ಲಿವರ್ ಕ್ಯಾನ್ಸರ್ ಗೆ ಕಾಗೆ ಹಣ್ಣಿನಲ್ಲಿ ಔಷಧಿ : ಕೇರಳದ ಸಂಶೋಧನೆಗೆ ಅಮೆರಿಕ ಅಸ್ತು

Update: 2021-11-05 04:20 GMT

ತಿರುವನಂತಪುರ: ಕೇರಳದಲ್ಲಿ ಸ್ಥಳೀಯವಾಗಿ ಲಭ್ಯವಿರುವ, ಔಷಧೀಯ ಗುಣಗಳನ್ನು ಹೊಂದಿರುವ, ಹಣ್ಣು ಬಿಡುವ ಪೊದೆ ವರ್ಗಕ್ಕೆ ಸೇರಿದ ’ಮನಥಕ್ಕಲಿ’ (ಕಾಗೆಹಣ್ಣಿನ ಗಿಡ, ಕಾಕಮಚ್ಚೆ, ಕಕ್ಕೆಹಣ್ಣು) ಯನ್ನು ಲಿವರ್ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಸಂಶೋಧನೆಗೆ ಅಮೆರಿಕದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಒಪ್ಪಿಗೆ ನೀಡಿದೆ.

ಗಿಡದಿಂದ ಬೇರ್ಪಡಿಸಿದ ವಸ್ತುವೊಂದರ ಸಾಮರ್ಥ್ಯದ ಬಗ್ಗೆ ರಾಜೀವ್‌ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿಯ ವಿಜ್ಞಾನಿಗಳ ತಂಡದ ಸಂಶೋಧನೆ ಹಿನ್ನೆಲೆಯಲ್ಲಿ ಈ ಅನುಮೋದನೆ ನೀಡಲಾಗಿದೆ.

ಈ ಸಂಯುಕ್ತ ವಸ್ತುವಿಗೆ "ಅನಾಥ ಔಷಧ" ಎಂಬ ಹೆಸರು ನೀಡಿದ್ದು, ಅಪರೂಪದ ಕಾಯಿಲೆಗಳ ಹೊಸ ಚಿಕಿತ್ಸೆಗಳ ಅಭಿವೃದ್ಧಿ ಮತ್ತು ಮೌಲ್ಯಮಾಪನಕ್ಕೆ ನೆರವಾಗಲಿದೆ ಎಂದು ಎಫ್‌ಡಿಎ ಹೇಳಿದೆ. ಈ ಔಷಧಕ್ಕೆ ಅನುಮೋದನೆ ನೀಡುವ ನಿಟ್ಟಿನಲ್ಲಿ ತ್ವರಿತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದೆ.

ಆರ್‌ಜಿಸಿಬಿ ಹಿರಿಯ ವಿಜ್ಞಾನಿ ಡಾ.ರೂಬಿ ಜಾನ್ ಆಂಟೊ ಹಾಗೂ ಅವರ ವಿದ್ಯಾರ್ಥಿ ಲಕ್ಷ್ಮಿ ಆರ್. ನಾಥ್ ಅವರು ಈ ಔಷಧೀಯ ಕಣ (ಯುಟ್ರೊಸೈಡ್-ಬಿ)ವನ್ನು ಕಾಗೆಹಣ್ಣಿನ ಗಿಡದ ಎಲೆಗಳಿಂದ ಪ್ರತ್ಯೇಕಿಸಿದ್ದಾರೆ. "ಇದು ಪ್ರಸ್ತುತ ಲಿವರ್ ಕ್ಯಾನ್ಸರ್ ಚಿಕಿತ್ಸೆಗೆ ಲಭ್ಯವಿರುವ ಏಕೈಕ ಎಫ್‌ಡಿಎ ಅನುಮೋದಿತ ಔಷಧ. ನಾವು ಅಭಿವೃದ್ಧಿಪಡಿಸಿದ ಈ ಸಂಯುಕ್ತವಸ್ತು ಈಗ ಲಭ್ಯವಿರುವ ಯಾವುದೇ ಔಷಧಿಗಳಿಗಿಂತ ಹೆಚ್ಚು ಪರಿಣಾಮಕಾರಿ. ಮನುಷ್ಯರಲ್ಲಿ ಇದರ ವಿಷಕಾರಿ ಅಂಶಗಳ ಮೌಲ್ಯಮಾಪನ ಮಾಡಿದಾಗ ಈ ಸಂಯುಕ್ತವು ಊದಿಕೊಂಡ ಲಿವರ್ ಚಿಕಿತ್ಸೆಗೆ ಕೂಡಾ ಪರಿಣಾಮಕಾರಿ ಎನ್ನುವುದು ಸಾಬೀತಾಗಿದೆ" ಎಂದು ಸಂಶೋಧಕರು ಹೇಳಿದ್ದಾರೆ.

ಈಗ ಪೇಟೆಂಟ್ ಪಡೆದಿರುವ ತಂತ್ರಜ್ಞಾನವನ್ನು ಅಮೆರಿಕದ ಕ್ಯೂಬಯೋಮೆಡ್ ಫಾರ್ಮಾ ಕಂಪನಿಯಿಂದ ತರಲಾಗಿತ್ತು. ಓಕ್ಲಹೋಮ ವೈದ್ಯಕೀಯ ಸಂಶೋಧನಾ ಫೌಂಡೇಷನ್ ಮೂಲಕ ತಂತ್ರಜ್ಞಾನ ವರ್ಗಾವಣೆ ಮಾಡಲಾಗಿತ್ತು. ಈ ಸಂಶೋಧನೆಯು ಲಿವರ್ ಕ್ಯಾನ್ಸರ್ ಸೇರಿದಂತೆ ಲಿವರ್ ರೋಗಗಳ ಚಿಕಿತ್ಸೆಯಲ್ಲಿ ಕ್ರಾಂತಿಕಾರ ಎನಿಸಿದೆ ಎಂದು ಆರ್‌ಜಿಸಿಬಿ ನಿರ್ದೇಶಕ ಡಾ.ಚಂದ್ರಭಾಸ್ ನಾರಾಯಣ ಹೇಳಿದ್ದಾರೆ.

ಆಹಾರವನ್ನು ವಿಷಮುಕ್ತಗೊಳಿಸುವ ಮತ್ತು ಜೀರ್ಣಕ್ರಿಯೆಗೆ ನೆರವಾಗುವ ಪ್ರಾಥಮಿಕ ಕಾರ್ಯವನ್ನು ನಿರ್ವಹಿಸುವ ಲಿವರ್, ಆಧುನಿಕ ಸಂದರ್ಭದಲ್ಲಿ ಹೆಚ್ಚುಹೆಚ್ಚಾಗಿ ಕ್ಯಾನ್ಸರ್‌ಗೆ ತುತ್ತಾಗುತ್ತಿದೆ. ಈ ರೋಗ ವಾರ್ಷಿಕ ಒಂಬತ್ತು ಲಕ್ಷ ಮಂದಿಯಲ್ಲಿ ಕಂಡುಬರುತ್ತಿದ್ದು, ಎಂಟು ಲಕ್ಷ ಮಂದಿ ಬಲಿಯಾಗುತ್ತಿದ್ದಾರೆ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಡಾ. ರೂಬಿ ಅವರ ತಂಡ ಪ್ರಸ್ತುತ ಈ ಔಷಧದ ಕ್ರಿಯೆಯನ್ನು ಅಧ್ಯಯನ ನಡೆಸುತ್ತಿದ್ದು, ಲಿವರ್ ರೋಗಗಳು, ಆಲ್ಕೋಹಾಲ್ ಸೇವನೆ ಮಾಡದವರ ಸ್ಟೆಥೋಹೆಪಟೈಟಿಸ್ ಮತ್ತು ಆಹಾರದ ವಿಷಕಾರಿ ಅಂಶಗಳ ಕಾರಣದಿಂದ ಬರುವ ಲಿವರ್ ಕ್ಯಾನ್ಸರ್ ವಿರುದ್ಧ ಇದರ ಪರಿಣಾಮಕಾರಿತ್ವದ ಬಗ್ಗೆ ಮೌಲ್ಯಮಾಪನ ನಡೆಸುತ್ತಿದೆ. ಕಾಗೆಹಣ್ಣಿನ ಗಿಡದ ಎಲೆಗಳಿಂದ ಈ ಸಂಯುಕ್ತವನ್ನು ಬೇರ್ಪಡಿಸುವ ವಿಧಾನವನ್ನು ಕಂಡುಹಿಡಿದಿರುವ ತಿರುವನಂತಪುರದ ಸಿಎಸ್‌ಐಆರ್-ಎನ್‌ಐಎಸ್‌ಟಿಯ ಡಾ.ಎಲ್.ರವಿಶಂಕರ್ ಅವರ ಸಹಭಾಗಿತ್ವದಲ್ಲಿ ಈ ಅಧ್ಯಯನ ನಡೆಯುತ್ತಿದೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News