ಅಲೋಪತಿ ವಿರುದ್ಧ ತಪ್ಪು ಮಾಹಿತಿ: ರಾಮ್‌ದೇವ್ ಗೆ ದಿಲ್ಲಿ ಹೈಕೋರ್ಟ್ ಸಮನ್ಸ್

Update: 2021-10-27 15:13 GMT

ಹೊಸದಿಲ್ಲಿ,ಅ.27: ಕೋವಿಡ್ ಸಾಂಕ್ರಾಮಿಕದ ನಡುವೆ ಅಲೋಪತಿ ವೈದ್ಯಪದ್ಧತಿಯ ವಿರುದ್ಧ ತಪ್ಪು ಮಾಹಿತಿಯನ್ನು ಹರಡಿದ್ದಕ್ಕಾಗಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಮತ್ತು ಇತರ ವೈದ್ಯರ ಸಂಘಗಳು ಹೂಡಿರುವ ಮೊಕದ್ದಮೆಗೆ ಸಂಬಂಧಿಸಿದಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಬುಧವಾರ ಬಾಬಾ ರಾಮದೇವ ಅವರಿಗೆ ಸಮನ್ಸ್ ಹೊರಡಿಸಿದೆ.

ಪ್ರಕರಣವು ತಳ್ಳಿಹಾಕುವಂಥದ್ದಲ್ಲ ಎಂದು ಹೇಳಿದ ನ್ಯಾ.ಸಿ.ಹರಿಶಂಕರ ಅವರು ಪ್ರಕರಣದಲ್ಲಿ ತನ್ನ ಉತ್ತರವನ್ನು ಸಲ್ಲಿಸಲು ರಾಮದೇವ ಅವರಿಗೆ ನಾಲ್ಕು ವಾರಗಳ ಸಮಯಾವಕಾಶವನ್ನು ನೀಡಿದರು. ಪ್ರಕರಣದ ಮುಂದಿನ ವಿಚಾರಣೆ ಜನವರಿಯಲ್ಲಿ ನಡೆಯಲಿದೆ.

ರಾಮದೇವ ವಿರುದ್ಧದ ಆರೋಪಗಳಲ್ಲಿಯ ಸತ್ಯಾಸತ್ಯತೆಯ ಕುರಿತು ತಾನು ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ ಮತ್ತು ಯಾವುದೇ ಮಧ್ಯಂತರ ಅಥವಾ ಇನ್ಯಾವುದೇ ಪರಿಹಾರ ನೀಡುವ ಬಗ್ಗೆ ನಂತರ ಪರಿಶೀಲಿಸಲಾಗುವುದು ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.

‘ನಾನು ರಾಮದೇವ ಅವರ ವೀಡಿಯೊ ತುಣುಕುಗಳನ್ನು ನೋಡಿದ್ದೇನೆ. ಅವುಗಳಲ್ಲಿ ನಿಮ್ಮ ಕಕ್ಷಿದಾರರು ಅಲೋಪತಿ ಚಿಕಿತ್ಸಾ ಪದ್ಧತಿಯ ಶಿಷ್ಟಾಚಾರವನ್ನು ತಿರಸ್ಕರಿಸಿದ್ದಾರೆ. ಅಕ್ಷರಶಃ ಅವರು ಸ್ಟಿರಾಯ್ಡಿಗಳ ಶಿಫಾರಸು,ಆಸ್ಪತ್ರೆಗಳಿಗೆ ಜನರ ಭೇಟಿಯ ಬಗ್ಗೆ ತಿರಸ್ಕಾರ ವ್ಯಕ್ತಪಡಿಸಿದ್ದಾರೆ. ವೀಡಿಯೊ ತುಣುಕುಗಳನ್ನು ಪರಿಶೀಲಿಸಿದರೆ ಪ್ರಕರಣವನ್ನು ದಾಖಲಿಸಲು ಖಂಡಿತವಾಗಿಯೂ ಕಾರಣಗಳಿವೆ ಎಂದು ನ್ಯಾಯಾಧೀಶರು ರಾಮದೇವ ಪರ ಹಿರಿಯ ವಕೀಲ ರಾಜೀವ ನಾಯರ್ ಅವರಿಗೆ ತಿಳಿಸಿದರು.

ಸಮನ್ಸ್ ಹೊರಡಿಸುವುದಕ್ಕೆ ತನ್ನ ಆಕ್ಷೇಪವಿಲ್ಲ ಎಂದು ನಾಯರ್ ಹೇಳಿದರಾದರೂ ಪ್ರಕರಣದಲ್ಲಿ ಮಾಡಲಾಗಿರುವ ಆರೋಪಗಳನ್ನು ವಿರೋಧಿಸಿದರು.

ಕೊರೊನಿಲ್,ಮಾನಹಾನಿ ಮತ್ತು ಲಸಿಕೆಗೆ ಹಿಂಜರಿತ ಹೀಗೆ ದಾವೆಯಲ್ಲಿ ಮೂರು ಭಾಗಗಳಿವೆ. ನ್ಯಾಯಾಲಯವು ನೋಟಿಸನ್ನು ಮಾನಹಾನಿಗೆ ಮಾತ್ರ ಸೀಮಿತಗೊಳಿಸಬಹದು ಎಂದು ಅವರು ನ್ಯಾಯಾಲಯವನ್ನು ಆಗ್ರಹಿಸಿದರು.

ರಾಮದೇವ ಜೊತೆಗೆ ಆಚಾರ್ಯ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದಕ್ಕೂ ನೋಟಿಸ್‌ಗಳನ್ನು ಹೊರಡಿಸಿದ ನ್ಯಾಯಾಧೀಶರು ಉತ್ತರಿಸುವಂತೆ ಸೂಚಿಸಿದ್ದಾರೆ.ಹೃಷಿಕೇಶ,ಪಾಟ್ನಾ ಮತ್ತು ಭುವನೇಶ್ವರಗಳ ಏಮ್ಸ್‌ಗಳ ಸ್ಥಾನಿಕ ವೈದ್ಯರ ಸಂಘಗಳು,ಚಂಡಿಗಡದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಸ್ಥಾನಿಕ ವೈದ್ಯರ ಸಂಘ, ಪಂಜಾಬಿನ ಸ್ಥಾನಿಕ ವೈದ್ಯರ ಒಕ್ಕೂಟ ಸೇರಿದಂತೆ ವಿವಿಧ ವೈದ್ಯಕೀಯ ಸಂಘಟನೆಗಳು ರಾಮದೇವ ವಿರುದ್ಧ ಉಚ್ಚ ನ್ಯಾಯಾಲಯದ ಮೆಟ್ಟಲನ್ನೇರಿವೆ.

ಹಲವಾರು ಕೋವಿಡ್ ಸಾವುಗಳಿಗೆ ಅಲೋಪತಿ ಕಾರಣವೆಂದು ರಾಮದೇವ ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ ಮತ್ತು ಅಲೋಪತಿ ವೈದ್ಯರು ರೋಗಿಗಳು ಸಾಯುವಂತೆ ಮಾಡುತ್ತಿದ್ದಾರೆ ಎಂದು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಈ ಸಂಘಟನೆಗಳು ಆರೋಪಿಸಿವೆ.

ಸಾಂಕ್ರಾಮಿಕದ ನಡುವೆ ಕೊರೊನಿಲ್‌ಗೆ ಕೇವಲ ನಿರೋಧಕ ಶಕ್ತಿವರ್ಧಕ ಔಷಧಿ ಎಂದು ಪರವಾನಿಗೆ ಪಡೆದಿದ್ದರೂ ರಾಮದೇವ ಅದು ಕೋವಿಡ್‌ಗೆ ಚಿಕಿತ್ಸೆ ನೀಡುತ್ತದೆ ಎಂಬ ಆಧಾರವಿಲ್ಲದ ಹೇಳಿಕೆಗಳನ್ನು ನೀಡಿದ್ದರು ಎಂದು ಅರ್ಜಿದಾರರ ಪರ ವಕೀಲ ಅಖಿಲ್ ಸಿಬಲ್ ವಾದಿಸಿದ್ದರು.

ಅತ್ಯಂತ ಪ್ರಭಾವಿ ವ್ಯಕ್ತಿಯಾಗಿರುವ ರಾಮದೇವ ಅಲೋಪತಿ ಚಿಕಿತ್ಸೆಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಸಾರ್ವಜನಿಕರ ಮನಸ್ಸುಗಳಲ್ಲಿ ಸಂಶಯವನ್ನು ಬಿತ್ತಿದ್ದು ಮಾತ್ರವಲ್ಲ,ಕೋವಿಡ್ ಲಸಿಕೆಯ ಬಗ್ಗೆಯೂ ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ ಎಂದೂ ಆರೋಪಿಸಿರುವ ಅರ್ಜಿಗಳು,ಇದು ಕೊರೊನಿಲ್ ಸೇರಿದಂತೆ ರಾಮದೇವ ಅವರ ಉತ್ಪನ್ನಗಳ ಜಾಹೀರಾತು ಮತ್ತು ಮಾರಾಟ ತಂತ್ರವಷ್ಟೇ ಆಗಿತ್ತು ಎಂದು ಹೇಳಿವೆ.

ಅಲೋಪತಿ ಔಷಧಿಗಳು ವಿರುದ್ಧ ಮತ್ತು ಪತಂಜಲಿಯ ಕೋವಿಡ್ ಕಿಟ್ ಕುರಿತು ಹೇಳಿಕೆಗಳಿಗಾಗಿ ದಿಲ್ಲಿ ವೈದ್ಯಕೀಯ ಸಂಘದ ಪ್ರತ್ಯೇಕ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಈ ಹಿಂದೆ ಜೂ.3ರಂದು ರಾಮದೇವ ಅವರಿಗೆ ಸಮನ್ಸ್ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News