ಬೆಂಗಳೂರು: ಬಾಂಗ್ಲಾದೇಶದಲ್ಲಿ ಹಿಂಸಾಚಾರ ಖಂಡಿಸಿ ಮಾನವ ಸರಪಳಿ ರಚಿಸಿ ಮುಸ್ಲಿಮರ ಪ್ರತಿಭಟನೆ

Update: 2021-10-27 11:41 GMT

ಬೆಂಗಳೂರು, ಅ.27: ಬಾಂಗ್ಲಾದೇಶದ ಅಲ್ಪಸಂಖ್ಯಾತರಾದ ಹಿಂದೂಗಳು ಮತ್ತು ಅವರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡಿಸಿ ಬೃಹತ್ ಮಾನವ ಸರಪಳಿ ರಚಿಸಿ ಮುಸ್ಲಿಮರು ಪ್ರತಿಭಟನೆ ನಡೆಸಿದರು.

ನಗರದ ನಂದಿದುರ್ಗ ರಸ್ತೆಯ ಖುದ್ದೂಸ್ ಸಾಬ್ ಈದ್ಗಾ ಮೈದಾನದ ಬಳಿ ಜುಮ್ಮಾ ಮಸೀದಿ ಆಡಳಿತ ಮಂಡಳಿ ನೇತೃತ್ವದಲ್ಲಿ ಜಮಾಯಿಸಿದ ಮುಸ್ಲಿಮ್ ಸಮುದಾಯದ ಧರ್ಮ ಗುರುಗಳು, ಚಿಂತಕರು, ಸಮುದಾಯದ ಮುಖಂಡರು, ಅಲ್ಪಸಂಖ್ಯಾತರನ್ನು ರಕ್ಷಿಸುವ ಕೆಲಸ ಆಗಬೇಕು. ಜತೆಗೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಟಿ ಮಾರುಕಟ್ಟೆಯ ಜಾಮೀಯಾ ಮಸೀದಿ ಮೌಲಾನ ಮಖ್ಸೂದ್ ಇಮ್ರಾನ್ ರಶಾದಿ, ಯಾವುದೇ ಒಂದು ದೇಶದಲ್ಲಿ ವಾಸಿಸುವ ಅಲ್ಪಸಂಖ್ಯಾತರ ರಕ್ಷಣೆ ಆಯಾ ಸರಕಾರಗಳ ಹೊಣೆ. ಹೀಗಾಗಿ ಬಾಂಗ್ಲಾದಲ್ಲಿ ನೆಲೆಸಿರುವ ಹಿಂದೂಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಹತ್ತಿಕ್ಕಬೇಕು ಎಂದು ಒತ್ತಾಯಿಸಿದರು.

ಸೌಹಾರ್ದತೆ, ಸಹಬಾಳ್ವೆ ಇದ್ದರೆ ಮಾತ್ರ ಯಾವುದೇ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದ ಅವರು, ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆ ಅಲ್ಲಿನ ಸರಕಾರದ ಜವಾಬ್ದಾರಿ. ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ನಡೆಸಿ ಆಕ್ರಮಣ ಮಾಡಿದ ಮತಾಂಧರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಹೇಳಿದರು.

ಜೆಡಿಎಸ್ ನಾಯಕ, ಮಂಡಳಿ ಟ್ರಸ್ಟಿ ಉಸ್ಮಾನ್ ಶರೀಫ್ ಮಾತನಾಡಿ, ಕೇಂದ್ರ ಸರಕಾರ ಈ ಕೂಡಲೇ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಅವರ ರಕ್ಷಣೆಗೆ ಬೇಕಾದ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ರಾಜತಾಂತ್ರಿಕ ಕಚೇರಿ ಮೂಲಕ ಪ್ರಯತ್ನ ಮಾಡಬೇಕು ಎಂದು ಒತ್ತಾಯ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News