×
Ad

ಕ್ರಿಸ್ ಗೇಲ್ ದಾಖಲೆ ಮುರಿದ ಮುಹಮ್ಮದ್ ರಿಝ್ವಾನ್

Update: 2021-11-07 21:13 IST
photo: AFP

 ಶಾರ್ಜಾ, ನ.7: ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಮುಹಮ್ಮದ್ ರಿಝ್ವಾನ್ ಕ್ಯಾಲೆಂಡರ್ ವರ್ಷದಲ್ಲಿ ಟ್ವೆಂಟಿ-20 ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸುವುದರೊಂದಿಗೆ ವೆಸ್ಟ್‌ಇಂಡೀಸ್ ದಂತಕತೆ ಕ್ರಿಸ್ ಗೇಲ್ ದಾಖಲೆಯನ್ನು ಮುರಿದರು.

ರವಿವಾರ ಸ್ಕಾಟ್ಲೆಂಡ್ ವಿರುದ್ಧದ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸೂಪರ್-12 ಪಂದ್ಯದಲ್ಲಿ ರಿಝ್ವಾನ್ ಈ ಸಾಧನೆ ಮಾಡಿದರು.

ರಿಝ್ವಾನ್ 5 ರನ್ ಗಳಿಸುತ್ತಲೇ 36 ಪಂದ್ಯಗಳಲ್ಲಿ 1,665 ರನ್ ಗಳಿಸಿದ್ದ ಗೇಲ್ ದಾಖಲೆಯನ್ನು ಮುರಿದರು. ಗೇಲ್ 2015ರಿಂದ ಈ ದಾಖಲೆಯನ್ನು ತನ್ನ ಹೆಸರಲ್ಲಿ ಉಳಿಸಿಕೊಂಡಿದ್ದರು. ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್ ಗಳಿಸಿದ ಅಗ್ರ-ಐವರು ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ(2016ರಲ್ಲಿ 1,614 ರನ್), ಬಾಬರ್ ಆಝಂ(2019ರಲ್ಲಿ 1,607 ) ಹಾಗೂ ಎಬಿಡಿವಿಲಿಯರ್ಸ್(2019ರಲ್ಲಿ 1,580 ರನ್ )ಅವರಿದ್ದಾರೆ.

ರಿಝ್ವಾನ್ ಈ ದಾಖಲೆ ಮುರಿಯಲು 41 ಪಂದ್ಯಗಳನ್ನು ತೆಗೆದುಕೊಂಡರು. ರವಿವಾರ 15 ರನ್ ಗಳಿಸಿ ಔಟಾದ ರಿಝ್ವಾನ್  ಕ್ಯಾಲೆಂಡರ್ ವರ್ಷದಲ್ಲಿ ಒಟ್ಟು 1,676 ರನ್ ಗಳಿಸಿದರು. ಈ ವರ್ಷ ಭರ್ಜರಿ ಫಾರ್ಮ್‌ನಲ್ಲಿರುವ ರಿಝ್ವಾನ್ ಈಗಾಗಲೇ 1 ಶತಕ ಹಾಗೂ 9 ಅರ್ಧಶತಕಗಳನ್ನು ಗಳಿಸಿದ್ದಾರೆ. 2015ರಲ್ಲಿ ಗೇಲ್ ಅವರು 3 ಶತಕ ಹಾಗೂ 10 ಅರ್ಧಶತಕಗಳನ್ನು ಗಳಿಸಿದ್ದರು. ಫೆಬ್ರವರಿಯಲ್ಲಿ ಲಾಹೋರ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಔಟಾಗದೆ 104 ರನ್ ಗಳಿಸುವುದರೊಂದಿಗೆ ಈ ವರ್ಷವನ್ನು ಆರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News