ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ 16 ಜಾಮಿಯಾ ಸಂಶೋಧಕರ ಸೇರ್ಪಡೆ
ಹೊಸದಿಲ್ಲಿ,ನ.7: ಸ್ಟ್ಯಾನ್‌ಫರ್ಡ್ ವಿವಿಯು ಸಿದ್ಧಪಡಿಸಿರುವ ವಿಶ್ವದ ಉನ್ನತ ಶೇ.2 ಹೆಚ್ಚು ಉಲ್ಲೇಖಿತ ವಿಜ್ಞಾನಿಗಳ ಪಟ್ಟಿಯಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ (ಜೆಎಂಐ) ವಿವಿಯ 16 ಸಂಶೋಧಕರು ಸ್ಥಾನ ಪಡೆದಿದ್ದಾರೆ.
ಇದು ಜಾಮಿಯಾ ಕುರಿತು ಸರಕಾರದ ಗ್ರಹಿಕೆಗೆ ಬಲವಾದ ಹೊಡೆತವನ್ನು ನೀಡಿದೆ.
ವೃತ್ತಿಜೀವನವನ್ನು ಆಧರಿಸಿರುವ ಮೊದಲ ಪಟ್ಟಿಯಲ್ಲಿ ಎಂಟು ಜಾಮಿಯಾ ಪ್ರೊಫೆಸರ್‌ಗಳಿದ್ದರೆ 2020ನೇ ಸಾಲಿನ ಸಾಧನೆಯನ್ನು ಪರಿಗಣಿಸಿರುವ ಎರಡನೇ ಪಟ್ಟಿಯಲ್ಲಿ ಜಾಮಿಯಾದ 16 ವಿಜ್ಞಾನಿಗಳಿದ್ದಾರೆ.
ಇಮ್ರಾನ್ ಅಲಿ,ಅತಿಕುರ್ ರಹಮಾನ್,ಅಂಜಾನ್ ಎ.ಸೇನ್,ಹಸೀಬ್ ಅಹ್ಸಾನ್,ಸುಷಾಂತ ಸಿ.ಘೋಷ್,ಎಸ್.ಅಹ್ಮದ್,ತವುಕೀರ್ ಅಹ್ಮದ್ ಮತ್ತು ಮುಹಮ್ಮದ್ ಇಮ್ತಿಯಾಜ್ ಅವರ ಹೆಸರುಗಳು ಎರಡೂ ಪಟ್ಟಿಗಳಲ್ಲಿದ್ದರೆ,ಎರಡನೇ ಪಟ್ಟಿಯಲ್ಲಿ ಅಬಿದ್ ಹಲೀಂ,ರಫೀಕ್ ಅಹ್ಮದ್,ತಬ್ರೇಝ್ ಆಲಂ ಖಾನ್,ಮುಹಮ್ಮದ್ ಜಾವೇದ್,ಅರ್ಷದ್ ನೂರ್ ಸಿದ್ದಿಕಿ,ಮುಷೀರ್ ಅಹ್ಮದ್,ಫೈಝಾನ್ ಅಹ್ಮದ್ ಮತ್ತು ತಾರಿಕುಲ್ ಇಸ್ಲಾಂ ಅವರ ಹೆಸರುಗಳು ಹೆಚ್ಚುವರಿಯಾಗಿ ಸೇರ್ಪಡೆಗೊಂಡಿವೆ.
ಸ್ಟ್ಯಾನ್‌ಫರ್ಡ್ ವಿವಿಯ ಪಟ್ಟಿಯಲ್ಲಿ 1,59,683 ವಿಜ್ಞಾನಿಗಳಿದ್ದು,ಈ ಪೈಕಿ ಸುಮಾರು 1,500 ಭಾರತೀಯರಿದ್ದಾರೆ.
ಶಿಕ್ಷಣ ಸಚಿವಾಲಯವು 2020ರಲ್ಲಿ ಬಿಡುಗಡೆಗೊಳಿಸಿದ್ದ 40 ಕೇಂದ್ರಿಯ ವಿವಿಗಳ ಪಟ್ಟಿಯಲ್ಲಿಯೂ ಜೆಎಂಐ ವಿವಿಯು ಜೆನ್‌ಯು ಮತ್ತು ಅಲಿಗಡ ಮುಸ್ಲಿಂ ವಿವಿಯನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ಪಡೆದಿತ್ತು. ಜೆಎಂಐ ವಿವಿಯು ಟೈಮ್ಸ್ ಹೈಯರ್ ಎಜ್ಯುಕೇಷನ್ ವರ್ಲ್ಡ್ ಯುನಿವರ್ಸಿಟಿ ರ್ಯಾಂಕಿಂಗ್‌ನಲ್ಲಿಯೂ 2020ರಲ್ಲಿ ಭಾರತೀಯ ಶಿಕ್ಷಣ ಸಂಸ್ಥೆಗಳಲ್ಲಿ 19ರಿಂದ 12ನೇ ಸ್ಥಾನಕ್ಕೆ ಭಡ್ತಿ ಪಡೆದಿತ್ತು.
ಕಳೆದ ಎರಡು ದಶಕಗಳಲ್ಲಿ ಜಾಮಿಯಾ ತನ್ನ ವಿರುದ್ಧದ ಕೋಮುವಾದಿ ವ್ಯಾಖ್ಯಾನದ ವಿರುದ್ಧ ಹೋರಾಡಿದೆ ಮತ್ತು ಹಿಂಸಾತ್ಮಕ ಕ್ರಮಗಳನ್ನೂ ಎದುರಿಸಿದೆ.
ಬಿಜೆಪಿ ಸರಕಾರ ಮತ್ತು ಅದರ ಬೆಂಬಲಿಗರು ಆಗಾಗ್ಗ ಜಾಮಿಯಾ ವಿವಿಯನ್ನು ಮತ್ತು ಅದರ ವಿದ್ಯಾರ್ಥಿಗಳನ್ನು ‘ರಾಷ್ಟ್ರ ವಿರೋಧಿ’ ಎಂದು ಬಣ್ಣಿಸುತ್ತಲೇ ಬಂದಿದ್ದಾರೆ.
ಪದವಿ ಫಲಿತಾಂಶಗಳು,ಬೋಧನೆ,ಕಲಿಕೆ ಮತ್ತು ಸಂಪನ್ಮೂಲಗಳು,ಪ್ರಭಾವ ಮತ್ತು ಒಳಗೊಳ್ಳುವಿಕೆಯಂತಹ ಮಾನದಂಡಗಳಿಗೆ ಹೋಲಿಸಿದರೆ ಜಾಮಿಯಾವು ವಿವಿಗಳ ಪೈಕಿ ಒಟ್ಟಾರೆ ಅಗ್ರಸ್ಥಾನವನ್ನು ಹೊಂದಿದ್ದರೂ ‘ಗ್ರಹಿಕೆ’ಯ ಮಾನದಂಡಕ್ಕೆ ಸಂಬಂಧಿಸಿದಂತೆ ದಿಲ್ಲಿ ವಿವಿಗೆ ಹೋಲಿಸಿದರೆ ಕಡಿಮೆ ಅಂಕಗಳನ್ನು ಗಳಿಸಿತ್ತು ಎಂದು ಅಂಕಣಕಾರ ಮೆಹ್ತಾಬ್ ಆಲಂ ಅವರು ಹಿಂದೆ ಸುದ್ದಿ ಜಾಲತಾಣ The Wire ನಲ್ಲಿ ಪ್ರಕಟಿಸಿದ್ದ ವಿಶ್ಲೇಷಣಾ ವರದಿಯಲ್ಲಿ ಬೆಟ್ಟು ಮಾಡಿದ್ದರು.
ಸಂವಿಧಾನದ ವಿಧಿ 14ರ ಕುರಿತು ನಡೆಸಿದ್ದ ವಿಶ್ಲೇಷಣೆಯಲ್ಲಿ ಅಲಿಶಾನ್ ಜಾಫ್ರಿ ಅವರು ಮೋದಿ ಸರಕಾರವು 2017 ಮತ್ತು 2018ರ ನಡುವೆ ಜಾಮಿಯಾದ ಅಲ್ಪಸಂಖ್ಯಾತ ಸ್ಥಾನಮಾನವನ್ನು ಕಿತ್ತುಕೊಳ್ಳಲು ನಡೆಸಿದ್ದ ನಿರಂತರ ಪ್ರಯತ್ನಗಳನ್ನು ಬೆಟ್ಟು ಮಾಡಿದ್ದರು. ಆ ಸಂದರ್ಭದಲ್ಲಿ ಯಾವುದೇ ವಕೀಲರು ಜಾಮಿಯಾವನ್ನು ಪ್ರತಿನಿಧಿಸಿರಲಿಲ್ಲ.