"ನಮ್ಮ ಹಣವನ್ನು ನಮಗೆ ನೀಡಿ": ವಿದೇಶದ ಬ್ಯಾಂಕ್ ಗಳಿಗೆ ತಾಲಿಬಾನ್ ಆಗ್ರಹ

Update: 2021-10-29 16:38 GMT

ಕಾಬೂಲ್, ಅ.29: ಅಮೆರಿಕದ ಫೆಡರಲ್ ಬ್ಯಾಂಕ್ ಹಾಗೂ ಯುರೋಪ್ ನ ಸೆಂಟ್ರಲ್ ಬ್ಯಾಂಕ್ನಲ್ಲಿ ಅಫ್ಗಾನಿಸ್ತಾನ ಸರಕಾರದ ಖಾತೆಯಲ್ಲಿ ಮೀಸಲು ನಿಧಿಯಾಗಿರುವ ಕೋಟ್ಯಾಂತರ ಡಾಲರ್ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡುವಂತೆ ಅಫ್ಗಾನಿಸ್ತಾನದ ತಾಲಿಬಾನ್ ಸರಕಾರ ತೀವ್ರ ಒತ್ತಡ ಹೇರುತ್ತಿದೆ. ವಿದೇಶದ ಬ್ಯಾಂಕ್ನಲ್ಲಿರುವ ಹಣ ಅಫ್ಗಾನಿಸ್ತಾನಕ್ಕೆ ಸೇರಿದ್ದು. ನಮ್ಮ ಹಣವನ್ನು ಮರಳಿ ನೀಡಿ. ಹಣವನ್ನು ಸ್ಥಂಭನಗೊಳಿಸಿರುವುದು ಅನೈತಿಕ ಮತ್ತು ಎಲ್ಲಾ ಅಂತರಾಷ್ಟ್ರೀಯ ಕಾನೂನುಗಳಿಗೆ ಮತ್ತು ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂದು ಅಫ್ಗಾನ್ನ ವಿತ್ತ ಸಚಿವಾಲಯದ ವಕ್ತಾರ ಅಹ್ಮದ್ ವಾಲಿ ಹಕ್ಮಲ್ ಆಗ್ರಹಿಸಿದ್ದಾರೆ. 

ಅಫ್ಗಾನಿಸ್ತಾನದಲ್ಲಿ ಹಣಕಾಸಿನ ತೀವ್ರ ಮುಗ್ಗಟ್ಟು ಎದುರಾಗಿದ್ದು, ಆಹಾರದ ಕೊರತೆ ಮತ್ತು ವಲಸಿಗರ ಸಮಸ್ಯೆ ಹೆಚ್ಚುತ್ತಿದೆ. ಸರಕಾರ ಮಹಿಳೆಯರ ಶಿಕ್ಷಣ ಸಹಿತ ಮಾನವ ಹಕ್ಕುಗಳನ್ನು ಗೌರವಿಸಲು ಬದ್ಧವಾಗಿದೆ. ಈಗ ವಿಶ್ವಸಂಸ್ಥೆ ಒದಗಿಸುತ್ತಿರುವ ಮಾನವೀಯ ನೆರವು ಅಲ್ಪಪ್ರಮಾಣದ್ದಾಗಿದೆ . ಆದ್ದರಿಂದ ವಿದೇಶದ ಬ್ಯಾಂಕ್ಗಳಲ್ಲಿ ಸ್ಥಂಭನಗೊಳಿಸಲಾಗಿರುವ ಕೋಟ್ಯಾಂತರ ಡಾಲರ್ ಮೊತ್ತವನ್ನು ತಕ್ಷಣ ಬಿಡುಗಡೆಗೊಳಿಸಬೇಕು. ಎಂದು ವಕ್ತಾರರು ಒತ್ತಾಯಿಸಿದ್ದಾರೆ. 

ಆಗಸ್ಟ್ನಲ್ಲಿ ತಾಲಿಬಾನ್ ಪಡೆಗಳು ಪಾಶ್ಚಿಮಾತ್ಯ ದೇಶಗಳ ಬೆಂಬಲ ಪಡೆದಿದ್ದ ಅಫ್ಗಾನ್ ಸರಕಾರವನ್ನು ಪದಚ್ಯುತಗೊಳಿಸಿ ದೇಶದ ಮೇಲೆ ನಿಯಂತ್ರಣ ಸಾಧಿಸಿದ ಬೆನ್ನಲ್ಲೇ, ವಿದೇಶದ ಬ್ಯಾಂಕ್ಗಳಲ್ಲಿ ಅಫ್ಗಾನ್ ಸರಕಾರ ಮೀಸಲು ನಿಧಿಯಾಗಿರಿಸಿದ್ದ ಕೋಟ್ಯಾಂತರ ಡಾಲರ್ ಮೊತ್ತವನ್ನು ಸ್ಥಂಭನಗೊಳಿಸಲಾಗಿತ್ತು. ಈ ಮಧ್ಯೆ, ಜರ್ಮನಿ ಸಹಿತ ಯುರೋಪ್ ದೇಶಗಳು ತಮ್ಮ ಬ್ಯಾಂಕ್ಲ್ಲಿರುವ ಅಫ್ಗಾನ್ ದೇಶದ ಮೀಸಲು ನಿಧಿಯನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಬ್ಯಾಂಕ್ನ ಉನ್ನತ ಅಧಿಕಾರಿಯೊಬ್ಬರು ಶಿಫಾರಸು ಮಾಡಿದ್ದಾರೆ. ಅಫ್ಗಾನ್ ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿರುವುದರಿಂದ ಅಲ್ಲಿಂದ ಬೃಹತ್ ಸಂಖ್ಯೆಯಲ್ಲಿ ವಲಸಿಗರು ಯುರೋಪ್ನತ್ತ ಧಾವಿಸಬಹುದು ಎಂದವರು ಹೇಳಿದ್ದಾರೆ. 

ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹತಾಶ ಸ್ಥಿತಿಯಿದೆ. ಈ ವರ್ಷಾಂತ್ಯದವರೆಗೆ ಸಾಲುವಷ್ಟು ಹಣ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿದೆ ಎಂದು ಅಫ್ಗಾನ್ ಸೆಂಟ್ರಲ್ ಬ್ಯಾಂಕ್ನ ಆಡಳಿತ ಮಂಡಳಿ ಸದಸ್ಯ ಶಾ ಮೆಹ್ರಬಿ ಹೇಳಿದ್ದಾರೆ. ಒಂದು ವೇಳೆ ನಮ್ಮ ಹಣವನ್ನು ಮರಳಿಸದಿದ್ದರೆ ಅದರಿಂದ ಯುರೋಪ್ನ ಮೇಲೆ ಅತೀ ಹೆಚ್ಚಿನ ಪರಿಣಾಮ ಉಂಟಾಗಲಿದೆ. ಅಫ್ಗಾನಿಸ್ತಾನದಲ್ಲಿ ಆಹಾರದ ಕೊರತೆಯಾಗಲಿದ್ದು ಜನತೆ ಯುರೋಪ್ನತ್ತ ವಲಸೆ ಹೋಗಬಹುದು ಎಂದವರು ಎಚ್ಚರಿಸಿದ್ದಾರೆ. ಅಫ್ಗಾನಿಸ್ತಾನದಲ್ಲಿ ಸರಕಾರದ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸುತ್ತಿದ್ದ ಅಮೆರಿಕ ಮತ್ತು ಅಂತರಾಷ್ಟ್ರೀಯ ದೇಣಿಗೆದಾರರು ಈ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕ ಅವಧಿಯ ಬಳಿಕ ಆರ್ಥಿಕ ನೆರವು ಸ್ಥಗಿತಗೊಳಿಸಿದ್ದರಿಂದ ಅಫ್ಗಾನಿಸ್ತಾನದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನ ಸ್ಥಿತಿ ನೆಲೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News