ನಾನು ಜನಾಂಗೀಯವಾದಿಯಲ್ಲ; ಕ್ಷಮೆಯಿರಲಿ

Update: 2021-10-30 14:18 GMT

ಜೊಹಾನ್ಸ್‌ಬರ್ಗ್, ಅ. 28: ವೆಸ್ಟ್‌ಇಂಡೀಸ್ ವಿರುದ್ಧದ ಟ್ವೆಂಟಿ-20 ವಿಶ್ವಕಪ್ ಸೂಪರ್ 12 ಪಂದ್ಯದಿಂದ ಹೊರಗುಳಿದಿರುವುದಕ್ಕಾಗಿ ದಕ್ಷಿಣ ಆಫ್ರಿಕ ತಂಡದ ವಿಕೆಟ್‌ಕೀಪರ್-ಬ್ಯಾಟರ್ ಕ್ವಿಂಟನ್ ಡಿ ಕಾಕ್ ಗುರುವಾರ ತಂಡದ ಕ್ಷಮೆ ಯಾಚಿಸಿದ್ದಾರೆ ಹಾಗೂ ಪಂದ್ಯಾವಳಿಯ ಇನ್ನುಳಿದ ಪಂದ್ಯಗಳಲ್ಲಿ ಬ್ಲಾಕ್ ಲೈವ್ಸ್ ಮ್ಯಾಟರ್ (ಬಿಎಲ್‌ಎಮ್)-ಕರಿಯ ವರ್ಣೀಯರ ಜೀವಗಳಿಗೂ ಬೆಲೆಯಿದೆ’ ಅಭಿಯಾನದ ಪರವಾಗಿ ತಂಡದ ಇತರ ಆಟಗಾರರ ಜೊತೆಗೆ ಮಂಡಿಯೂರುವುದಾಗಿ ಹೇಳಿದ್ದಾರೆ.

ಮಂಗಳವಾರ ದುಬೈಯಲ್ಲಿ ನಡೆದ ವೆಸ್ಟ್‌ಇಂಡೀಸ್ ವಿರುದ್ಧದ ಗುಂಪು 1ರ ಪಂದ್ಯದ ಆರಂಭದಲ್ಲಿ ದಕ್ಷಿಣ ಆಫ್ರಿಕದ ಆಟಗಾರರು ಬ್ಲಾಕ್ ಲೈವ್ಸ್ ಮ್ಯಾಟರ್ ಅಭಿಯಾನಕ್ಕೆ ಬೆಂಬಲ ಸೂಚಿಸಿ ಮಂಡಿಯೂರಬೇಕು ಎಂಬುದಾಗಿ ತಂಡದ ಆಡಳಿತವು ಸೂಚಿಸಿತ್ತು. ಬಳಿಕ, ಆ ಪಂದ್ಯದಿಂದ ಕ್ವಿಂಟನ್ ಡಿ ಕಾಕ್ ಹೊರಗುಳಿದಿದ್ದರು. ಮಂಡಿಯೂರುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಅವರು ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ಭಾವಿಸಲಾಗಿತ್ತು.

ಅದೇ ವೇಳೆ, ದಕ್ಷಿಣ ಆಫ್ರಿಕದ ಪರವಾಗಿ ಆಡುವ ಬಯಕೆಯನ್ನು 32 ವರ್ಷದ ಡಿಕಾಕ್ ಪುನರುಚ್ಚರಿಸಿದ್ದಾರೆ.

‘‘ನಾನು ಮಂಡಿಯೂರುವುದರಿಂದ ಇತರರಿಗೆ ತಿಳುವಳಿಕೆ ಬರುವುದಾದರೆ ಹಾಗೂ ಇತರರ ಬದುಕುಗಳನ್ನು ಉತ್ತಮ ಪಡಿಸುವುದಾದರೆ, ಹೀಗೆ ಮಾಡಲು ನಾನು ತುಂಬಾ ಖುಷಿಪಡುತ್ತೇನೆ’’ ಎಂದು ದಕ್ಷಿಣ ಆಫ್ರಿಕ ಕ್ರಿಕೆಟ್ ಬಿಡುಗಡೆಗೊಳಿಸಿದ ಹೇಳಿಕೆಯೊಂದರಲ್ಲಿ ಅವರು ಹೇಳಿದ್ದಾರೆ.

‘‘ನನ್ನ ತಂಡದ ಸಹ ಆಟಗಾರರು ಮತ್ತು ದೇಶದಲ್ಲಿರುವ ಅಭಿಮಾನಿಗಳಲ್ಲಿ ಕ್ಷಮೆಕೋರಲು ನಾನು ಬಯಸುತ್ತೇನೆ’’ ಎಂದು ಅವರು ಹೇಳಿದರು.

‘‘ಇಂಥ ಪರಿಸ್ಥಿತಿಯೊಂದನ್ನು ಸೃಷ್ಟಿಸಲು ನಾನು ಯಾವತ್ತೂ ಬಯಸಲಿಲ್ಲ. ಜನಾಂಗೀಯ ತಾರತಮ್ಯವನ್ನು ವಿರೋಧಿಸುವ ಮಹತ್ವ ನನಗೆ ಗೊತ್ತಿದೆ. ಆಟಗಾರರಾಗಿ ಇತರರಿಗೆ ಮಾದರಿಯಾಗಬೇಕು ಎನ್ನವ ಜವಾಬ್ದಾರಿಯೂ ನನಗಿದೆ. ವೆಸ್ಟ್‌ಇಂಡೀಸ್ ವಿರುದ್ಧ ಆಡದೆ ಇರುವ ಮೂಲಕ ಯಾರಿಗೂ ಅಗೌರವ ಸೂಚಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನನ್ನಿಂದಾಗಿರುವ ನೋವು, ಗೊಂದಲ ಮತ್ತು ಆಕ್ರೋಶಕ್ಕೆ ನಾನು ಕ್ಷಮೆಕೋರುತ್ತೇನೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News