ಸಿಬಿಐ ದುರ್ಬಳಕೆ ವಿವಾದ

Update: 2021-11-02 05:23 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ಒಕ್ಕೂಟ ಸರಕಾರದ ಅಧಿಕಾರ ಸೂತ್ರ ಹಿಡಿದ ನಂತರ ರಾಜಕೀಯ ಎದುರಾಳಿಗಳನ್ನು, ಪ್ರತಿ ಪಕ್ಷಗಳನ್ನು ಹತ್ತಿಕ್ಕಲು, ಬಾಯಿ ಮುಚ್ಚಿಸಲು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯಗಳನ್ನು ಹಾಗೂ ರಾಷ್ಟ್ರೀಯ ತನಿಖಾ ದಳಗಳನ್ನು ಮನಬಂದಂತೆ ಬಳಸಿಕೊಳ್ಳುತ್ತಾ ಬಂದಿದೆ. ಹಿಂದಿನ ಸರಕಾರಗಳು ದುರುಪಯೋಗ ಮಾಡಿಕೊಂಡಿಲ್ಲವೆಂದಲ್ಲ, ಆದರೆ ಈಗಿನ ಸರಕಾರ ಇವುಗಳನ್ನು ಬಳಸಿಕೊಳ್ಳುತ್ತಿರುವುದಕ್ಕೆ ಯಾವುದೇ ಲಂಗು ಲಗಾಮಿಲ್ಲದಂತಾಗಿದೆ. ಯಾವುದೇ ರಾಜ್ಯದಲ್ಲಿ ಪ್ರತಿಪಕ್ಷಗಳು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಅಲ್ಲಿನ ಸರಕಾರಗಳನ್ನು ಪತನಗೊಳಿಸಲು ಚುನಾಯಿತ ಪ್ರತಿನಿಧಿಗಳ ಮೇಲೆ ಸಿಬಿಐ ದಾಳಿಯ ಪರೋಕ್ಷ ಬೆದರಿಕೆ ಹಾಕಲಾಗುತ್ತದೆ. ಅಂತಲೇ ಕೆಲ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಸರಕಾರಗಳು ತಮ್ಮ ರಾಜ್ಯದಲ್ಲಿ ಸಿಬಿಐ ತನಿಖೆಗೆ ಈ ಹಿಂದೆ ನೀಡಲಾಗಿದ್ದ ಮುಕ್ತ ಅನುಮತಿಯನ್ನು ರದ್ದು ಗೊಳಿಸಿವೆ. ರಾಜ್ಯ ಸರಕಾರಗಳ ಈ ತೀರ್ಮಾನವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಪಶ್ಚಿಮ ಬಂಗಾಳ, ಕೇರಳ, ಮಹಾರಾಷ್ಟ್ರ ಸೇರಿದಂತೆ ಎಂಟು ರಾಜ್ಯ ಸರಕಾರಗಳು ಸಿಬಿಐಗೆ ಈ ಹಿಂದೆ ತನಿಖೆಗೆ ನೀಡಲಾಗಿದ್ದ ಮುಕ್ತ ಪರವಾನಿಗೆಯನ್ನು ರದ್ದು ಗೊಳಿಸಿರುವುದು ಸಿಬಿಐ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ತನಿಖಾ ಕಾರ್ಯಕ್ಕೆ ಹಿನ್ನಡೆಯಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯದ ಮುಂದೆ ಹೋದ ಸಿಬಿಐಗೆ ಒಕ್ಕೂಟ ಸರಕಾರ ಬೆಂಬಲವಾಗಿ ನಿಂತಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಸಿಬಿಐ ಮನ ಬಂದಂತೆ ರಾಜ್ಯಗಳಲ್ಲಿ ನೇರವಾಗಿ ತನಿಖಾ ಕಾರ್ಯ ಕೈಗೊಳ್ಳುವುದು ಸರಿಯಲ್ಲ ಎಂಬ ರಾಜ್ಯಗಳ ಆಕ್ಷೇಪವನ್ನು ತಳ್ಳಿ ಹಾಕಲು ಆಗುವುದಿಲ್ಲ. ಕಾನೂನು ಶಿಸ್ತು ಪಾಲನೆಯ ಪೊಲೀಸ್ ವ್ಯವಸ್ಥೆ ಸಂವಿಧಾನದ ಪ್ರಕಾರ ರಾಜ್ಯಗಳ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ರಾಜ್ಯಗಳ ಪಟ್ಟಿಗೆ ಸೇರಿದ ವಿಷಯದಲ್ಲಿ ಸಿಬಿಐ ಹೀಗೆ ನೇರವಾಗಿ ಹಸ್ತಕ್ಷೇಪ ಮಾಡುವುದು ಸಮರ್ಥನೀಯವಲ್ಲ. ಯಾವುದೇ ರಾಜ್ಯ ಸರಕಾರ ನಿರ್ದಿಷ್ಟ ಪ್ರಕರಣದ ತನಿಖೆಗೆ ತಾನಾಗಿ ಮನವಿ ಮಾಡಿದರೆ ಮಾತ್ರ ಸಿಬಿಐ ತನಿಖೆ ನಡೆಸಬಹುದಾಗಿದೆ. ಆದರೆ ಇತ್ತೀಚೆಗೆ ಪ್ರತಿಪಕ್ಷಗಳ ರಾಜಕಾರಣಿಗಳಿಗೆ ತೊಂದರೆ ಕೊಡಲು ಸಿಬಿಐ ದುರ್ಬಳಕೆಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಬಂಧಿಸಿ ಕಿರುಕುಳ ನೀಡಿರುವುದು ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಸಿಬಿಐ ನಡೆ ಪ್ರಶ್ನಾರ್ಹವಾಗಿದೆ ಎಂದರೆ ತಪ್ಪಿಲ್ಲ.

ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಮೋದಿ ಸರಕಾರ ಪ್ರತಿಪಕ್ಷಗಳನ್ನು ಹಣಿಯಲು ಅಸ್ತ್ರದಂತೆ ಬಳಸಿಕೊಳ್ಳುತ್ತಿದೆ. ರಾಜಕೀಯ ವಿರೋಧಿಗಳು, ಸರಕಾರದ ನೀತಿ, ಧೋರಣೆಗಳನ್ನು ವಿರೋಧಿಸುವವರನ್ನು, ಟೀಕಿಸುವವರನ್ನು ಗುರಿಯಾಗಿರಿಸಿಕೊಂಡು ಈ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ದಾಳಿಗಳು ನಡೆಯುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ರಾಷ್ಟ್ರೀಯ ತನಿಖಾ ಆಯೋಗವನ್ನು ಕೂಡ ಇದೇ ರೀತಿ ಬಳಸಿಕೊಳ್ಳಲಾಗುತ್ತಿದೆ. ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿ ವರವರರಾವ್ ಮತ್ತು ಹೆಸರಾಂತ ಚಿಂತಕ, ಲೇಖಕ ಆನಂದ್ ತೇಲ್ತುಂಬ್ಡೆ, ಖ್ಯಾತ ನ್ಯಾಯವಾದಿ ಸುಧಾ ಭಾರದ್ವಾಜ್, ಗೌತಮ್ ನವ್ಲಾಖ ಮುಂತಾದ ಮಾನವ ಹಕ್ಕುಗಳ ಪರ ಹೋರಾಟಗಾರರನ್ನು ಬಂಧಿಸಿ ಎರಡು ವರ್ಷಗಳು ಗತಿಸಿದವು. ಆರೋಗ್ಯ ವಿಷಮಿಸಿದರೂ ಇವರಿಗೆ ಯಾವುದೇ ಸೌಕರ್ಯವನ್ನು ಕೂಡ ನೀಡುತ್ತಿಲ್ಲ. ಸೂಕ್ತವಾದ ಆರೋಪಪಟ್ಟಿ ಸಲ್ಲಿಸದೆ ಈ ರೀತಿ ಜೈಲಿಗೆ ಹಾಕಿ ತೊಂದರೆ ಕೊಡುವುದು ಅಮಾನವೀಯ ನಡೆ ಅಂದರೆ ತಪ್ಪಿಲ್ಲ.

ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಮತ್ತು ಅವರ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡ ವ್ಯಕ್ತಿಯೊಬ್ಬರ ಮನೆಯ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿ ಹಾಗೂ ತಮಿಳುನಾಡಿನಲ್ಲಿ ಡಿಎಂಕೆ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಹಾಗೂ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ದಾಳಿ ಮಾಡಲು ಮೋದಿ ಸರಕಾರ ಸಿಬಿಐ, ಆದಾಯ ತೆರಿಗೆ ಇಲಾಖೆಯಂತಹ ಸಂಸ್ಥೆಗಳನ್ನು ಬಳಸಿಕೊಂಡಿರುವುದು ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಪ್ರತಿಪಕ್ಷ ನಾಯಕರು ಮಾತ್ರವಲ್ಲ, ಸರಕಾರದ ನೀತಿ ಧೋರಣೆಗಳನ್ನು ಟೀಕಿಸುವ ಪತ್ರಿಕೆಗಳು ಸೇರಿ ಇತರ ಮಾಧ್ಯಮ ಕಚೇರಿಗಳ ಮೇಲೂ ಈ ದಾಳಿ ನಡೆದಿದೆ.ಯಾರೇ ಸರಕಾರವನ್ನು ಟೀಕಿಸಲಿ ಅವರು ಈ ದಾಳಿಗೆ ಗುರಿಯಾಗಬೇಕಾಗುತ್ತದೆ ಎಂಬಂತಹ ವಾತಾವರಣ ನಿರ್ಮಾಣವಾಗಿದೆ. ದಾಳಿ ಮಾಡುವ ಈ ಸಂಸ್ಥೆಗಳು ತಮ್ಮ ದಾಳಿಗೆ ತಾವೇ ಪ್ರಚಾರ ಕೊಟ್ಟುಕೊಂಡು ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುತ್ತ ಬಂದಿವೆ.ಕೇಂದ್ರ ಹಣಕಾಸು ಸಚಿವಾಲಯ ಕೂಡ ಈ ದಾಳಿಗೆ ಶಹಬಾಸ್‌ಗಿರಿ ನೀಡುತ್ತದೆ.ಇದು ನಿಜಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವ ಸಂಗತಿಯಲ್ಲ.

 ಪ್ರತಿಪಕ್ಷಗಳು ಮಾತ್ರವಲ್ಲ ಬಿಜೆಪಿಯಲ್ಲಿರುವ ನಾಯಕರ ವಿರುದ್ಧ ಕೂಡ ಈ ತನಿಖಾ ಸಂಸ್ಥೆಗಳನ್ನು ಬೇಕಾಬಿಟ್ಟಿ ಬಳಸಿಕೊಂಡ ಉದಾಹರಣೆಗಳಿವೆ. ರಾಜಕೀಯ ದ್ವೇಷ ಸಾಧನೆಗೆ, ಭಿನ್ನಮತೀಯರ ಬಾಯಿ ಮುಚ್ಚಿಸಲು, ದ್ವೇಷ ಸಾಧಿಸಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ. ಅಂತಲೇ ಸಿಬಿಐ ತನಿಖೆಗೆ ನೀಡಿದ್ದ ಮುಕ್ತ ಅನುಮತಿಯನ್ನು ಕೆಲ ರಾಜ್ಯ ಸರಕಾರಗಳು ರದ್ದು ಪಡಿಸಿರುವುದು ಸಮರ್ಥನೀಯವಾಗಿದೆ.

ಆದಾಯ ತೆರಿಗೆ ಇಲಾಖೆಯಾಗಲಿ ಅಥವಾ ಕೇಂದ್ರೀಯ ತನಿಖಾ ಸಂಸ್ಥೆಯಾಗಲಿ ಇವೆರಡೂ ಒಕ್ಕೂಟ ಸರಕಾರದ ಅಂಗಗಳು. ಜನರ ತೆರಿಗೆ ಹಣದಲ್ಲಿ ನಡೆಯುವ ಸಂಸ್ಥೆಗಳು ಎಂಬುದನ್ನು ಎಲ್ಲರೂ ಒಪ್ಪುವ ಸಂಗತಿ. ರಾಜಕೀಯ ವಿರೋಧಿಗಳ ಮೇಲೆ ಮತ್ತು ಪಕ್ಷದೊಳಗಿನ ಭಿನ್ನಮತೀಯರ ಮೇಲೆ ಇವು ನಡೆಸುವ ದಾಳಿಗಳು ಸರಕಾರದ ಉನ್ನತ ಸ್ಥಾನದಲ್ಲಿ ಇರುವವರ ಕಣ್ಸನ್ನೆಯಂತೆ ನಡೆದಿರುತ್ತವೆ ಎಂಬುದು ಚಿಕ್ಕ ಮಗುವಿಗೂ ಗೊತ್ತಾಗುತ್ತದೆ. ಕೇಂದ್ರ ಸರಕಾರದ ನಿಯಂತ್ರಣದಲ್ಲಿ ಇದ್ದರೂ ಇವು ಪಕ್ಷಪಾತ ರಹಿತವಾಗಿ, ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳ ನಡುವಿನ ಸಂಬಂಧ ಸೌಹಾರ್ದಯುತವಾಗಿರಬೇಕು. ರಾಜ್ಯ ಸರಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿದರೆ ಯಾವುದೇ ಸಮಸ್ಯೆ ಉದ್ಭವವಾಗುವುದಿಲ್ಲ. ಪರಸ್ಪರ ಕೂಡಿ ಕಾರ್ಯನಿರ್ವಹಿಸುವ ಬದಲಾಗಿ ರಾಜ್ಯವೊಂದರಲ್ಲಿ ಪ್ರತಿಪಕ್ಷ ಅಧಿಕಾರಕ್ಕೆ ಬಂದರೆ ಅದನ್ನು ಬುಡಮೇಲು ಮಾಡಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು, ಜಾರಿ ನಿರ್ದೇಶನಾಲಯಗಳನ್ನು ದುರ್ಬಳಕೆ ಮಾಡುತ್ತ ಹೋದರೆ ಕೊನೆಗೆ ಅದು ಒಕ್ಕೂಟ ವ್ಯವಸ್ಥೆಗೆ ಹಾನಿಯನ್ನುಂಟು ಮಾಡುತ್ತದೆ ಎಂಬುದನ್ನು ಮರೆಯಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News