ಅಮೆರಿಕದ ಸಿಐಎ ಅಧಿಕಾರಿಗಳ ಅಮಾನವೀಯ ಚಿತ್ರಹಿಂಸೆಯ ವಿವರ ನೀಡಿದ ಖೈದಿ‌

Update: 2021-10-29 17:36 GMT

ವಾಷಿಂಗ್ಟನ್, ಅ.29: ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಬಂಧಿಗಳ ವಿಚಾರಣೆ ಸಂದರ್ಭ ಅನುಸರಿಸುವ ಅಮಾನುಷ ವಿಧಾನಗಳು, ಬಲವಂತವಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಲು ಒತ್ತಾಯಿಸಿ ಎಸಗುವ ದೈಹಿಕ ಮತ್ತು ಲೈಂಗಿಕ ದೌರ್ಜನ್ಯಗಳ ಬಗ್ಗೆ ಇದೇ ಪ್ರಥಮ ಬಾರಿಗೆ ಅಲ್ಖೈದಾ ಸಂಘಟನೆಯ ಸದಸ್ಯನಾಗಿದ್ದ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ವಿವರಿಸಿದ್ದಾನೆ. 

ಸಿಐಎ ಅಧಿಕಾರಿಗಳು ಶಂಕಿತ ಭಯೋತ್ಪಾದಕರಿಂದ ಮಾಹಿತಿ ಮತ್ತು ತಪ್ಪೊಪ್ಪಿಗೆ ಪಡೆಯಲು ಅನುಸರಿಸುವ ಹಿಂಸಾತ್ಮ, ಕ್ರೂರ ಮತ್ತು ಅತಿಶಯ ವಿಚಾರಣೆಯ ತಂತ್ರಗಳ ಬಗ್ಗೆ 41 ವರ್ಷದ ಮಜೀದ್ ಖಾನ್ ಮಿಲಿಟರಿ ನ್ಯಾಯಾಧೀಶರೆದುರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ. 

ಅಲ್ ಖೈದಾದೊಂದಿಗೆ ಸಂಪರ್ಕದಲ್ಲಿದ್ದ ಆರೋಪದಲ್ಲಿ ಮಜೀದ್ ಖಾನ್ನನ್ನು ಸಿಐಎ ಸಾಗರೋತ್ತರ ಜೈಲಿನಲ್ಲಿ 2003ರಿಂದ 2006ರವರೆಗೆ ಬಂಧನಲ್ಲಿಡಲಾಗಿತ್ತು. ಕತ್ತಲಕೋಣೆಯಂತಿದ್ದ ಜೈಲಿನ ಕೋಣೆ, ವಿಚಾರಣೆ ನೆಪದಲ್ಲಿ ಖೈದಿಗಳ ಬಟ್ಟೆಬಿಚ್ಚಿಸಿ ಬೆತ್ತಲೆಗೊಳಿಸುವುದು, ಕೈಗಳನ್ನು ಸರಪಳಿಯಿಂದ ಕಟ್ಟಿಹಾಕಿಡುವ ಮೂಲಕ ನಿದ್ರೆ ಮಾಡದಂತೆ ಶಿಕ್ಷಿಸುವುದು, ಐಸ್ ಹಾಕಿದ ನೀರು ತುಂಬಿದ ಟಬ್ನಲ್ಲಿ ತಲೆಕೆಳಗಾಗಿಸಿ ಮುಳುಗಿಸುವುದು, ಆ ಚಳಿಯಾದ ನೀರನ್ನು ಬಾಯಿ ಮತ್ತು ಮೂಗಿಗೆ ಸುರಿಯುವುದು ಮುಂತಾದ ಅಮಾನವೀಯ ಕೃತ್ಯಗಳ ಬಗ್ಗೆ ಮಜೀದ್ ಖಾನ್ ಎಳೆಎಳೆಯಾಗಿ ಮಾಹಿತಿ ನೀಡಿದ್ದಾರೆ. 

2003ರಲ್ಲಿ ಪಾಕಿಸ್ತಾನದಲ್ಲಿ ತನ್ನನ್ನು ಬಂಧಿಸಿ ಜೈಲಿನಲ್ಲಿರಿಸಿದ ಬಳಿಕ ವಿಚಾರಣೆ ಸಂದರ್ಭ ತಾನು ಸಹಕರಿಸಿ ತಿಳಿದಿರುವ ಮಾಹಿತಿಯನ್ನೆಲ್ಲಾ ಬಹಿರಂಗಪಡಿಸಿದ್ದೆ. ಆದರೆ, ವಿಚಾರಣೆಗೆ ಸಹಕರಿಸುತ್ತಿದ್ದಂತೆಯೇ ಅವರು ನೀಡುತ್ತಿದ್ದ ದೌರ್ಜನ್ಯವೂ ಹೆಚ್ಚಾಗತೊಡಗಿತು ಎಂದಿದ್ದಾರೆ. 2012ರಲ್ಲಿ ಖಾನ್ ತಪ್ಪೊಪ್ಪಿಕೊಂಡಿದ್ದು ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿರುವ ಬಗ್ಗೆ, ಯುದ್ಧದ ನಿಯಮ ಉಲ್ಲಂಘಿಸಿ ಹತ್ಯೆ ಎಸಗಿದ್ದು, ಪಾಕಿಸ್ತಾನದ ಅಲ್ಖೈದಾ ಸಂಘಟನೆಯಿಂದ 50,000 ಡಾಲರ್ ಮೊತ್ತವನ್ನು ಅಲ್ಖೈದಾ ಸಂಘಟನೆಗೆ ತಲುಪಿಸಿರುವುದಾಗಿ(ಈ ಹಣವನ್ನು 2003ರಲ್ಲಿ ಅಮೆರಿಕದ ಮ್ಯಾರಿಯಟ್ ಹೋಟೆಲ್ನಲ್ಲಿ ಬಾಂಬ್ ದಾಳಿ ನಡೆಸಲು ಬಳಸಲಾಗಿತ್ತು) ಒಪ್ಪಿಕೊಂಡಿದ್ದಾರೆ ಎಂದು ನ್ಯಾಯಾಧೀಶರ ಮಂಡಳಿ ಹೇಳಿದೆ. 

ಖಾನ್ಗೆ ವಿಧಿಸಬಹುದಾದ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸಲು ಅಮೆರಿಕದ 8 ಸೇನಾಧಿಕಾರಿಗಳ ಸಮಿತಿ ರಚಿಸಲಾಗಿದೆ. ಖಾನ್ಗೆ 25ರಿಂದ 40 ವರ್ಷದವರೆಗೆ ಜೈಲುಶಿಕ್ಷೆ ಘೋಷಣೆಯಾಗಬಹುದು ಮತ್ತು ಈ ಶಿಕ್ಷೆ 2012ರಿಂದ ಪೂರ್ವಾನ್ವಯವಾಗಬಹುದು ಎಂದು ನ್ಯಾಯಾಧೀಶರ ಮಂಡಳಿ ಹೇಳಿದೆ. 

ಖಾನ್ಗೆ ಶಿಕ್ಷೆ ಘೋಷಿಸುವುದನ್ನು ಸುಮಾರು 10 ವರ್ಷ ವಿಳಂಬಿಸಲಾಗಿದೆ. ಭಯೋತ್ಪಾದಕ ಸಂಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ ಅವರಿಂದ ಪಡೆಯುವುದು ಈ ವಿಳಂಬಧೋರಣೆಯ ತಂತ್ರವಾಗಿದೆ ಎಂದು ಖಾನ್ ಅವರ ವಕೀಲರು ಹೇಳಿದ್ದಾರೆ. ಅ.28ರಂದು ಶಿಕ್ಷೆಯ ಪ್ರಮಾಣ ನಿರ್ಧರಿಸುವ ವಿಚಾರಣೆಯ ಸಂದರ್ಭ ನ್ಯಾಯಾಧೀಶರ ಮಂಡಳಿಯ ಎದುರು 39 ಪುಟಗಳ ಹೇಳಿಕೆಯನ್ನು ಓದಿಹೇಳಿದರು. 

ಇಸ್ಲಾಮ್ ಮೂಲಭೂತವಾದದ ಪ್ರೇರಣೆಯಿಂದ ಜನತೆಗೆ ನೋವುಂಟು ಮಾಡಿರುವುದಕ್ಕೆ ತೀವ್ರ ವಿಷಾದ ಮತ್ತು ಪಶ್ಚಾತ್ತಾಪ ವ್ಯಕ್ತಪಡಿಸಿದ ಅವರು, ಇದೇ ವೇಳೆ ಸಿಐಎ ಸಿಬಂದಿಗಳ ಅಮಾನವೀಯ ವಿಚಾರಣಾ ಕ್ರಮದ ಬಗ್ಗೆಯೂ ವಿವರಿಸಿದರು. ನನಗೆ ಚಿತ್ರಹಿಂಸೆ ನೀಡಿದವರನ್ನು ನಾನು ಕ್ಷಮಿಸಿದ್ದೇನೆ. ಕಸ್ಟಡಿಯಲ್ಲಿ ಬಂಧನದಲ್ಲಿದ್ದ ಸಂದರ್ಭ ನಾನು ಅಲ್ಖೈದಾ, ಭಯೋತ್ಪಾದನೆ, ಹಿಂಸಾಚಾರ, ದ್ವೇಷತ್ವ ಮುಂತಾದವುಗಳನ್ನು ತ್ಯಜಿಸಿದ್ದೇನೆ. ನ್ಯಾಯನಿರ್ಧಾರದ ದಿನದಂದು ಅಲ್ಲಾಹ್ ನಿಮಗೆ ಮತ್ತು ನನಗೆ ಒಂದೇ ರೀತಿಯ ತೀರ್ಪು ನೀಡಲಿದ್ದಾರೆ ಎಂದು ಆಶಿಸುತ್ತೇನೆ. ನನ್ನಿಂದ ಯಾರಿಗೆಲ್ಲಾ ಅನ್ಯಾಯವಾಗಿದೆಯೋ, ಯಾರಿಗೆಲ್ಲಾ ನೋವಾಗಿದೆಯೋ ಅವರಿಂದ ಕ್ಷಮೆ ಯಾಚಿಸುತ್ತೇನೆ’ ಎಂದು ಖಾನ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News