ಹವಾಮಾನ ಸುಸ್ಥಿತಿಗೆ ಬರಬೇಕಿದ್ದರೆ 3000 ಕಲ್ಲಿದ್ದಲು ಸ್ಥಾವರ ಮುಚ್ಚಬೇಕು: ಹವಾಮಾನ ತಜ್ಞರ ವರದಿ‌

Update: 2021-10-28 16:45 GMT
ಸಾಂದರ್ಭಿಕ ಚಿತ್ರ:PTI

ನ್ಯೂಯಾರ್ಕ್, ಅ.28: ತಾಪಮಾನ 1.5 ಸೆಲ್ಸಿಯಸ್ ಮಿತಿಯೊಳಗೆ ಇರಬೇಕಾದರೆ 2030ರ ಒಳಗೆ ವಿಶ್ವದಾದ್ಯಂತ ಸುಮಾರು 3000 ಕಲ್ಲಿದ್ದಲು ಸ್ಥಾವರಗಳನ್ನು ಮುಚ್ಚಬೇಕು ಎಂದು ಹವಾಮಾನ ತಜ್ಞರ ತಂಡ ‘ಟ್ರಾನ್ಸಿಷನ್‌ ಝೀರೋ’ದ ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈಗ ವಿಶ್ವದಾದ್ಯಂತ 2,000 ಜಿಡಬ್ಲ್ಯೂ ಕಲ್ಲಿದ್ದಲು ಆಧಾರಿತ ವಿದ್ಯುತ್‌ಶಕ್ತಿ ಉತ್ಪಾದಿಸಲಾಗುತ್ತಿದೆ. ಇದನ್ನು ಅರ್ಧ ಮಟ್ಟಕ್ಕೆ ಇಳಿಸಬೇಕು. ಅಂದರೆ ಈ ದಶಕಾಂತ್ಯದೊಳಗೆ ಪ್ರತೀ ದಿನಕ್ಕೆ ಸುಮಾರು 1 ಕಲ್ಲಿದ್ದಲು ಘಟಕವನ್ನು ಮುಚ್ಚಬೇಕು ಎಂದು ವರದಿ ಹೇಳಿದೆ. ವಿಶ್ವದಲ್ಲಿರುವ ಕಲ್ಲಿದ್ದಲು ಆಧಾರಿತ ವಿದ್ಯುತ್‌ಶಕ್ತಿ ಉತ್ಪಾದಿಸುವ ಘಟಕಗಳಲ್ಲಿ ಸುಮಾರು 50%ದಷ್ಟು ಸ್ಥಾವರಗಳು ಚೀನಾದಲ್ಲಿದ್ದು , ಇದೀಗ ಹವಾಮಾನ ಬದಲಾವಣೆ ಸಮಸ್ಯೆಗೆ ಪರಿಹಾರ ರೂಪಿಸುವಲ್ಲಿ ಚೀನಾದ ಪ್ರಯತ್ನ ಹೆಚ್ಚಬೇಕಾಗಿದೆ.

ಹವಾಮಾನವನ್ನು ಸುಸ್ಥಿತಿಗೆ ತರುವ ಪ್ರಯತ್ನಗಳಲ್ಲಿ 50%ದಷ್ಟು ಪ್ರಯತ್ನ ಚೀನಾದಿಂದ ಆಗಬೇಕಿದೆ ಎಂದು ವರದಿಯ ಲೇಖಕ ಮತ್ತು ವಿಶ್ಲೇಷಣೆಕಾರ ಮ್ಯಾಟ್ ಗ್ರೇ ಹೇಳಿದ್ದಾರೆ.

ಚೀನಾದಲ್ಲಿ 2005ರಲ್ಲಿ ಒಟ್ಟು ವಿದ್ಯುತ್‌ಶಕ್ತಿ ಉತ್ಪಾದನೆಯ 72.4% ಕಲ್ಲಿದ್ದಲು ಆಧರಿತ ಸ್ಥಾವರದಿಂದ ಲಭಿಸುತ್ತಿದ್ದರೆ 2020ರಲ್ಲಿ ಈ ಪ್ರಮಾಣ 56.8%ಕ್ಕೆ ಇಳಿದಿದೆ. ಆದರೂ ಕಲ್ಲಿದ್ದಲು ಬಳಕೆಯ ಪ್ರಮಾಣದಲ್ಲಿ ಗಮನಾರ್ಹ ಇಳಿಕೆಯಾಗಿಲ್ಲ. ಚೀನಾವು ಕ್ರಮೇಣ ಕಲ್ಲಿದ್ದಲು ಬಳಕೆ ಕಡಿಮೆಗೊಳಿಸಲಿದೆ, ಆದರೆ 2025ರ ಬಳಿಕ ಎಂದು ಅಧ್ಯಕ್ಷ ಕ್ಸಿ ಜಿಂಪಿಂಗ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News