ತನ್ನ ʼನಮಾಝ್‌ʼ ಹೇಳಿಕೆ ಕುರಿತು ಕ್ಷಮೆ ಯಾಚಿಸಿದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಖಾರ್‌ ಯೂನಿಸ್‌

Update: 2021-10-27 07:48 GMT

ಇಸ್ಲಾಮಾಬಾದ್:‌ ರವಿವಾರ ದುಬೈನಲ್ಲಿ ನಡೆದ ಭಾರತ-ಪಾಕಿಸ್ತಾನ ಕ್ರಿಕೆಟ್‌ ಪಂದ್ಯಾಟದ ವೇಳೆ ಭಾರತ ತಂಡವನ್ನು ಮಣಿಸಿ ಪಾಕಿಸ್ತಾನ ಕ್ರಿಕೆಟ್‌ ತಂಡ ಗೆಲುವು ಸಾಧಿಸಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಬೌಲರ್‌ ವಖಾರ್‌ ಯೂನಿಸ್‌ ತಾವು ನೀಡಿದ್ದ ಅನುಚಿತ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ.

ಪಾಕಿಸ್ತಾನದ ಟಿವಿ ಮಾಧ್ಯಮವೊಂದಕ್ಕೆ ಪಂದ್ಯ ನಡೆದ ಒಂದು ದಿನದ ಬಳಿಕ ಗೆಲುವಿನ ಕುರಿತು ಚರ್ಚೆಗೆಂದು ಯೂನಿಸ್‌ ರನ್ನು ಆಹ್ವಾನಿಸಿದ್ದ ವೇಳೆ "ಪಂದ್ಯಾಟದ ಸಂದರ್ಭದಲ್ಲಿ ಹಿಂದೂಗಳ ಮುಂದೆ ಮುಹಮ್ಮದ್‌ ರಿಝ್ವಾನ್‌ ನಮಾಝ್‌ ಮಾಡಿದ್ದನ್ನು ನೋಡುವುದು ನನಗೆ ತುಂಬಾ ವಿಶೇಷ ಎನಿಸಿತು" ಎಂಬ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆಯ ಕುರಿತು ಸಾಮಾಜಿಕ ತಾಣದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಭಾರತ ಮಾತ್ರವಲ್ಲದೇ ಹಲವು ಪಾಕಿಸ್ತಾನಿ ಕ್ರಿಕೆಟ್‌ ಅಭಿಮಾನಿಗಳು ಈ ಹೇಳಿಕೆಯನು ಖಂಡಿಸಿದ್ದರು.

ಹಲವು ಟೀಕೆಗಳ ಬಳಿಕ ತಮ್ಮ ʼತಪ್ಪನ್ನುʼ ಅರ್ಥೈಸಿಕೊಂಡ ವಖಾರ್‌ ಯೂನಿಸ್‌ ಟ್ವಿಟರ್‌ ನಲ್ಲಿ ಕ್ಷಮೆಯಾಚಿಸಿದ್ದಾರೆ. ಆ ಸಂದರ್ಭದಲ್ಲಿ ಅದು ಹಲವರ ಭಾವನೆಗಳಿಗೆ ನೋವಾಗಬಹುದು ಎಂಬ ಅರಿವಿಲ್ಲದೇ ನಾನು ಹೇಳಿಕೆಯೊಂದನ್ನು ನೀಡಿದ್ದೇನೆ. ನಾನು ಈ ಕುರಿತು ಕ್ಷಮೆಯಾಚಿಸುತ್ತಿದ್ದೇನೆ. ಇದು ಖಂಡಿತಾ ಪೂರ್ವನಿಯೋಜಿತವಾಗಿ ನಡೆದದ್ದೇನೂ ಅಲ್ಲ. ತಪ್ಪಾಗಿದೆ. ಕ್ರೀಡೆಯು ಜನರನ್ನು ಎಲ್ಲಾ ವರ್ಗ, ಬಣ್ಣ, ಧರ್ಮಗಳ ಆಚೆಗೂ ಒಗ್ಗೂಡಿಸುತ್ತದೆ" ಎಂದು ಟ್ವೀಟ್‌ ಮಾಡಿದ್ದಾರೆ. 

ಭಾರತೀಯ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ, ಮಾಜಿ ಕ್ರಿಕೆಟಿಗ ವಸೀಂ ಜಾಫರ್‌, ಆಕಾಶ್‌ ಚೋಪ್ರ ಸೇರಿದಂತೆ ಹಲವರು ಈ ಕುರಿತು ಖಂಡನೆ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News