ಹಡಗಿನಲ್ಲಿ ಮಾದಕ ದ್ರವ್ಯ ಪತ್ತೆ ಪ್ರಕರಣ: ಸುಳ್ಳು ವ್ಯಾಖ್ಯಾನ ಎಂದ ಬಿಜೆಪಿ ನಾಯಕ ಮೋಹಿತ್ ಕುಂಭೋಜ್

Update: 2021-11-06 14:52 GMT

ಮುಂಬೈ, ನ. 6: ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಭಾಗಿಯಾಗಿರುವ ಪ್ರಯಾಣಿಕ ಹಡಗಿನಲ್ಲಿ ಮಾದಕ ದ್ರವ್ಯ ಪತ್ತೆ ಪ್ರಕರಣ ಸುಳ್ಳು ವ್ಯಾಖ್ಯಾನ ಎಂದು ಮುಂಬೈಯ ಬಿಜೆಪಿ ನಾಯಕ ಮೋಹಿತ್ ಕಂಬೋಜ್ ಆರೋಪಿಸಿದ್ದಾರೆ. ಮಹಾರಾಷ್ಟ್ರದ ಕೆಲವು ಸಚಿವರು ಶಾರುಕ್ ಖಾನ್ ಅವರಿಂದ ಹಣ ಸುಲಿಗೆ ಮಾಡಲು ಪ್ರಯತ್ನಿಸಿರಬಹುದು. ಈ ಪ್ರಕರಣದೊಂದಿಗೆ ಎನ್ಸಿಪಿ ನಂಟು ಹೊಂದಿದೆ ಎಂದು ಮೋಹಿತ್ ಕಂಬೋಜ್ ಹೇಳಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿರುವ ಎನ್ಸಿಪಿ ನಾಯಕ ನವಾಬ್ ಮಲಿಕ್, ಇದು ಸತ್ಯದ ಕುರಿತ ಗಮನವನ್ನು ಬೇರೆಡೆ ಸೆಳೆಯುವ ಹಾಗೂ ತಪ್ಪು ದಾರಿಗೆ ಎಳೆಯುವ ವಿಫಲ ಪ್ರಯತ್ನ. ನಾಳೆ ನಾನು ಸತ್ಯವನ್ನು ಬಹಿರಂಗಪಡಿಸಲಿದ್ದೇನೆ ಎಂದಿದ್ದಾರೆ. ಈ ಪ್ರಕರಣದ ಪಿತೂರಿಯ ರೂವಾರಿ ರಾಜ್ಯದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ಆಪ್ತ ಎನ್ಸಿಪಿ ನಾಯಕ ಸುನೀಲ್ ಪಾಟೀಲ್ ಎಂದು ಮೋಹಿತ್ ಕಂಬೋಜ್ ಹೇಳಿದ್ದಾರೆ. 

‘‘ಅಕ್ಟೋಬರ್ 1ರಂದು ಸುನೀಲ್ ಪಾಟೀಲ್ ಅವರು ಸ್ಯಾಮ್ ಡಿಸೋಜಾಗೆ ವ್ಯಾಟ್ಸ್ಆ್ಯಪ್ ಸಂದೇಶ ಕಳುಹಿಸಿದ್ದರು. ಈ ಸಂದೇಶದಲ್ಲಿ ಪ್ರಯಾಣಿಕ ಹಡಗಿನಲ್ಲಿ ನಡೆಯುವ ಪಾರ್ಟಿಯಲ್ಲಿ ಅಕ್ರಮ ಮಾದಕ ದ್ರವ್ಯ ಸೇವಿಸಲಿರುವ 27 ಜನರ ನೇತೃತ್ವವನ್ನು ತಾನು ವಹಿಸಿದ್ದೇನೆ ಎಂದು ತಿಳಿಸಿದ್ದರು. ಅಲ್ಲದೆ, ಈ ಸಂದರ್ಭ ಎನ್ಸಿಬಿಯ ಕೆಲವರ ಸಂಪರ್ಕ ಇರಿಸಿಕೊಳ್ಳುವಂತೆ ಪಾಟೀಲ್ ತಿಳಿಸಿದ್ದರು. ಅನಂತರ ಡಿ’ಸೋಜಾ ಎನ್ಸಿಬಿಯ ಅಧಿಕಾರಿ ವಿ.ವಿ. ಸಿಂಗ್ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದರು. ಇದಲ್ಲದೆ, ಹಡಗಿನಲ್ಲಿ ನಡೆದ ಪಾರ್ಟಿಯಲ್ಲಿ ಮಾದಕ ದ್ರವ್ಯದ ಮಾರಾಟ ಹಾಗೂ ಬಳಕೆಗೆ ಬಗ್ಗೆ ಪಾಟೀಲ್ ಮಾಹಿತಿ ನೀಡಿದ್ದರು’’ ಎಂದು ಅವರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಎನ್ಸಿಬಿ ತೆಗೆದುಕೊಳ್ಳುವ ಕ್ರಮದಲ್ಲಿ ಸಹಕರಿಸಲು ಕಿರಣ್ ಗೋಸಾವಿ ಎಂಬ ವ್ಯಕ್ತಿಯನ್ನು ಭೇಟಿಯಾಗುವಂತೆ ಪಾಟೀಲ್ ಅವರು ಡಿಸೋಜಾರಿಗೆ ಸೂಚಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News