×
Ad

ಹಿಂದಿನ ಸರಕಾರಗಳು ಖಬರ್‌ಸ್ಥಾನಗಳಿಗೆ ಜನರ ಹಣ ಬಳಸುತ್ತಿದ್ದವು, ನಾವು ದೇವಸ್ಥಾನಗಳಿಗೆ ಬಳಸುತ್ತಿದ್ದೇವೆ: ಆದಿತ್ಯನಾಥ್

Update: 2021-11-04 12:23 IST

ಅಯೋಧ್ಯೆ: ಹಿಂದಿನ ಸರಕಾರಗಳು ಸಾರ್ವಜನಿಕರ ಹಣವನ್ನು ಖಬರ್‌ಸ್ಥಾನದ ಜಮೀನಿಗಾಗಿ ಬಳಸುತ್ತಿದ್ದರೆ, ಬಿಜೆಪಿ ಸರಕಾರವು ಹಣವನ್ನು ದೇವಳಗಳ ಅಭಿವೃದ್ಧಿಗೆ  ಬಳಸುತ್ತಿದೆ ಎಂದು ಹೇಳುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಿಂದಿನ ರಾಜ್ಯ ಸರಕಾರಗಳ ವಿರುದ್ಧ ಹರಿಹಾಯ್ದಿದ್ದಾರೆ.

ದೀಪೋತ್ಸವ ಆಚರಣೆ ಪ್ರಯುಕ್ತ ಉತ್ತರ ಪ್ರದೇಶ ಸರಕಾರವು ರಾಮ ಕಥಾ ಪಾರ್ಕಿನಲ್ಲಿ ಆಯೋಜಿಸಿದ್ದ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, "ಚಿಂತನೆಯಲ್ಲಿ ದೊಡ್ಡ ವ್ಯತ್ಯಾಸವಿದೆ. ಖಬರಿಸ್ಥಾನದ ಮೇಲೆ ಪ್ರೀತಿಯಿರುವವರು ಅಲ್ಲಿ ಸಾರ್ವಜನಿಕರ ಹಣವನ್ನು ಅದಕ್ಕಾಗಿ ಬಳಸಿದರೆ, ಧರ್ಮದ ಮತ್ತು ಸಂಸ್ಕೃತಿಯ ಮೇಲೆ ಪ್ರೀತಿಯಿರುವವರು ಅದರ ಮೇಲೆ ಹಣ ವಿನಿಯೋಗಿಸುತ್ತಾರೆ" ಎಂದರು.

"ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪ್ರಗತಿಯಲ್ಲಿದೆ ಹಾಗೂ ಕೇಂದ್ರ ಸರಕಾರವು ಉತ್ತರ ಪ್ರದೇಶ ಸಹಿತ ಬೇರೆ ಕಡೆಗಳಲ್ಲಿ 500 ದೇವಸ್ಥಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇವುಗಳ ಪೈಕಿ 300ಕ್ಕೂ ಅಧಿಕ ಕಡೆ ಕಾಮಗಾರಿಗಳು ಪೂರ್ಣಗೊಂಡಿದ್ದರೆ ಉಳಿದೆಡೆ ಇನ್ನೆರಡು ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ" ಎಂದು ಅವರು ಹೇಳಿದರು.

"ಮೂವತ್ತು ವರ್ಷಗಳ ಹಿಂದೆ ಜೈ ಶ್ರೀ ರಾಮ್ ಎಂದು ಹೇಳುವುದು ಅಪರಾಧವಾಗಿತ್ತು" ಎಂದು ಹೇಳಿದ ಯೋಗಿ "ರಾಮ ಎಲ್ಲರನ್ನೂ ಒಗ್ಗೂಡಿಸಿದ್ದಾನೆ, ಇದು ರಾಮನ ಶಕ್ತಿ. ಅಯ್ಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹಾಗೂ 2023ರೊಳಗಾಗಿ ಅದು ಪೂರ್ಣಗೊಳ್ಳುವುದನ್ನು ಜಗತ್ತಿನ ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News