ಪಂದೀರಂಕಾವು ಯುಎಪಿಎ ಪ್ರಕರಣ: ತ್ವಾಹಾ ಫಸಲ್‌ ಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌

Update: 2021-10-28 06:18 GMT

ಹೊಸದಿಲ್ಲಿ: ಪಂದೀರಂಕಾವ್‌ ಯುಎಪಿಎ ಪ್ರಕರಣದ ಆರೋಪಿ ತ್ವಾಹಾ ಫಸಲ್‌ ಗೆ ಸುಪ್ರೀಂ ಕೋರ್ಟ್‌ ಗುರುವಾರ ಜಾಮೀನು ನೀಡಿದೆ ಎಂದು livelaw ವರದಿ ಮಾಡಿದೆ. ಜಾಮೀನು ರದ್ದಾದ ಕಾರಣದಿಂದ ಫಸಲ್‌ ಜನವರಿಯಲ್ಲಿ ಪೊಲೀಸರಿಗೆ ಶರಣಾಗಿದ್ದರು.  ಜೊತೆಗೆ ಪ್ರಕರಣದ ಇನ್ನೋರ್ವ ಆರೋಪಿ ಅಲನ್‌ ಶುಹೈಬ್‌ ಗೆ ನೀಡಿದ್ದ ಜಾಮೀನು ರದ್ದುಗೊಳಿಸಬೇಕು ಎಂಬ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ. 

ನ್ಯಾಯಮೂರ್ತಿ ಅಜಯ್ ರಸ್ತೋಗಿ ಮತ್ತು ನ್ಯಾಯಮೂರ್ತಿ ಶ್ರೀನಿವಾಸ್ ಓಕಾ ಅವರನ್ನೊಳಗೊಂಡ ಪೀಠವು ಅರ್ಜಿಗಳನ್ನು ಆಲಿಸಿತು.

ತ್ವಾಹಾ ಅವರನ್ನು ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಲು ಮತ್ತು ಸಾಧ್ಯವಾದಷ್ಟು ಬೇಗ ಕಾರ್ಯವಿಧಾನಗಳನ್ನು ಪೂರ್ಣಗೊಳಿಸುವಂತೆ ನ್ಯಾಯಾಲಯವು ಎನ್‌ಐಎಗೆ ಸೂಚಿಸಿದೆ. ಕೋಝಿಕ್ಕೋಡ್‌ನಲ್ಲಿರುವ ತಮ್ಮ ಮನೆಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ತ್ವಾಹಾ ಅವರ ತಾಯಿ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ ಎಂದು mathrubhumi ವರದಿ ಮಾಡಿದೆ.

ಮಾವೋವಾದಿ ನಂಟುಗಳ ಆರೋಪದ ಮೇರೆಗೆ ಪಂದೀರಂಕಾವು ಪೊಲೀಸರು ತ್ವಾಹಾ ಮತ್ತು ಅಲನ್‌ರನ್ನು ನವೆಂಬರ್ 2019 ರಲ್ಲಿ ಬಂಧಿಸಿದ್ದರು. ನಂತರ ಪ್ರಕರಣವನ್ನು ಎನ್‌ಐಎ ಕೈಗೆತ್ತಿಕೊಂಡಿತ್ತು. ವಿಚಾರಣಾ ನ್ಯಾಯಾಲಯವು ಸೆಪ್ಟೆಂಬರ್ 9 ರಂದು ಕಠಿಣ ಷರತ್ತುಗಳ ಮೇರೆಗೆ ಅವರಿಗೆ ಜಾಮೀನು ನೀಡಿತು. ಪ್ರಾಸಿಕ್ಯೂಷನ್ ಅವರ ಮಾವೋವಾದಿ ಸಂಪರ್ಕವನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳನ್ನು ಸಲ್ಲಿಸಿಲ್ಲ ಮತ್ತು ವಿಚಾರಣೆಯ ನಂತರವೂ ಅವರನ್ನು ಕಸ್ಟಡಿಯಲ್ಲಿ ಇರಿಸಲಾಗಿದೆ ಎಂಬ ಡಿಫೆನ್ಸ್ ವಕೀಲರ ವಾದವನ್ನು ಒಪ್ಪಿಕೊಂಡ ನಂತರ ಜಾಮೀನು ನೀಡಲಾಯಿತು ಎಂದು ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News