ಕೊರೋನ ಸೋಂಕಿನ ವಿರುದ್ಧ ಕಠಿಣ ನಿರ್ಬಂಧಕ್ಕೆ ಚೀನಾ ಸಜ್ಜು: ದೈನಂದಿನ ಅಗತ್ಯ ವಸ್ತುಗಳನ್ನು ಶೇಖರಿಸಿಡಲು ಜನತೆಗೆ ಸೂಚನೆ

Update: 2021-11-02 17:19 GMT

ಬೀಜಿಂಗ್, ನ.2: ಚೀನಾದಲ್ಲಿ ಮತ್ತೆ ಉಲ್ಬಣಗೊಂಡಿರುವ ಕೊರೋನ ಸೋಂಕಿನ ನಿಯಂತ್ರಣಕ್ಕೆ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲು ನಿರ್ಧರಿಸಲಾಗಿದ್ದು ದೈನಂದಿನ ಅಗತ್ಯದ ವಸ್ತುಗಳನ್ನು ಶೇಖರಿಸಿಟ್ಟುಕೊಳ್ಳುವಂತೆ ಜನತೆಗೆ ಸೂಚಿಸಲಾಗಿದೆ. ಕುಟುಂಬಗಳು ದೈನಂದಿನ ಜೀವನ ನಿರ್ವಹಣೆಗೆ ಮತ್ತು ತುರ್ತು ಪರಿಸ್ಥಿತಿಗೆ ಅಗತ್ಯವಿರುವ ದಿನನಿತ್ಯದ ಅಗತ್ಯ ವಸ್ತುಗಳನ್ನು ದಾಸ್ತಾನು ಇರಿಸಿಕೊಳ್ಳಬೇಕು.

ಕೃಷಿ ಉತ್ಪಾದನೆಗೆ ನೆರವಿನ ಕ್ರಮ, ಸುಗಮ ಪೂರೈಕೆ ಸರಪಣಿ, ಪ್ರಾದೇಶಿಕ ಮಟ್ಟದಲ್ಲಿ ಸಾಕಷ್ಟು ಆಹಾರ ದಾಸ್ತಾನು, ಆಹಾರ ವಸ್ತುಗಳ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕುೞಎಂಬ ಸೂಚನೆಯನ್ನು ಚೀನಾದ ವಾಣಿಜ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಕೊರೋನ ನಿಯಂತ್ರಣದ ಕ್ರಮದಿಂದ ಆಹಾರದ ಕೊರತೆಯಾಗುವ ಸಂಭವವಿದೆಯೇ ಅಥವಾ ಕೆಲವು ಪ್ರದೇಶಗಳಲ್ಲಿ ಲಾಕ್‌ಡೌನ್ ಜಾರಿಯಾಗಲಿದೆಯೇ ಎಂಬ ಬಗ್ಗೆ ಈ ಇಲಾಖೆಯ ಸೂಚನೆಯಲ್ಲಿ ಯಾವುದೇ ಪ್ರಸ್ತಾವನೆಯಿಲ್ಲ. ಚೀನಾದಲ್ಲಿ ಈ ವರ್ಷದ ಆರಂಭದಲ್ಲಿ ದೈನಂದಿನ ಸೋಂಕಿನ ಪ್ರಕರಣ ಒಂದೇ ಅಂಕಿಯಲ್ಲಿತ್ತು.

ಆದರೆ ಆಗಸ್ಟ್‌ನಲ್ಲಿ ಏಕಾಏಕಿ 143ಕ್ಕೇರಿತು. ಆ ಬಳಿಕ ಡೆಲ್ಟಾ ರೂಪಾಂತರ ಸೋಂಕು ಪ್ರಕರಣ ಕ್ರಮೇಣ ಏರಿಕೆಯಾಗುತ್ತಿದೆ. ಫೆಬ್ರವರಿ 4ರಂದು ಚೀನಾದಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ಗೂ ಮುನ್ನ ಕೊರೋನ ಸೋಂಕಿನ ಮತ್ತೊಂದು ಅಲೆಯನ್ನು ನಿಯಂತ್ರಿಸಲು ದೃಢನಿರ್ಧಾರ ಮಾಡಿರುವ ಅಧಿಕಾರಿಗಳು ಗಡಿಮುಚ್ಚುವಿಕೆ, ಉದ್ದೇಶಿತ ಲಾಕ್‌ಡೌನ್, ದೀರ್ಘಾವಧಿಯ ಕ್ವಾರಂಟೈನ್ ಪ್ರಕ್ರಿಯೆ ಮುಂತಾದ ಕಠಿಣ ಕ್ರಮಗಳ ಮರು ಜಾರಿಗೆ ಚಿಂತನೆ ನಡೆಸಿದ್ದಾರೆ.

ಕೊರೋನ ಸಮಸ್ಯೆಯ ಜತೆಗೆ ಚೀನಾದಲ್ಲಿ ನೆರೆ ಮತ್ತು ಪ್ರವಾಹದ ಸಮಸ್ಯೆಯೂ ಕಳೆದ 2 ವರ್ಷದಿಂದ ತೀವ್ರಗೊಂಡಿದೆ. ಹವಾಮಾನ ಬದಲಾವಣೆಯಿಂದ ತಾಪಮಾನ ಹೆಚ್ಚಿರುವುದರಿಂದ ಅಕಾಲಿಕ ಮಳೆ ಮತ್ತು ಪ್ರವಾಹದ ಸ್ಥಿತಿ ಮರುಕಳಿಸುವ ಭೀತಿಯೂ ಇದೆ. ಈ ಮಧ್ಯೆ, ದೇಶದಲ್ಲಿ ತರಕಾರಿ ಸಹಿತ ಆಹಾರವಸ್ತುಗಳ ಬೆಲೆ ಗಗನಕ್ಕೇರಿದೆ. ಅಕ್ಟೋಬರ್‌ನಲ್ಲಿ 28 ವಿವಿಧ ತರಕಾರಿಗಳ ಸಗಟು ದರ ಹಿಂದಿನ ತಿಂಗಳಿಗೆ ಹೋಲಿಸಿದರೆ 16% ಹೆಚ್ಚಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News