ಬ್ರಿಟನ್ ನ ಟ್ರಾಲರ್ ಬೋಟ್ ವಶಕ್ಕೆ ಪಡೆದ ಫ್ರಾನ್ಸ್

Update: 2021-10-28 16:33 GMT
ಸಾಂದರ್ಭಿಕ ಚಿತ್ರ

ಪ್ಯಾರಿಸ್, ಅ.28: ಯುರೋಪಿಯನ್ ಯೂನಿಯನ್‌ನಿಂದ ಬ್ರಿಟನ್ ನಿರ್ಗಮಿಸಿದ ಬಳಿಕ ಬ್ರಿಟನ್ ಮತ್ತು ಫ್ರಾನ್ಸ್ ನಡುವೆ ಮೀನುಗಾರಿಕೆ ಪ್ರದೇಶ ವ್ಯಾಪ್ತಿಗೆ ಸಂಬಂಧಿಸಿದ ವಿವಾದ ವರ್ಧಿಸಿರುವಂತೆಯೇ, ತನ್ನ ಜಲವ್ಯಾಪ್ತಿಯಲ್ಲಿ ಅನುಮತಿಯಿಲ್ಲದೆ ಕಾರ್ಯಾಚರಣೆ ನಡೆಸುತ್ತಿದ್ದ ಬ್ರಿಟನ್‌ನ ಒಂದು ಮೀನುಗಾರಿಕಾ ದೋಣಿಯನ್ನು ವಶಕ್ಕೆ ಪಡೆದಿದ್ದು ಮತ್ತೊಂದು ದೋಣಿಗೆ ದಂಡ ವಿಧಿಸಲಾಗಿದೆ ಎಂದು ಫ್ರಾನ್ಸ್ ಹೇಳಿದೆ. ಉತ್ತರ ಫ್ರಾನ್ಸ್‌ನ ಲೆ ಹಾರ್ವೆಯಲ್ಲಿ ಬುಧವಾರ ರಾತ್ರಿ ಸಮುದ್ರವ್ಯಾಪ್ತಿಯ ಪೊಲೀಸ್ ಪಡೆ ಗಸ್ತು ತಿರುಗುತ್ತಿದ್ದಾಗ ಈ ದೋಣಿಗಳು ಪತ್ತೆಯಾಗಿದ್ದು ತಕ್ಷಣ ಎಚ್ಚರಿಕೆ ಸಂದೇಶ ನೀಡಲಾಗಿದೆ ಎಂದು ಫ್ರಾನ್ಸ್‌ನ ಸಮುದ್ರದ ವಿಷಯಕ್ಕೆ ಸಂಬಂಧಿಸಿದ ಇಲಾಖೆ ಹೇಳಿದೆ.

ಬ್ರಿಟನ್ ವಿನಾಕಾರಣ ಫ್ರಾನ್ಸ್‌ನ ಜಲವ್ಯಾಪ್ತಿಯನ್ನು ಉಲ್ಲಂಘಿಸುತ್ತಿದ್ದು ಇಂತಹ ಘಟನೆ ಪುನರಾವರ್ತನೆಯಾದರೆ ನಾವು ಬಲಪ್ರಯೋಗದ ಭಾಷೆ ಬಳಸಬೇಕಾಗುತ್ತದೆ ಎಂದು ಈ ಘಟನೆಗೂ ಕೆಲ ಗಂಟೆಗಳ ಮೊದಲು ್ರಾನ್ಸ್ ಸರಕಾರ ಎಚ್ಚರಿಕೆ ನೀಡಿತ್ತು.

ವಶಪಡಿಸಿಕೊಂಡ ಮೀನುಗಾರಿಕಾ ದೋಣಿಯನ್ನು ಬಂದರಿನ ಹೊರಭಾಗದಲ್ಲಿ ಕಟ್ಟಿಹಾಕಲಾಗಿದ್ದು ಫ್ರಾನ್ಸ್‌ನ ನ್ಯಾಯಾಂಗ ಇಲಾಖೆಯ ವಶದಲ್ಲಿದೆ. ಫ್ರಾನ್ಸ್‌ನ ಸಮುದ್ರವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲು ಅಗತ್ಯವಿರುವ ಅನುಮತಿ ಪತ್ರ ಹೊಂದಿಲ್ಲದ ಕಾರಣ ದೋಣಿಯ ಕ್ಯಾಪ್ಟನ್ ಕ್ರಿಮಿನಲ್ ಪ್ರಕರಣ ಎದುರಿಸಬೇಕಾಗುತ್ತದೆ ಮತ್ತು ದೋಣಿಯಲ್ಲಿರುವ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.  ಮತ್ತೊಂದು ದೋಣಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News