ್ದು ದುಷ್ಕರ್ಮಿಗಳ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಗೆ ಕಾರಣ ಸ್ಪ್ಟವಾಗಿಲ್ಲ ಎಂದು ಇಬ್ರಾಹಿಂ ಹೇಳಿದ್ದಾರೆ.
ನೈಜೀರಿಯಾದ ಈಶಾನ್ಯ ಭಾಗದಲ್ಲಿರುವ ಕೆಲವು ಗ್ರಾಮಗಳು ಬಂಡುಗೋರ ಪಡೆಗಳ ನಿಯಂತ್ರಣದಲ್ಲಿದ್ದು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪಹರಣ ಕೃತ್ಯ, ಗುಂಡಿನ ದಾಳಿಯ ಪ್ರಕರಣಗಳು ಎಗ್ಗಿಲ್ಲದೆ ಮುಂದುವರಿಯುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.