×
Ad

ಕೊರೋನ ಸೋಂಕು: 5 ಮಿಲಿಯನ್‌ ತಲುಪಿದ ವಿಶ್ವದಲ್ಲಿನ ಮೃತರ ಸಂಖ್ಯೆ

Update: 2021-11-01 22:48 IST
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್, ನ.1: ಕೊರೋನ ಸೋಂಕಿನಿಂದಾಗಿ ವಿಶ್ವದಾದ್ಯಂತ ಮೃತಪಟ್ಟವರ ಪ್ರಮಾಣ ಸೋಮವಾರ 5 ಮಿಲಿಯನ್ ಗಡಿ ತಲುಪಿದೆ ಎಂದು ವರದಿಯಾಗಿದೆ

ಸೋಂಕಿನಿಂದಾದ ಮರಣದ ಪ್ರಮಾಣದಲ್ಲಿ 50%ದಷ್ಟು ವಿಶ್ವದ ಜನಸಂಖ್ಯೆಯಲ್ಲಿ 8ನೇ 1 ಅಂಶದಷ್ಟು ಜನರಿರುವ ಅಮೆರಿಕ, ಯುರೋಪಿಯನ್ ಯೂನಿಯನ್, ಬ್ರಿಟನ್ ಮತ್ತು ಬ್ರೆಝಿಲ್‌ಗಳಲ್ಲಿ ದಾಖಲಾಗಿದೆ. ಅಮೆರಿಕದಲ್ಲಿ 7,40,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ. ವಿಶ್ವದಾದ್ಯಂತ ಸೋಂಕಿನಿಂದ ಮರಣ ಹೊಂದಿದವರ ಪ್ರಮಾಣ ಲಾಸ್ ಏಂಜಲೀಸ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ನಗರಗಳ ಒಟ್ಟು ಜನಸಂಖ್ಯೆಗೆ ಸಮವಾಗಿದೆ.

1950ರಿಂದ ದೇಶಗಳ ನಡುವಿನ ಯುದ್ಧದಲ್ಲಿ ಮರಣಹೊಂದಿದವರ ಸಂಖ್ಯೆಗಿಂತಲೂ ಇದು ಅಧಿಕವಾಗಿದೆ. ವಿಶ್ವದಲ್ಲಿ ಮರಣಕ್ಕೆ ಕಾರಣವಾಗುವ 3ನೇ ಪ್ರಮುಖ ಕಾರಣವಾಗಿ ಕೊರೋನ ಸೋಂಕು ಗುರುತಿಸಿಕೊಂಡಿದೆ. ಹೃದಯ ರೋಗ ಮತ್ತು ಹೃದಯಾಘಾತದ ಮೊದಲ 2 ಕಾರಣಗಳಾಗಿವೆ ಎಂದು ಓಸ್ಲೋದ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಅಂದಾಜು ಮಾಡಿದೆ.

ಭಾರತದಂತಹ ಬಡದೇಶಗಳಲ್ಲಿ ಕೊರೋನ ಸೋಂಕು ಪರೀಕ್ಷೆಯ ಸೀಮಿತತೆ ಹಾಗೂ ವೈದ್ಯಕೀಯ ನೆರವು ಲಭಿಸದೆ ಮನೆಯಲ್ಲಿ ಮೃತಪಡುವ ಜನರ ಬಗ್ಗೆ ದಾಖಲೆ ಲಭ್ಯವಾಗದ ಕಾರಣ ಜಾಗತಿಕ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಬಹುದು. ಈ ಸಾಂಕ್ರಾಮಿಕವು ಅಧಿಕ ಆದಾಯದ ದೇಶಗಳಲ್ಲಿ ತೀವ್ರವಾಗಿ ಕಾಣಿಸಿಕೊಂಡಿರುವುದು ಕೊರೋನ ಸೋಂಕಿನ ವಿಪರ್ಯಾಸವಾಗಿದೆ ಎಂದು ಕೊಲಂಬಿಯಾ ವಿವಿಯ ಜಾಗತಿಕ ಆರೋಗ್ಯಕೇಂದ್ರದ ನಿರ್ದೇಶಕಿ ಡಾ. ವಫಾ ಎಲ್‌ಸದರ್ ಹೇಳಿದ್ದಾರೆ.

ಶ್ರೀಮಂತ ದೇಶಗಳಲ್ಲಿ ಜೀವಿತಾವಧಿ ಹೆಚ್ಚಿರುವ ಕಾರಣ ಅಲ್ಲಿ ವೃದ್ಧರ, ಕ್ಯಾನ್ಸರ್‌ನಿಂದ ಬದುಕುಳಿದವರ, ನರ್ಸಿಂಗ್ ಹೋಂಗಳಲ್ಲಿ ನೆಲೆಸಿರುವವರ ಸಂಖ್ಯೆ ಹೆಚ್ಚಿರುತ್ತದೆ. ಇವರು ಸೋಂಕಿಗೆ ಸುಲಭದಲ್ಲಿ ತುತ್ತಾಗುವ ಸಾಧ್ಯತೆಯಿದೆ. ಆದರೆ ಬಡದೇಶಗಳಲ್ಲಿ ಮಕ್ಕಳು, ಯುವಜನತೆ ಹಾಗೂ ಎಳೆಯ ವಯಸ್ಕರ ಸಂಖ್ಯೆ ಹೆಚ್ಚಿರುವುದರಿಂದ ಇವರು ಕೊರೋನ ಸೋಂಕಿನಿಂದ ತೀವ್ರ ಅಸ್ವಸ್ಥರಾಗುವ ಸಾಧ್ಯತೆ ಕಡಿಮೆ ಎಂದವರು ಹೇಳಿದ್ದಾರೆ.

ಇದು ನಮ್ಮ ಜೀವಿತಾವಧಿಯಲ್ಲಿ ನಿರ್ಣಾಯಕ ಕ್ಷಣವಾಗಿದೆ. ನಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ಇನ್ನೂ 5 ಮಿಲಿಯನ್ ಜನತೆಯನ್ನು ಕಳೆದುಕೊಳ್ಳದಂತೆ ನಾವೇನು ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆಸುವ ಸಮಯವಾಗಿದೆ ಎಂದು ಅಮೆರಿಕದ ಯೇಲ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಪ್ರೊಫೆಸರ್ ಡಾ. ಆಲ್ಬರ್ಟ್ ಕೊ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News