​ಹರ್ಯಾಣ: ಸ್ಥಳೀಯರಿಗೆ ಶೇ.75 ಉದ್ಯೋಗ ಮೀಸಲಾತಿಗಾಗಿ ಸರಕಾರದ ಕಾನೂನು

Update: 2021-11-07 16:06 GMT

ಚಂಡಿಗಡ,ನ.7: ರಾಜ್ಯದ ಖಾಸಗಿ ಕ್ಷೇತ್ರದಲ್ಲಿ ಸ್ಥಳೀಯರಿಗೆ ಶೇ.75ರಷ್ಟು ಉದ್ಯೋಗ ಮೀಸಲಾತಿಗಾಗಿ ಹರ್ಯಾಣ ಸರಕಾರವು ಶನಿವಾರ ಕಾನೂನನ್ನು ತಂದಿದೆ.

ಹರ್ಯಾಣದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ಜನನಾಯಕ ಜನತಾ ಪಾರ್ಟಿ (ಜೆಜೆಪಿ)ಯು 2019ರ ವಿಧಾನಸಭಾ ಚುನಾವಣೆ ಸಂದರ್ಭ ನೀಡಿದ್ದ ಪ್ರಮುಖ ಭರವಸೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಸೇರಿತ್ತು.

ರಾಜ್ಯದ ಸಮ್ಮಿಶ್ರ ಸರಕಾರವು ಕಳೆದ ವರ್ಷದ ನವಂಬರ್‌ನಲ್ಲಿ ಹರ್ಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆಯನ್ನು ಅಂಗೀಕರಿಸಿದ್ದು,ರಾಜ್ಯಪಾಲ ಸತ್ಯದೇವ ನಾರಾಯಣ ಆರ್ಯ ಅವರು ಮಾರ್ಚ್‌ನಲ್ಲಿ ಅದಕ್ಕೆ ಅನುಮೋದನೆ ನೀಡಿದ್ದರು.

ಮೀಸಲಾತಿಯನ್ನು ಒದಗಿಸುವ ಕಾನೂನು 2022,ಜನವರಿ 15ರಿಂದ ಜಾರಿಗೊಳ್ಳಲಿದೆ ಎಂದು ಹರ್ಯಾಣ ಸರಕಾರವು ಶನಿವಾರ ತಿಳಿಸಿದೆ.

ಸ್ಥಳೀಯ ಉದ್ಯೋಗ ಕಾಯ್ದೆಯು ಇಂದಿನಿಂದಲೇ ಬಂದಿದೆ. ಖಾಸಗಿ ಉದ್ಯಮಗಳು ತಮ್ಮ ಉದ್ಯೋಗಿಗಳ ಡಾಟಾವನ್ನು ಸರಕಾರಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು 2022,ಜ.15 ಕೊನೆಯ ದಿನಾಂಕವಾಗಿದೆ ಎಂದು ಜೆಜೆಪಿ ವಕ್ತಾರ ದೀಪಕಮಲ ಸಹರಾನ್ ಅವರು ಶನಿವಾರ ಟ್ವೀಟಿಸಿದ್ದರು.

ಹರ್ಯಾಣದಲ್ಲಿ ಜನಿಸಿರುವವರು ಅಥವಾ ಕನಿಷ್ಠ 15 ವರ್ಷಗಳ ಕಾಲ ರಾಜ್ಯದಲ್ಲಿ ವಾಸವಾಗಿರುವವರು ಮೀಸಲಾತಿ ಕಾನೂನಿನ ಲಾಭವನ್ನು ಪಡೆಯಲಿದ್ದಾರೆ.

ಹರ್ಯಾಣದಲ್ಲಿ ತಮಗೆ ಸೂಕ್ತ ಅಭ್ಯರ್ಥಿಗಳು ದೊರೆಯದಿದ್ದರೆ ಕಂಪನಿಗಳು ಹೊರಗಿನವರನ್ನು ನೇಮಕ ಮಾಡಿಕೊಳ್ಳಬಹುದು. ಆದರೆ ಅವು ಈ ಬಗ್ಗೆ ಸರಕಾರಕ್ಕೆ ಮಾಹಿತಿಯನ್ನು ನೀಡಬೇಕಾಗುತ್ತದೆ.

ಒಟ್ಟು ಮಾಸಿಕ ವೇತನ 30,000 ರೂ.ವರೆಗಿನ ಹುದ್ದೆಗಳಿಗೆ ಈ ಕಾಯ್ದೆಯು ಅನ್ವಯಿಸುತ್ತದೆ. ಕರಡು ಮಸೂದೆಯಲ್ಲಿ ವೇತನ ಮಿತಿಯನ್ನು 50,000 ರೂ.ಗಳಿಗೆ ನಿಗದಿಗೊಳಿಸಲಾಗಿತ್ತು. ನೂತನ ಕಾನೂನು ಹರ್ಯಾಣದಲ್ಲಿಯ ಕಂಪನಿಗಳು,ಸಹಕಾರ ಸಂಘಗಳು, ಟ್ರಸ್ಟ್‌ಗಳು,ಸೀಮಿತ ಹೊಣೆಗಾರಿಕೆಯ ಸಹಭಾಗಿತ್ವದ ಸಂಸ್ಥೆಗಳು ಮತ್ತು ಪಾಲುದಾರಿಕೆ ಸಂಸ್ಥೆಗಳಿಗೆ ಅನ್ವಯಿಸುತ್ತದೆ.

ಖಾಸಗಿ ಕ್ಷೇತ್ರದಲ್ಲಿ ಸ್ಥಳೀಯರಿಗೆ ಶೇ.75ರಷ್ಟು ಉದ್ಯೋಗಗಳನ್ನು ಮೀಸಲಿರಿಸುವ ಹರ್ಯಾಣ ಸರಕಾರದ ನಿರ್ಧಾರವನ್ನು ಟೀಕಿಸಿರುವ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಒಕ್ಕೂಟವು,ಇದು ಕೈಗಾರಿಕಾ ಅಭಿವೃದ್ಧಿ ಮತ್ತು ಖಾಸಗಿ ಹೂಡಿಕೆಗೆ ವಿನಾಶಕಾರಿಯಾಗಲಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News