ಇರಾಕ್: ಅಮೆರಿಕ ರಾಯಭಾರಿ ಕಚೇರಿ ಬಳಿ ಕ್ಷಿಪಣಿ ದಾಳಿ‌

Update: 2021-10-31 15:37 GMT
photo:twitter/@TheNationalNews

ಬಗ್ದಾದ್, ಅ.31: ಇರಾಕ್‌ನ ರಾಜಧಾನಿ ಬಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯ ಬಳಿ ರವಿವಾರ 3 ಕ್ಷಿಪಣಿಗಳು ಅಪ್ಪಳಿಸಿದ್ದು ಯಾವುದೇ ನಷ್ಟ ಅಥವಾ ಪ್ರಾಣಹಾನಿ ಸಂಭವಿಸಿಲ್ಲ ಎಂದು ಇರಾಕ್ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

ಮನ್ಸೂರ್ ಜಿಲ್ಲೆಯಲ್ಲಿ ಅತ್ಯಂತ ಬಿಗಿ ಭದ್ರತೆಯ ‘ಹಸಿರು ವಲಯ’ದಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯ ಬಳಿ ಈ ಕ್ಷಿಪಣಿಗಳು ಅಪ್ಪಳಿಸಿವೆ. ಒಂದು ಕ್ಷಿಪಣಿ ರೆಡ್‌ಕ್ರೆಸೆಂಟ್ ಆಸ್ಪತ್ರೆಯ ಬಳಿ, ಮತ್ತೊಂದು ಬ್ಯಾಂಕ್‌ನ ಬಳಿ ಹಾಗೂ ಮೂರನೇ ಕ್ಷಿಪಣಿ ಜಲಸಂಪನ್ಮೂಲ ನಿರ್ವಹಣೆ ಕಚೇರಿಯ ಬಳಿಯ ಪ್ರದೇಶಕ್ಕೆ ಅಪ್ಪಳಿಸಿದೆ ಎಂದು ಅಧಿಕಾರಿ ಹೇಳಿರುವುದಾಗಿ ಎಎಫ್‌ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಅಕ್ಟೋಬರ್ 10ರಂದು ನಡೆದ ಸಂಸದೀಯ ಚುನಾವಣೆಯ ಮತಗಳ ಮರುಎಣಿಕೆ ಹಸಿರು ವಲಯದ ಕಚೇರಿಯಲ್ಲಿ ನಡೆಯುತ್ತಿರುವ ಸಂದರ್ಭದಲ್ಲೇ ಈ ಕ್ಷಿಪಣಿ ದಾಳಿ ನಡೆದಿದ್ದು, ಯಾವುದೇ ಸಂಘಟನೆ ದಾಳಿಯ ಹೊಣೆಯನ್ನು ವಹಿಸಿಕೊಂಡಿಲ್ಲ . ಮತದಾನದ ಬಳಿಕ ನಡೆದ ಪ್ರಾರಂಭಿಕ ಫಲಿತಾಂಶದಲ್ಲಿ ಇರಾನ್ ಪರವಾಗಿರುವ ಹಶೆದ್ ಅಲ್ ಶಾಬಿ ಸಂಘಟನೆಯ ರಾಜಕೀಯ ವೇದಿಕೆ ಕಾಂಕ್ವೆಸ್ಟ್ ಅಲಯನ್ಸ್ ಹಿನ್ನಡೆ ಅನುಭವಿಸಿರುವುದಾಗಿ ಘೋಷಿಸಲಾಗಿತ್ತು. ಇದನ್ನು ತೀವ್ರವಾಗಿ ವಿರೋಧಿಸಿದ್ದ ಸಂಘಟನೆಯ ಮುಖಂಡರು, ನೂರಾರು ಬೆಂಬಲಿಗರೊಂದಿಗೆ ಮತ ಎಣಿಕೆ ನಡೆಯುವ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದರು. ಬಳಿಕ ಮತಗಳ ಮರುಎಣಿಕೆಗೆ ನಿರ್ಧರಿಸಲಾಗಿತ್ತು.

ಇರಾಕ್‌ನಲ್ಲಿ ಅಮೆರಿಕದ ಸೇನೆಯ ಉಪಸ್ಥಿತಿಯನ್ನು ಹಶದ್ ಅಲ್‌ಶಾಬಿ ತೀವ್ರವಾಗಿ ವಿರೋಧಿಸುತ್ತಿದೆ. ಇರಾಕ್‌ನಲ್ಲಿ ಈಗಲೂ ಸುಮಾರು 2,500 ಅಮೆರಿಕನ್ ಯೋಧರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News